ADVERTISEMENT

ಪರಶುರಾಮ ವಾಘ್ಮೋರೆಗೆ ಲಿಂಗಸುಗೂರು ನಂಟು

​ಪ್ರಜಾವಾಣಿ ವಾರ್ತೆ
Published 14 ಜೂನ್ 2018, 17:23 IST
Last Updated 14 ಜೂನ್ 2018, 17:23 IST
ಪರಶುರಾಮ ವಾಘ್ಮೋರೆಗೆ ಲಿಂಗಸುಗೂರು ನಂಟು
ಪರಶುರಾಮ ವಾಘ್ಮೋರೆಗೆ ಲಿಂಗಸುಗೂರು ನಂಟು   

ಲಿಂಗಸುಗೂರು (ರಾಯಚೂರು ಜಿಲ್ಲೆ): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ ಅಶೋಕ ವಾಘ್ಮೋರೆ  2010ರಲ್ಲಿ ಲಿಂಗಸುಗೂರು ವಿಸಿಬಿ ಪದವಿ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದು ಬಹಿರಂಗಗೊಂಡಿದೆ.

ಪರಶುರಾಮ ಕುಟುಂಬ ವ್ಯಾಪಾರಕ್ಕಾಗಿ ಮಾನ್ವಿ ಪಟ್ಟಣದಲ್ಲಿ ನೆಲೆಸಿತ್ತು. ಪರಶುರಾಮ ಅಲ್ಲಿನ ಇಸ್ಲಾಮ್‌ ನಗರದ ಅಲ್‌ಪುರ್‌ಖಾನ್‌ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದ. ಮಾನ್ವಿ ಕಲ್ಮಠ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿ.ಕಾಂ ಪ್ರಥಮ ವರ್ಷ ಅಭ್ಯಾಸ ಮಾಡಿದ ಎಂದು ಶಿಕ್ಷಣ ಇಲಾಖೆ ದಾಖಲಾತಿಗಳಿಂದ ತಿಳಿದು ಬಂದಿದೆ.

ಬಿ.ಕಾಂ 2ನೇ ವರ್ಷಕ್ಕೆ 2010ರಲ್ಲಿ ಲಿಂಗಸುಗೂರು ವಿಸಿಬಿ ಕಾಲೇಜಿನಲ್ಲಿ ಪ್ರವೇಶ ಪಡೆದಿರುವುದು ದಾಖಲೆಗಳಿಂದ ತಿಳಿದು ಬರುತ್ತದೆ. ಆದರೆ, 2ನೇ ವರ್ಷದ ಅಧ್ಯಯನಕ್ಕೆ ಹಾಜರಾಗದೆ, ವರ್ಗಾವಣೆ ಪತ್ರವನ್ನೂ ನೀಡದೆ ಹೋಗಿರುವುದು ಶಿಕ್ಷಣ ಮೊಟಕುಗೊಳಿಸಿರುವುದನ್ನು ಸಾಕ್ಷೀಕರಿಸುತ್ತದೆ.

ADVERTISEMENT

‘ಪರಶುರಾಮ ನಮ್ಮ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಿದ್ದರು. ವರ್ಗಾವಣೆ ಪತ್ರ ತಂದುಕೊಡಲು ತಿಳಿಸಿದ್ದರೂ ಮತ್ತೆ ಕಾಲೇಜಿಗೆ ಬರಲಿಲ್ಲ. ಹೀಗಾಗಿ ಅವರ ನಡತೆ ಅಥವಾ ವೈಯಕ್ತಿಕ ಪರಿಚಯ ಕಾಲೇಜಿನಲ್ಲಿ ಯಾರಿಗೂ ಇಲ್ಲ’ ಎಂದು  ಪ್ರಾಚಾರ್ಯ ಪಿ.ಜಗದೀಶ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.