ADVERTISEMENT

ಪಠ್ಯಪುಸ್ತಕ ಸಾಗಣೆ ವೆಚ್ಚ ಕೇವಲ ರೂ 1

15 ವರ್ಷದಿಂದ ಪರಿಷ್ಕರಣೆ ಆಗದ ಮೊತ್ತ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 19:59 IST
Last Updated 1 ಜೂನ್ 2013, 19:59 IST

ಉಡುಪಿ: ಉಚಿತ ಪಠ್ಯ ಪುಸ್ತಕವನ್ನು ಶಾಲೆಗಳಿಗೆ ಸಾಗಿಸಲು ಸರ್ಕಾರ ಪ್ರತಿ ವಿದ್ಯಾರ್ಥಿಗೆ ಕೇವಲ ಒಂದು ರೂಪಾಯಿ ನೀಡುತ್ತಿದ್ದು, ಹೆಚ್ಚುವರಿ ಹಣವನ್ನು ಅಧಿಕಾರಿಗಳು ಶಿಕ್ಷಕರು ಭರಿಸುವ ಅನಿವಾರ್ಯತೆ ಎದುರಾಗಿದೆ.

ಪ್ರತಿ ವಿದ್ಯಾರ್ಥಿಗೆ ಪಠ್ಯಪುಸ್ತಕ ವಿತರಿಸಲು ಒಂದು ರೂಪಾಯಿ ಎಂದು 15 ವರ್ಷಗಳ ಹಿಂದೆ ಶಿಕ್ಷಣ ಇಲಾಖೆ ನಿಗದಿ ಮಾಡಿತ್ತು. ಪುಸ್ತಕ ವಿತರಣೆಯ ಮೊತ್ತವನ್ನು ಪರಿಷ್ಕರಿಸಿ ಎಂದು ಅಧಿಕಾರಿಗಳು ಮನವಿ ಮಾಡಿದರೂ ಸರ್ಕಾರ ಈ ವರೆಗೆ ಸ್ಪಂದಿಸಿಲ್ಲ.

ಜಿಲ್ಲೆಗೆ ಅಗತ್ಯ ಇರುವ ಪಠ್ಯಪುಸ್ತಕಗಳನ್ನು ಒಂದೇ ಬಾರಿ ಕಳುಹಿಸಲೂ ಇಲಾಖೆ ಕ್ರಮ ಕೈಗೊಳ್ಳದಿರುವುದು ಸಮಸ್ಯೆ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.

ಸರ್ಕಾರ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ವಿತರಿಸುತ್ತಿದೆ. ಆಯಾ ಜಿಲ್ಲೆಯ ಉಪ ನಿರ್ದೇಶಕರ ಕಚೇರಿ ಮೂಲಕ ಎಲ್ಲ ಶಾಲೆಗಳಿಗೆ ಪುಸ್ತಕ ತಲುಪಿಸಲಾಗುತ್ತಿದೆ. ಪುಸ್ತಕ ತಲುಪಿಸಲು ಪ್ರತಿ ವಿದ್ಯಾರ್ಥಿಗೆ ಸರ್ಕಾರ ಒಂದು ರೂಪಾಯಿ ನೀಡುತ್ತಿದೆ. ಒಟ್ಟು ವಿದ್ಯಾರ್ಥಿಗಳನ್ನು ಲೆಕ್ಕಹಾಕಿ ಪುಸ್ತಕ ವಿತರಣೆಯ ಮೊತ್ತವನ್ನು ನೀಡಲಾಗುತ್ತದೆ. ಇದೇ ಹಣದಲ್ಲಿ ಅಧಿಕಾರಿಗಳು ಎಲ್ಲ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ವಿತರಿಸಬೇಕಿದೆ. ಆದರೆ ಈ ಮೊತ್ತ ಸಾಗಣೆ ವೆಚ್ಚಕ್ಕೆ ಸಾಕಾಗುತ್ತಿಲ್ಲ. ಹೆಚ್ಚುವರಿ ಹಣವನ್ನು ಅಧಿಕಾರಿಗಳು- ಶಿಕ್ಷಕರೇ ಭರಿಸುವ ಅನಿವಾರ್ಯತೆ ಎದುರಾಗಿದೆ.

