ADVERTISEMENT

ಪ್ರಧಾನಿ ಮೋದಿ ಮನಸ್ಸು ಮಾಡಿದರೆ ಮಹಾದಾಯಿ ನದಿ ವಿವಾದ ಇತ್ಯರ್ಥ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 10 ಜೂನ್ 2017, 11:15 IST
Last Updated 10 ಜೂನ್ 2017, 11:15 IST
ಸಿದ್ದರಾಮಯ್ಯ (ಸಾಂದರ್ಭಿಕ ಚಿತ್ರ)
ಸಿದ್ದರಾಮಯ್ಯ (ಸಾಂದರ್ಭಿಕ ಚಿತ್ರ)   

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು‌ ಮನಸ್ಸು ‌ಮಾಡಿದರೆ ಮಹಾದಾಯಿ ನದಿ ವಿವಾದ ಶೀಘ್ರ ಇತ್ಯರ್ಥವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ‘ಹಿಂದೆ ಅಂತರರಾಜ್ಯ ನದಿ ವಿವಾದಗಳು ತಲೆದೋರಿದ್ದಾಗ ಅಂದಿನ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ ಗಾಂಧಿ, ಎಚ್.ಡಿ. ದೇವೇಗೌಡ‌ ಪರಿಹರಿಸಿದ್ದಾರೆ. ಹೀಗಾಗಿ, ಮಹಾದಾಯಿ ವಿವಾದವನ್ನು ಮೋದಿಯವರು ರಾಜಕೀಯ ದೃಷ್ಟಿಯಿಂದ ನೋಡಬಾರದು ಎಂದರು.

ವಿವಾದ ಪರಿಹರಿಸುವ ವಿಚಾರವಾಗಿ ರಾಜ್ಯದ ಬಿಜೆಪಿ ನಾಯಕರು ಪ್ರಧಾನಿ ‌ಮೇಲೆ ಸೂಕ್ತ ಒತ್ತಡ ಹೇರುತ್ತಿಲ್ಲ ಎಂದೂ ಅವರು ಆರೋಪಿಸಿದರು.

ADVERTISEMENT

ಮಹಾದಾಯಿ ವಿಚಾರಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಹಾಗೂ ಗೋವಾದ ಮುಖ್ಯಮಂತ್ರಿಗಳಿಗೆ ಮತ್ತೊಮ್ಮೆ ಪತ್ರ ಬರೆದಿದ್ದೇನೆ. ಸದ್ಯಕ್ಕೆ ಪ್ರಧಾನಿ ಬಳಿ ನಿಯೋಗ ಕೊಂಡೊಯ್ಯುವ ಪ್ರಸ್ತಾಪವಿಲ್ಲ ಎಂದು ಅವರು ಹೇಳಿದರು.

ಇಂಧನ ಇಲಾಖೆಯಲ್ಲಿ ಬಹುಕೋಟಿ ಹಗರಣದ ಆರೋಪ ಕೇಳಿ ಬಂದಿರುವುದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಆರೋಪಕ್ಕೆ ಸಂಬಂಧಿಸಿ ಕುಮಾರಸ್ವಾಮಿ ದಾಖಲೆ ಬಿಡುಗಡೆ ‌ಮಾಡಲಿ. ಆಮೇಲೆ ಹೇಳಿಕೆ ನೀಡುವೆ ಎಂದರು. ಜತೆಗೆ, ಕುಮಾರಸ್ವಾಮಿ ಅವರು ಆರೋಪ ಮಾಡಿ ಪರಾರಿಯಾಗುವ ಜನ ಎಂದೂ ಟೀಕಿಸಿದರು.

₹ 1 ಜಮೆ ಮಾಡಿದ್ದಕ್ಕೆ ಸ್ಪಷ್ಟನೆ: ರೈತರ ಬ್ಯಾಂಕ್ ಖಾತೆಗೆ ಬೆಳೆ ಹಾನಿ ಪರಿಹಾರವಾಗಿ ಸರ್ಕಾರ ₹ 1 ಜಮೆ ಮಾಡಿದ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಜೋಡಣೆ ‌ಮಾಡಲಾಗುತ್ತಿದೆ. ಪ್ರಾಯೋಗಿಕವಾಗಿ ₹ 1 ಜಮೆ ಮಾಡಲಾಗುತ್ತಿದೆ. ಇದನ್ನೇ ಕೆಲವರು ತಪ್ಪು ತಿಳಿದುಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.