ADVERTISEMENT

ಪಾಕಿಸ್ತಾನಿಯರಂತೆ ಕಾಂಗ್ರೆಸ್‌ ನಾಯಕರ ಮಾತು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST
ನಗರದ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಬಾಲಕಿಯೊಬ್ಬಳು ಪೋಸ್ಟರ್‌ ಹಿಡಿದು ಸಂಭ್ರಮಿಸಿದ್ದು ಹೀಗೆ –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್
ನಗರದ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಬಾಲಕಿಯೊಬ್ಬಳು ಪೋಸ್ಟರ್‌ ಹಿಡಿದು ಸಂಭ್ರಮಿಸಿದ್ದು ಹೀಗೆ –ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್   

ಬೆಂಗಳೂರು: ‘ಕಾಶ್ಮೀರದ ಸ್ವಾತಂತ್ರ್ಯಕ್ಕೆ (ಆಜಾದಿ) ಧ್ವನಿಗೂಡಿಸಿರುವ ಕಾಂಗ್ರೆಸ್‌ ನಾಯಕರು ಪ್ರತ್ಯೇಕತಾವಾದಿಗಳು ಮತ್ತು ಪಾಕಿಸ್ತಾನಿಯರ ಧಾಟಿಯಲ್ಲಿ ಮಾತನಾಡಲಾರಂಭಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದರು.

ನಗರದ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ಸುದೀರ್ಘ ಅವಧಿ ದೇಶದ ಆಡಳಿತ ನಡೆಸಿದ ಪಕ್ಷದ ನಾಯಕರು ನಾಚಿಕೆ ಇಲ್ಲದಂತೆ, ದೇಶದ ಬಗ್ಗೆ ತಮ್ಮ ನಿಲುವು ಬದಲಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

‘ಕಾಶ್ಮೀರಕ್ಕೆ ಗರಿಷ್ಠ ಸ್ವಾಯುತ್ತತೆ ನೀಡಬೇಕು ಇಲ್ಲವಾದರೆ ದೇಶಕ್ಕೇ ಗಂಡಾಂತರವಿದೆ’ ಎಂದು ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ನೀಡಿರುವ ಹೇಳಿಕೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, ‘ಕಾಶ್ಮೀರ ಉಳಿಸಿಕೊಳ್ಳಲು ಮತ್ತು ಅಲ್ಲಿನ ಮುಗ್ದ ನಾಗರಿಕರ ರಕ್ಷಣೆಗಾಗಿ ದೇಶದ ನಾನಾ ದಿಕ್ಕುಗಳ ಸಾವಿರಾರು ಯೋಧರು ಬಲಿದಾನ ಮಾಡಿದ್ದಾರೆ. ಯೋಧರ ಬಲಿದಾನವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್‌ ಹೊರಟಿರುವುದು ನಾಚಿಕೆಗೇಡು. ಇಂತಹವರಿಂದ ದೇಶಕ್ಕೆ ಒಳ್ಳೆಯದಾಗುತ್ತದೆಯೇ’ ಎಂದು ಪ್ರಶ್ನಿಸಿದರು.

ADVERTISEMENT

‘ಇದು ಸರ್ದಾರ್‌ ವಲ್ಲಭ ಭಾಯಿ ಪಟೇಲರ ಕರ್ಮಭೂಮಿ. ದೇಶದ ಏಕತೆ ಮತ್ತು ಅಖಂಡತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ದೇಶ ತುಂಡು ಮಾಡಲು ಅವಕಾಶ ನೀಡುವುದೂ ಇಲ್ಲ’ ಎಂದು ಏರುಧ್ವನಿಯಲ್ಲಿ ಪ್ರತಿಪಾದಿಸಿದರು.

‘ಕಾಶ್ಮೀರಕ್ಕೆ ಗರಿಷ್ಠ ಸ್ವಾಯುತ್ತತೆ ನೀಡಬೇಕು ಎಂಬ ಹೇಳಿಕೆಯ ಬಗ್ಗೆ ಕಾಂಗ್ರೆಸ್‌ ಪ್ರತಿಕ್ರಿಯಿಸಬೇಕು. ಬಲಿದಾನ ಮಾಡಿದ ಸೈನಿಕರ ತಾಯಂದಿರು ಮತ್ತು ಅವರ ಸಹೋದರಿಯರ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಕಾಶ್ಮೀರ ಪ್ರತ್ಯೇಕಗೊಳ್ಳಲು ಪ್ರಾಣಾರ್ಪಣೆ ಮಾಡಬೇಕಿತ್ತೆ ಎಂಬ ಅವರ ಪ್ರಶ್ನೆಗೆ ಯಾವ ಜವಾಬು ನೀಡುತ್ತೀರಿ’ ಎಂದು ಅವರು ಭಾವುಕವಾಗಿ ಕೇಳಿದರು.