ಶೈಕ್ಷಣಿಕ ಜಿಲ್ಲೆಯೊಂದಕ್ಕೆ ಅಗತ್ಯ ಇರುವ ಒಟ್ಟು ಪುಸ್ತಕವನ್ನು ಇಲಾಖೆ ಒಂದೇ ಬಾರಿ ಪೂರೈಕೆ ಮಾಡುತ್ತಿಲ್ಲ. ಹಂತ- ಹಂತವಾಗಿ ಹಲವು ಕಂತುಗಳಲ್ಲಿ ಪುಸ್ತಕವನ್ನು ನೀಡುತ್ತಿದೆ. ಅಗತ್ಯ ಇರುವ ಎಲ್ಲ ಪುಸ್ತಕವನ್ನು ಒಂದೇ ಬಾರಿ ವಿತರಣೆ ಮಾಡಿದರೆ, ಒಮ್ಮೆಲೆ ವಾಹನವನ್ನು ಬಾಡಿಗೆಗೆ ಪಡೆದು  ಎಲ್ಲ ಶಾಲೆಗಳಿಗೆ ಒಂದೇ ಬಾರಿಗೆ ಪುಸ್ತಕವನ್ನು ತಲುಪಿಸಬಹುದು.

ಈ ರೀತಿ ಮಾಡಿದರೆ ಸರ್ಕಾರ ನೀಡುವ ವಿತರಣಾ ವೆಚ್ಚ ಮತ್ತು ಅಸಲಿ ಸಾಗಣೆ ವೆಚ್ಚವನ್ನು ಸ್ವಲ್ಪವಾದರೂ ಸರಿದೂಗಿಸಬಹುದು. ಹಂತ ಹಂತವಾಗಿ ಸರ್ಕಾರ ಪುಸ್ತಕವನ್ನು ಶೈಕ್ಷಣಿಕ ಜಿಲ್ಲೆಗಳಿಗೆ ಕಳುಹಿಸುತ್ತದೆ. ಆದ್ದರಿಂದ ಶಾಲೆಗಳಿಗೆ ಪುಸ್ತಕ ಸಾಗಿಸಲು ಹಲವು ಬಾರಿ ವಾಹನ ಬಾಡಿಗೆ ಪಡೆಯಬೇಕಾಗುತ್ತದೆ. ಇದರಿಂದ ಸಾಗಣೆ ವೆಚ್ಚವೂ ಹೆಚ್ಚಾಗುತ್ತಿದೆ.

`ಹಂತ ಹಂತವಾಗಿ ಪುಸ್ತಕ ಪೂರೈಕೆ ಆಗುವುದರಿಂದ ಸಕಾಲಕ್ಕೆ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ತೊಂದರೆ ಆಗುತ್ತಿದೆ. ಅಲ್ಲದೆ ನಿರ್ದಿಷ್ಟ ತರಗತಿಯ ಎಲ್ಲ ಪುಸ್ತಕಗಳೂ ಒಂದೇ ಬಾರಿ ಬರುವುದಿಲ್ಲ. ಯಾವುದಾದರೂ ಒಂದು ವಿಷಯದ ಪುಸ್ತಕ ಬಾರದಿದ್ದರೂ ಆ ಪುಸ್ತಕ ಬಂದ ನಂತರ ಮತ್ತೆ ಸಂಬಂಧಿಸಿದ ಶಾಲೆಗಳಿಗೆ ತಲುಪಿಸಬೇಕಾಗುತ್ತದೆ. ಒಂದು ರೂಪಾಯಿ ಸಾಗಣೆ ವೆಚ್ಚ ಅಸಲಿ ವೆಚ್ಚಕ್ಕೆ ತಾಳೆಯಾಗುವುದಿಲ್ಲ' ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

`ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಥವಾ ಸ್ಥಳೀಯ ಶಿಕ್ಷಣ ಸಂಪನ್ಮೂಲ ಕೇಂದ್ರಕ್ಕೆ ಪುಸ್ತಕಗಳನ್ನು ಕಳುಹಿಸುತ್ತಾರೆ. ಅಲ್ಲಿಂದ ಪುಸ್ತಕವನ್ನು ಶಾಲೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿರುತ್ತದೆ ಸ್ವಂತ ಖರ್ಚಿನಿಂದ ನಾವು ಪುಸ್ತಕವನ್ನು ತಂದು ವಿದ್ಯಾರ್ಥಿಗಳಿಗೆ ನೀಡಬೇಕಾಗಿದೆ. ಪುಸ್ತಕಕ್ಕಾಗಿ ಹಲವು ಬಾರಿ ಓಡಾಡಬೇಕಾಗಿದೆ' ಎಂದು ಶಿಕ್ಷಕರು ಅಳಲು ತೋಡಿಕೊಳ್ಳುತ್ತಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಎಸ್.ಆರ್. ಉಮಾಶಂಕರ್ ಅವರನ್ನು ದೂರವಾಣಿ ಮೂಲಕಸಂಪರ್ಕಿಸಲು ಯತ್ನಿಸಿದರೂ ಅವರು ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.