ADVERTISEMENT

ಪ್ರಧಾನಿ ಮೋದಿಗೆ ನನ್ನನ್ನು ಕಂಡರೆ ಭಯ: ಸಿದ್ದರಾಮಯ್ಯ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 19:30 IST
Last Updated 30 ಅಕ್ಟೋಬರ್ 2017, 19:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ಪ್ರಧಾನಿ ಮೋದಿ ಅವರಿಗೆ ನನ್ನನ್ನು ಕಂಡರೆ ಭಯ. ಅದಕ್ಕೆ, ರಾಜ್ಯಕ್ಕೆ ಬಂದಾಗಲೆಲ್ಲ ನನ್ನನ್ನು ಟಾರ್ಗೆಟ್‌ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಕುಟುಕಿದರು.

‘ಬಿಜೆಪಿಯವರಿಗೆ ಕಾಂಗ್ರೆಸ್‌ ಕಂಡರೆ ಭಯವಾಗಿದೆ. ನಾನು ದುರ್ಬಲವಾಗಿದ್ದರೆ ಪದೇ ಪದೇ ನನ್ನ ಮೇಲೆ ಏಕೆ ವಾಗ್ದಾಳಿ ಮಾಡುತ್ತಿದ್ದರು? ಈಗ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಲ್ಲರೂ ಒಂದಾಗಿ ನನ್ನ ವಿರುದ್ಧ ತೊಡೆ ತಟ್ಟುತ್ತಿದ್ದಾರೆ. ಸಿದ್ದರಾಮಯ್ಯ ಎಂದರೆ ಬಿಜೆಪಿ, ಜೆಡಿಎಸ್ ಪಾಳೆಯದಲ್ಲಿ ನಡುಕ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಕಾಂಗ್ರೆಸ್‌ ವಿರುದ್ಧ ಸುಳ್ಳು ಆರೋಪ ಮಾಡಿಸುವುದಕ್ಕಾಗಿಯೇ ಆಂಧ್ರದಿಂದ ಮುರುಳೀಧರ ರಾವ್‌ ಅವರನ್ನು ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಕಳಿಸಲಾಗಿದೆ. ಬಿಜೆಪಿಯವರು ಕೊಳಕು ರಾಜಕಾರಣ ಮಾಡುವುದರಲ್ಲಿ ನಿಸ್ಸೀಮರು. ಇವರಷ್ಟು ಕೆಟ್ಟ ರಾಜಕಾರಣ ಮಾಡುವವರು ಇಡೀ ದೇಶ
ದಲ್ಲೇ ಎಲ್ಲೂ ಸಿಗುವುದಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಸಹ ಸುಳ್ಳು ಹೇಳುವುದರಲ್ಲಿ ನಿರತರಾಗಿದ್ದಾರೆ’ ಎಂದು ಟೀಕಿಸಿದರು.

ADVERTISEMENT

ನಮ್ಮ ಹತ್ತಿರ ‘ಮಿಷಿನ್‌‘ ಇಲ್ಲ: ಬಿಜೆಪಿಯ ‘ಮಿಷನ್‌–150’ ಈಗ 50ಕ್ಕೆ ಇಳಿದಿದೆ. ನಮ್ಮ ಬಳಿ ಅಂತಹ ಯಾವುದೇ ಕಾರ್ಯಕ್ರಮ ಇಲ್ಲ. ನಮ್ಮದು ಮಿಷನ್ನೂ ಅಲ್ಲ, ಮಿಷಿನ್‌ ಅಂತೂ ಇಲ್ಲವೇ ಇಲ್ಲ ಎಂದು ಹಾಸ್ಯ ಮಾಡಿದರು.

ಇನ್ನು 6 ತಿಂಗಳು ಕಾಂಗ್ರೆಸ್‌ ಸಹಿಸಿಕೊಳ್ಳಲು ಜನರಿಗೆ ಆಗುತ್ತಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಜನರಿಗೆ ಕಾಂಗ್ರೆಸ್‌ ಬೇಡ ಎಂದಾಗಿದ್ದರೆ ನಂಜನಗೂಡು ಹಾಗೂ ಗುಂಡ್ಲುಪೇಟೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಏಕೆ ಗೆಲ್ಲಿಸುತ್ತಿದ್ದರು? ಎಂದು ಪ್ರಶ್ನಿಸಿದರು.

ರೈಲು ಮಾರ್ಗ ವಿಳಂಬಕ್ಕೆ ಕೇಂದ್ರ ಸರ್ಕಾರ ಕಾರಣ: ಬೀದರ್– ಕಲಬುರ್ಗಿ ರೈಲು ಮಾರ್ಗ ವಿಳಂಬವಾಗಿರುವುದಕ್ಕೆ ಕೇಂದ್ರ ಸರ್ಕಾರವೇ ಕಾರಣ. ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದಾಗ ಯೋಜನೆಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ಮೊದಲ ಹಂತದ ಯೋಜನೆಗಳನ್ನು ಅವರೇ ಉದ್ಘಾಟಿಸಿದ್ದರು. ಮೂರೂವರೆ ವರ್ಷದಿಂದ ಸುಮ್ಮನಿದ್ದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಕಡೆಗೆ ಬೆರಳು ತೋರಿಸಿದರೆ ಹೇಗೆ? ಯಾವುದೇ ರೈಲ್ವೆ ಯೋಜನೆ ಜಾರಿಗೊಳಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದರು.

ಗುಂಡಿ ಮುಚ್ಚುವ ಗಡುವು ವಿಸ್ತರಣೆ: ಬೆಂಗಳೂರಿನಲ್ಲಿ ರಸ್ತೆಗುಂಡಿ ಮುಚ್ಚಲು ಬಿಬಿಎಂಪಿಗೆ ನೀಡಿದ್ದ ಗಡುವು ಮುಗಿದಿದೆ. ಮಳೆ ಬಂದಿದ್ದ ಕಾರಣ, ಕೆಲವೆಡೆ ಕಾಮಗಾರಿ ನಡೆಸಲು ಆಗಿಲ್ಲ. ಗಡುವನ್ನು ನ.6ಕ್ಕೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.