ನಿರ್ದಿಷ್ಟ ದಾಳಿ ಸಹಿಸಲಿಲ್ಲ:  ‘ನಮ್ಮ ಯೋಧರು ಉಗ್ರಗಾಮಿಗಳ ನೆಲೆಗಳ ಮೇಲೆ ನಿರ್ದಿಷ್ಟ ದಾಳಿ (ಸರ್ಜಿಕಲ್‌ ಸ್ಟ್ರೈಕ್‌ ) ನಡೆಸಿ ಅವರ ಹುಟ್ಟಡಗಿಸಿದರು. ಇದು ಭಾರತಕ್ಕೆ ಹೆಮ್ಮೆಯ ವಿಚಾರ. ಆದರೆ, ಕಾಂಗ್ರೆಸಿಗರಿಗೆ ಇದನ್ನು ಸಹಿಸಲು ಆಗಲಿಲ್ಲ. ಆ ಬಳಿಕ ಕಾಂಗ್ರೆಸ್‌ ನಾಯಕರು  ಅನೇಕ ಹೇಳಿಕೆಗಳನ್ನು ನೀಡಿದ್ದಾರೆ. ನಿರ್ದಿಷ್ಟ ದಾಳಿ ಬಗ್ಗೆ ಸಿಟ್ಟಿಗೆ ಕಾರಣಗಳೇನು ಎಂಬುದನ್ನು ಅವರು ಸ್ಪಷ್ಟಪಡಿಸಬೇಕು’ ಎಂದರು.

‘ದೊಕಲಾ ವಿಚಾರದಲ್ಲಿ ಭಾರತದ ತಾಕತ್ತು ಏನು ಎಂಬುದನ್ನು ವಿಶ್ವವೇ ನೋಡಿದೆ. ಜಗತ್ತಿನ ಎಲ್ಲ ಶಕ್ತಿಶಾಲಿ ದೇಶಗಳು ಭಾರತದ ಸಾಮರ್ಥ್ಯವನ್ನು ಗೌರವದಿಂದಲೇ ನೋಡುತ್ತವೆ. ಕಾಂಗ್ರೆಸ್‌ ಪಕ್ಷ ದೊಕಲಾ ಬಗ್ಗೆಯೂ ಸುಳ್ಳು ಸುದ್ದಿಗಳನ್ನು ಹಬ್ಬಿಸಿದೆ. ಇಷ್ಟು ವರ್ಷ ಆಡಳಿದಲ್ಲಿದ್ದರೂ ದೇಶದ ವಿಚಾರದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲ. ಆ ಪಕ್ಷದಲ್ಲಿರುವ ತಿಳಿವಳಿಕಸ್ಥರಿಗೆ ಅವರ ನಾಯಕರನ್ನು ಸರಿ‌ದಾರಿಗೆ ಕರೆತರಲು ಆಗುತ್ತಿಲ್ಲ. ಅವರು ಸುಧಾರಣೆಯಾಗುವ ಯಾವುದೇ ಲಕ್ಷಣವೂ ಇಲ್ಲ’ ಎಂದು ಮೋದಿ ಹೇಳಿದರು.

‘ಯಾರೇ ಆಗಲಿ ತಪ್ಪಿದಾಗ, ಎಡವಿದಾಗ ತಮ್ಮನ್ನು ತಾವು ಸರಿಪಡಿಸಿಕೊಂಡು ಹೋಗುತ್ತಾರೆ. ಆದರೆ, ಮುಗಿಲೆತ್ತರಕ್ಕೆ ಏರಿರುವ ಅಹಂಕಾರದಿಂದಾಗಿ ಅವರು ಸರಿಯಾಗುವುದು ಕಷ್ಟ. ಹೀಗಾಗಿ ಇಂತಹ ಮಾತುಗಳನ್ನು ಆಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ದೇಶದ ಜನ ಕಾಂಗ್ರೆಸ್‌ ಪಕ್ಷದಿಂದ ಯಾವುದೇ ನಿರೀಕ್ಷೆ, ಆಸೆ, ಆಕಾಂಕ್ಷೆಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ನಿನ್ನೆ– ಮೊನ್ನೆವರೆಗೆ ಆಡಳಿತ ನಡೆಸಿದ ದೇಶದ ಆಂತರಿಕ ಮತ್ತು ರಾಷ್ಟ್ರೀಯ ಸುರಕ್ಷತೆ ವಿಚಾರವಾಗಿ ಜವಾಬ್ದಾರಿಯಿಂದ ಮಾತನಾಡಬೇಕು’ ಎಂದು ಮೋದಿ ತಿಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.