ADVERTISEMENT

ಪ್ರಚಾರವಿಲ್ಲದೆ ಸೊರಗಿದ ಚಾಲಕರ ವಿಮೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ಹುಬ್ಬಳ್ಳಿ: ಆಟೊ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಲಾರಿ ಮತ್ತು ಬಸ್ ಚಾಲಕರ ಕ್ಷೇಮಾಭಿವೃದ್ಧಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ `ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ~ಗೆ ನಿರೀಕ್ಷಿತ ಪ್ರಮಾಣದ ಪ್ರತಿಕ್ರಿಯೆ ದೊರೆತಿಲ್ಲ. ಹೀಗಾಗಿ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಜಂಟಿ ಕಾರ್ಯದರ್ಶಿ ಸೂಚಿಸಿದ್ದಾರೆ.

ಅಸಂಘಟಿತ ವಲಯಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ `ರಾಜ್ಯ ಅಸಂಘಟಿತ ಕಾರ್ಮಿಕ ಭದ್ರತಾ ಮಂಡಳಿ~ ಮೂಲಕ ಇದನ್ನು ಅನುಷ್ಠಾನಗೊಳಿಸಲಾಗಿದೆ. ಇದರಡಿ ಆರು ತಿಂಗಳ ಒಳಗೆ ಐದು ಲಕ್ಷ ಚಾಲಕರನ್ನು ನೋಂದಾಯಿಸುವ ಗುರಿ ಇತ್ತು.

ಆದರೆ ಯೋಜನೆ ಆರಂಭವಾಗಿ ಮೂರು ತಿಂಗಳಾದರೂ ಪ್ರಗತಿ ತೀರಾ ಕಳಪೆಯಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ 2012 ಜುಲೈ 9ರಂದು ಜಾರಿಗೆ ತಂದ್ದ್ದಿದು, ಪ್ರಚಾರ ಕೊರತೆಯಿಂದ ನೆನೆಗುದಿಗೆ ಬಿದ್ದಿದೆ ಎಂದು ಕಾರ್ಮಿಕ ಇಲಾಖೆ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಏನಿದು ಯೋಜನೆ:
ಖಾಸಗಿ ವಾಹನ ಚಾಲಕರು ಅಪಘಾತಕ್ಕೀಡಾಗಿ ಸಾವಿಗೀಡಾದರೆ ಅಂಥವರ ಅವಲಂಬಿತರು ಅಥವಾ ಶಾಶ್ವತ/ ತಾತ್ಕಾಲಿಕ ಅಂಗ ನ್ಯೂನತೆಗೆ ಒಳಗಾದವರು ಈ ವಿಮಾ ಯೋಜನೆ ಪಡೆಯಲು ಅರ್ಹರು. ಈ ಸೌಲಭ್ಯ ಪಡೆಯಲು ಒಂದು ಬಾರಿ ರೂ 25 ಶುಲ್ಕ ಪಾವತಿಸಿ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಯೋಜನೆ ಸಂಪೂರ್ಣ ಉಚಿತವಾಗಿದ್ದು, ಸರ್ಕಾರವೇ ಪ್ರೀಮಿಯಂ ಪಾವತಿಸುತ್ತದೆ. ಪರಿಹಾರ ವಿಮೆ ರೂ. 2 ಲಕ್ಷ ಸಿಗಲಿದೆ.

ರಾಜ್ಯದಲ್ಲಿ ಚಾಲನಾ ಪರವಾನಗಿ ಪಡೆದ 20ರಿಂದ 70 ವರ್ಷ ವಯಸ್ಸಿನ ಚಾಲಕರು ಅರ್ಜಿ ಸಲ್ಲಿಸಲು ಅರ್ಹರು. ಹೆಸರು ನೋಂದಾಯಿಸಿದವರಿಗೆ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಗುರುತಿನ ಚೀಟಿ ನೀಡುತ್ತದೆ. ಅಪಘಾತ ಸಂಭವಿಸಿದ ಆರು ತಿಂಗಳ ಒಳಗೆ ವಿಮಾ ಮೊತ್ತ ಪಡೆಯಲು ಅರ್ಜಿ ಸಲ್ಲಿಸಬೇಕು.
ಯೋಜನೆಗೆ ಸೇರ ಬಯಸುವವರಿಗೆ ಎಲ್ಲ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿಗಳಲ್ಲಿ ಮತ್ತು ನೆಮ್ಮದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಮಾಡಲಾಗಿದೆ.

ರಾಯಲ್ ಸುಂದರಂ ಇನ್ಷುರನ್ಸ್ ವಿಮಾ ಮೊತ್ತ ನೀಡಲಿದ್ದು, ಸದಸ್ಯರ ನೋಂದಣಿ ಹೊಣೆಯನ್ನು ರಾಜ್ಯದಲ್ಲಿ ನೆಮ್ಮದಿ ಕೇಂದ್ರಗಳನ್ನು ನಿರ್ವಹಿಸುವ ಮೈಶೋರ್ ಐಟಿ ಸಲ್ಯೂಷನ್ಸ್‌ಗೆ ನೀಡಲಾಗಿದೆ. ಎಲ್ಲ ಜಿಲ್ಲೆಗಳ ಕಾರ್ಮಿಕ ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ADVERTISEMENT

`ಶೀಘ್ರವೇ ಗುರುತಿನ ಚೀಟಿ:`ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಹೆಸರು ನೋಂದಾಯಿಸಿದ ಚಾಲಕರಿಗೆ ಗುರುತಿನ ಚೀಟಿ ವಿತರಣೆ ಆರಂಭಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಈವರೆಗೆ 218 ಚಾಲಕರು ಹೆಸರು ನೋಂದಾಯಿಸಿಕೊಂಡಿದ್ದು, 73 ಮಂದಿಗೆ ಶೀಘ್ರದಲ್ಲೇ ಗುರುತಿನ ಚೀಟಿ ವಿತರಿಸಲಾಗುವುದು.

ಯೋಜನೆಗೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ಸಿಕ್ಕಿಲ್ಲ ಎನ್ನುವುದು ನಿಜ. ಈ ನಿಟ್ಟಿನಲ್ಲಿ ಅಸಂಘಟಿತ ವಲಯದ ಕಾರ್ಮಿಕ ಸಂಘಟನೆಗಳು ಹಾಗೂ ಸಾರಿಗೆ ಇಲಾಖೆ ಸಹಕಾರದಲ್ಲಿ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು~ ಎಂದು ಧಾರವಾಡ ಜಿಲ್ಲಾ ಕಾರ್ಮಿಕ  ಅಧಿಕಾರಿ ಮೊಹಮ್ಮದ್ ಅಬ್ದುಲ್ ಖಾಲಿಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.