ADVERTISEMENT

ಪೌರ ಕಾರ್ಮಿಕರಿಗೆ ದಕ್ಕದ ಸೌಕರ್ಯ: ಹೈಕೋರ್ಟ್ ಕಿಡಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST

ಬೆಂಗಳೂರು: `ಅಲ್ಲಿ ಒಳಚರಂಡಿಗಳಲ್ಲಿ ಕೂಲಿ ಕಾರ್ಮಿಕರು ಬಿದ್ದು ಸಾಯುತ್ತಿದ್ದಾರೆ, ಇಲ್ಲಿ ರಾಜಕಾರಣಿಗಳನ್ನು ಹಿಡಿಯುವವರು ಯಾರೂ ಇಲ್ಲವಾಗಿದೆ. ಒಳಚರಂಡಿಗಳನ್ನು ಶುಚಿಗೊಳಿಸುವ ಸ್ಥಳಗಳಿಗೆ ಜಲಮಂಡಳಿಯ ಆಯುಕ್ತರು ಅಥವಾ ಯಾವುದೇ ಅಧಿಕಾರಿಗಳು ಜೀವಮಾನದಲ್ಲಿ ಒಮ್ಮೆಯಾದರೂ ಭೇಟಿ ನೀಡಿದ್ದಾರಾ..?~ ಎಂದು ಹೈಕೋರ್ಟ್ ಸೋಮವಾರ ಖಾರವಾಗಿ ಪ್ರಶ್ನಿಸಿತು.

ಯಂತ್ರಗಳ ಸಹಾಯವಿಲ್ಲದೇ ಒಳಚರಂಡಿ ಶುಚಿಗೊಳಿಸುವುದರ ಕುರಿತಾಗಿ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ಈ ಹಿಂದೆ ಹೊರಡಿಸಿದ್ದ ಆದೇಶ ಇದುವರೆಗೂ ಪಾಲನೆ ಆಗದಿರುವುದು ಮುಖ್ಯ ನ್ಯಾಯಮೂರ್ತಿಗಳಾದ ವಿಕ್ರಮಜಿತ್ ಸೇನ್ ಹಾಗೂ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠದ ಕೋಪಕ್ಕೆ ಕಾರಣವಾಯಿತು.

ರಾಜ್ಯದಲ್ಲಿನ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಕನಿಷ್ಠಪಕ್ಷ ಒಂದು ಯಂತ್ರವನ್ನು ಮಂಜೂರು ಮಾಡಲು ಆರು ತಿಂಗಳ ಗಡುವನ್ನು ಕಳೆದ ಜೂನ್‌ನಲ್ಲಿ ಕೋರ್ಟ್ ನೀಡಿತ್ತು. ಜಲಮಂಡಳಿ ಕೂಡ ಆದೇಶ ಪಾಲನೆ ಮಾಡುವುದಾಗಿ ವಾಗ್ದಾನ ಮಾಡಿತ್ತು. ಆದರೆ ಇದುವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದೇ ಇದ್ದುದು ಪೀಠದ ಅಸಮಾಧಾನಕ್ಕೆ    ಕಾರಣವಾಯಿತು.

`ಹೈಕೋರ್ಟ್ ಆದೇಶವನ್ನೇ ಇಷ್ಟು ಲಘುವಾಗಿ ಪರಿಗಣಿಸುವುದೆಂದರೆ ಏನರ್ಥ. ಜೀವಮಾನದಲ್ಲಿ ಒಮ್ಮೆಯಾದರೂ ಸ್ಥಳಕ್ಕೆ ಭೇಟಿ ನೀಡಿದ್ದರೆ ಕಾರ್ಮಿಕರ ಸ್ಥಿತಿ ಅರ್ಥವಾಗುತ್ತಿತ್ತು. ಇದನ್ನು ಹೀಗೇ ಬಿಟ್ಟರೆ ಆಗುವುದಿಲ್ಲ~ ಎಂದ ಪೀಠ, ಮುಂದಿನ ವಿಚಾರಣೆ ವೇಳೆ (ಜ.31) ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆಯುಕ್ತರು ಖುದ್ದು ಹಾಜರಿರಲು ಆದೇಶಿಸಿದೆ.

ಹಿರಿಯ ವಕೀಲ ಆರ್.ಎನ್.ನರಸಿಂಹಮೂರ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

ಅರ್ಜಿ ಸಲ್ಲಿಸಿದಾಗ ದುರಂತದಲ್ಲಿ ಮರಣ ಹೊಂದಿದ ಕಾರ್ಮಿಕರ ಸಂಖ್ಯೆ 16 ಇದ್ದರೆ, ಹೈಕೋರ್ಟ್ ಆದೇಶ ಹೊರಡಿಸಿದ ಮೇಲೆ ಪುನಃ 8 ಕಾರ್ಮಿಕರು ಮೃತರಾಗಿರುವ ಕುರಿತು ಅರ್ಜಿದಾರರ ಪರ ವಕೀಲ ಪ್ರೊ. ರವಿವರ್ಮ ಕುಮಾರ್ ಪೀಠದ ಗಮನಕ್ಕೆ ತಂದರು. ಅಧಿಕಾರಿಗಳ ಕರ್ತವ್ಯಲೋಪ ಪೀಠದ ಅಸಮಾಧಾನಕ್ಕೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.