ಬೆಂಗಳೂರು: ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಇನ್ನು ಹೆಚ್ಚುದಿನ ಕಾಯಬೇಕಾಗಿಲ್ಲ. ಅರ್ಜಿ ಯಾವ ದಿನ ಸಲ್ಲಿಸಬೇಕು ಎಂಬುದು 36 ಗಂಟೆ ಒಳಗೇ ಖಾತರಿಯಾಗಲಿದೆ. ಈ ವ್ಯವಸ್ಥೆ ಜುಲೈ 2ರಿಂದ ರಾಜ್ಯದಲ್ಲಿ ಜಾರಿಗೆ ಬರಲಿದೆ.
ಬೆಂಗಳೂರು ನಗರದಲ್ಲಿ ಎರಡು ಹಾಗೂ ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ತಲಾ ಒಂದು ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಕೆಲಸ ನಿರ್ವಹಿಸುತ್ತಿವೆ. ಇಲ್ಲಿ ಅರ್ಜಿ ಸಲ್ಲಿಸಲು 15 ದಿನ ಮೊದಲೇ ಸಮಯ ಪಡೆಯಬೇಕು. ಇದರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯೇ ವಿಳಂಬವಾಗುತ್ತಿದೆ. ಅದಕ್ಕೆ ಪರಿಹಾರ ಕಲ್ಪಿಸುವ ಸಲುವಾಗಿ ಹೊಸ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ ಎಂದು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಡಾ.ಕೆ.ಜೆ.ಶ್ರೀನಿವಾಸ `ಪ್ರಜಾವಾಣಿ~ಗೆ ತಿಳಿಸಿದರು. 15 ದಿನ ಮೊದಲೇ ಸಮಯ ಪಡೆಯುವ ಅರ್ಜಿದಾರರಲ್ಲಿ ಅನೇಕರು ನಿಗದಿತ ಸಮಯಕ್ಕೆ ಅರ್ಜಿ ಸಲ್ಲಿಸುತ್ತಿಲ್ಲ. ಪ್ರತಿನಿತ್ಯ 2,650 ಮಂದಿಗೆ ಅರ್ಜಿ ಸಲ್ಲಿಸಲು ಅವಕಾಶ ಒದಗಿಸಲಾಗುತ್ತಿದೆ. ಆದರೆ, ಹಾಜರಾಗುತ್ತಿರುವವರು ಕೇವಲ 1,700 ಮಂದಿ. ಸಮಯ ಪಡೆಯುವ ಅವಧಿಯನ್ನು ಕಡಿಮೆ ಮಾಡಿದರೆ ಹೆಚ್ಚು ಜನ ಅರ್ಜಿ ಸಲ್ಲಿಸಲು ಬರಬಹುದು ಎಂಬ ವಿಶ್ವಾಸ ಇದೆ ಎಂದರು.
ಸೇವಾ ಕೇಂದ್ರ: ಮೈಸೂರು ಮತ್ತು ಗುಲ್ಬರ್ಗ ನಗರದಲ್ಲೂ ಹೊಸದಾಗಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ಇದೆ. ಗುಲ್ಬರ್ಗದಲ್ಲಿ ಮಿನಿ ಸೇವಾ ಕೇಂದ್ರ ಸ್ಥಾಪಿಸಲಾಗುವುದು. ಮೈಸೂರಿನ ಕೇಂದ್ರದ ಸ್ವರೂಪದ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.