ADVERTISEMENT

ಪ್ರಚಾರಕ್ಕೆ ಮುಖಂಡರ ದಂಡು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2011, 19:30 IST
Last Updated 19 ನವೆಂಬರ್ 2011, 19:30 IST
ಪ್ರಚಾರಕ್ಕೆ ಮುಖಂಡರ ದಂಡು
ಪ್ರಚಾರಕ್ಕೆ ಮುಖಂಡರ ದಂಡು   

ಬಳ್ಳಾರಿ: ತೀವ್ರ ಸೆಣಸಾಟಕ್ಕೆ ವೇದಿಕೆಯಾಗಿರುವ ಬಳ್ಳಾರಿ ಗ್ರಾಮೀಣ ಉಪ ಚುನಾವಣೆಯ ಪ್ರಚಾರದಲ್ಲಿ ತೊಡಗಿರುವ ಸ್ಥಳೀಯ ಹಾಗೂ ರಾಜ್ಯ ಮಟ್ಟದ ಮುಖಂಡರು, ಮತದಾರನ ಮನೆಬಾಗಿಲಿಗೆ ತೆರಳಿ ಮತ ಯಾಚಿಸುತ್ತಿದ್ದಾರೆ.

ಶನಿವಾರ ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಭೇಟಿ ನೀಡಿ, ಮತದಾರರ ಮನೆಗೆ ತೆರಳಿದ ಸಚಿವರಾದ ರಾಜುಗೌಡ, ಸುರೇಶಕುಮಾರ್, ಎ.ರಾಮದಾಸ್, ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಬಿಜೆಪಿ ಪರ ಮತ ಯಾಚಿಸಿದರು.

ನಗರದ ವಿಮ್ಸ ಕ್ರೀಡಾಂಗಣಕ್ಕೆ ಬಿಜೆಪಿ ಅಭ್ಯರ್ಥಿ ಪಿ. ಗಾದಿಲಿಂಗಪ್ಪ ಅವರೊಂದಿಗೆ ಭೇಟಿ ನೀಡಿದ ಸುರೇಶ್‌ಕುಮಾರ್, ವಾಯುವಿಹಾರಕ್ಕೆ ಆಗಮಿಸಿದವರ ಮತ ಯಾಚಿಸಿದರು. ಅಲ್ಲದೇ, ಯುವಕರೊಂದಿಗೆ ಕ್ರಿಕೆಟ್ ಆಡಿ ಗಮನ ಸೆಳೆದರು. ಶೋಭಾ ಕರಂದ್ಲಾಜೆ, ಸಂಜೆ ಮಹಿಳಾ ಸಂಘಟನೆಗಳ ಸದಸ್ಯೆಯರ ಸಭೆ ಕರೆದು ಬಿಜೆಪಿ ಸರ್ಕಾರದ ಸಾಧನೆ ಕುರಿತು ವಿವರಿಸಿದರು.

ಕಾಂಗ್ರೆಸ್‌ನಿಂದ ಸಂಸದ ಅನಿಲ್‌ಲಾಡ್, ಮಾಜಿಸಚಿವ ಅಲ್ಲಂ ವೀರಭದ್ರಪ್ಪ, ಜಿ.ಎಸ್. ಆಂಜಿನೇಯುಲು ಅವರು ಅಭ್ಯರ್ಥಿ ಬಿ.ರಾಮಪ್ರಸಾದ್ ಅವರೊಂದಿಗೆ ಸಿಂಧುವಾಳ, ಕಾರೇಕಲ್ಲು, ಸಿಡಿಗಿನಮೋಳ, ಬ್ಯಾಲಚಿಂತ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿ ಮತ ಕೋರಿದರು.

ಹಗರಿ, ಪರಮದೇವನಹಳ್ಳಿ, ಯಾಳ್ಪಿ, ಕಗ್ಗಲ್ಲು ಗ್ರಾಮಗಳಿಗೆ ಕಾರ್ಯಕರ್ತರೊಂದಿಗೆ ತೆರಳಿದ ಮಾಜಿ ಸಚಿವ ಶ್ರೀರಾಮುಲು ಮನೆಮನೆಗೆ ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸಿದರು.

ಇಂದು ಖರ್ಗೆ:  ಬಿಜೆಪಿ ಮತ್ತು ಶ್ರೀರಾಮುಲು ನಡುವಿನ ಸ್ಪರ್ಧೆಯ ಸಂಪೂರ್ಣ ಲಾಭವನ್ನು ಪಡೆಯಲು ಕಾಂಗ್ರೆಸ್ ಪೂರ್ಣ ಪ್ರಮಾಣದಲ್ಲಿ ಪ್ರಯತ್ನ ನಡೆಸಿದೆ.

ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲು ಭಾನುವಾರ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದು, ಎರಡು ದಿನ ಇಲ್ಲಿಯೇ ಇದ್ದು ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಪ್ರಚಾರ ನಡೆಸಲು ನಿರ್ಧರಿಸಿದ್ದಾರೆ.

ಕೇಂದ್ರ ಸಚಿವ ವೀರಪ್ಪ ಮೊಯಿಲಿ, ಪಕ್ಷದ ಮುಖಂಡರಾದ ಸಿದ್ದರಾಮಯ್ಯ, ಮಧುಸೂದನ ಮೇಸ್ತ್ರಿ, ಹನುಮಂತರಾವ್, ಆಸ್ಕರ್ ಫರ್ನಾಂಡಿಸ್, ಮೋಟಮ್ಮ ಅವರೂ ಪ್ರಚಾರಕ್ಕೆ ಬಳ್ಳಾರಿಗೆ ಆಗಮಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT