ಬೆಂಗಳೂರು: `ಪ್ರಜಾವಾಣಿ', `ಡೆಕ್ಕನ್ ಹೆರಾಲ್ಡ್' ಮತ್ತು `ಉದಯವಾಣಿ' ಪತ್ರಿಕೆಗಳಿಗೆ ಮೂರು ವರ್ಷ ಜಾಹೀರಾತು ನೀಡಬಾರದು. ಪತ್ರಿಕೆಗಳಿಗೆ ಗರಿಷ್ಠ ವಾಗ್ದಂಡನೆ ವಿಧಿಸಬೇಕು ಎಂದು ವಿಧಾನಸಭೆಯ ಹಕ್ಕು ಬಾಧ್ಯತಾ ಸಮಿತಿ ಮಾಡಿರುವ ಶಿಫಾರಸಿನಲ್ಲಿ ಪತ್ರಿಕೆಗಳನ್ನು ಬ್ಲಾಕ್‌ಮೇಲ್ ಮಾಡುವ ತಂತ್ರ ಅಡಗಿದ್ದು, ಇದನ್ನು ತಿರಸ್ಕರಿಸಬೇಕು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜಿ.ಎನ್. ನಾಗರಾಜ್ ಮತ್ತು ವಿ.ಜೆ.ಕೆ. ನಾಯರ್ ಆಗ್ರಹಿಸಿದರು.
ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಸ್ಥರು ಮಾಡುವ ಭ್ರಷ್ಟಾಚಾರಗಳನ್ನು ಬಯಲು ಮಾಡಿ, ಜನಸಾಮಾನ್ಯರ ಹಿತಾಸಕ್ತಿ ಕಾಪಾಡುವುದು ಪತ್ರಿಕೆಗಳ ಧರ್ಮ.
ಅಂತೆಯೇ ಪತ್ರಿಕೆಗಳೂ ಮೂವರು ಶಾಸಕರು ತಮ್ಮ ಗುತ್ತಿಗೆದಾರರಿಗೆ ಅನುಕೂಲವಾಗುವ ಹಾಗೆ ಕಾಮಗಾರಿ ಗಳ ಅಂದಾಜನ್ನು ಅಕ್ರಮವಾಗಿ ತಯಾರಿಸಿರುವ ಕುರಿತಾಗಿ ಸಿಎಜಿ ವರದಿಯಲ್ಲಿ ಉಲ್ಲೇಖಿಸಿದ್ದ ಅಂಶಗಳನ್ನು ಪ್ರಕಟಿಸಿವೆ. ತಾವು ಮಾಡುವ ಭ್ರಷ್ಟಾಚಾರವನ್ನು ಪತ್ರಿಕೆಗಳು ಬಯಲಿಗೆ ಎಳೆಯಬಾರದು ಎಂಬ ಧೋರಣೆ ವಾಗ್ದಂಡನೆ ವಿಧಿಸಿರುವ ಹಿಂದೆ ಇದೆ. ಇದನ್ನು ಮಾನ್ಯ ಮಾಡಬಾರದು ಎಂದು ಒತ್ತಾಯಿಸಿದರು.
ಜಾಹೀರಾತು, ಪತ್ರಿಕಾ ಸೂಚನೆ ಮತ್ತಿತರ ಸೌಲಭ್ಯಗಳನ್ನು ಸರ್ಕಾರ ಹಾಗೂ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟ ಯಾವುದೇ ಸಂಸ್ಥೆಗಳಿಂದ ನೀಡಬಾರದು ಎಂದು ಸಮಿತಿ ಮಾಡಿರುವ ಶಿಫಾರಸು ಸರಿಯಲ್ಲ. ಈ ನೆಪದಲ್ಲಿ ಪತ್ರಿಕೆಗಳನ್ನು ಸರ್ಕಾರದ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಯಸುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾ ಸ್ವಾತಂತ್ರ್ಯವನ್ನೇ ಕಸಿದು ಕೊಳ್ಳುವ ಹುನ್ನಾರ ಸಮಿತಿಯ ಶಿಫಾರಸಿನಲ್ಲಿ ಇದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದ್ದು, ಪತ್ರಿಕೆಗಳ ಧ್ವನಿ ಅಡಗಿಸುವ ಉದ್ದೇಶ ಹೊಂದಿರುವ ಸಮಿತಿಯ ವರದಿಯನ್ನು ಪ್ರತಿಯೊಬ್ಬರೂ ಖಂಡಿಸಬೇಕು ಎಂದರು.
ಶಾಸಕರಾದ ಬಿಜೆಪಿಯ ಎಸ್. ಮುನಿರಾಜು, ಕಾಂಗ್ರೆಸ್‌ನ ಎನ್.ಎ. ಹ್ಯಾರಿಸ್ ಮತ್ತು ಕೆ.ಜೆ.ಜಾರ್ಜ್ ಅವರ ಹೆಸರನ್ನು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೆ.ಜೆ. ಜಾರ್ಜ್ ಅವರು ಗೃಹ ಖಾತೆ ನಿರ್ವಹಿಸುತ್ತಿದ್ದಾರೆ. ಸಮಿತಿಯ ಶಿಫಾರಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾನ್ಯ ಮಾಡಲು ಅವಕಾಶ ನೀಡದೆ, ತಪ್ಪಿತಸ್ಥರ ವಿರುದ್ಧ ಪಕ್ಷಭೇದವಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.