ADVERTISEMENT

ಫಲಿತಾಂಶದ ದಿನವೇ ಮದುವೆ ಫೇಲ್!

​ಪ್ರಜಾವಾಣಿ ವಾರ್ತೆ
Published 17 ಮೇ 2012, 19:30 IST
Last Updated 17 ಮೇ 2012, 19:30 IST

ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಮಗಳ ಫಲಿತಾಂಶವನ್ನು ಕಾತರದಿಂದ ಕಾಯುತ್ತಿದ್ದ ಪೋಷಕರಿಗೆ ಫಲಿತಾಂಶ ಏನಾಗಿದೆ ಎಂಬುದು ಗೊತ್ತಾಗಿಲ್ಲ. ಆದರೆ, ಅವಳ ಮದುವೆ ಮಾತ್ರ ಫೇಲ್ ಆಗಿದೆ!

ಹೌದು. ಶಾರದಾದೇವಿ ನಗರದ ಉಮಾ (ಹೆಸರು ಬದಲಾಯಿಸಲಾಗಿದೆ) ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಳು. ಫಲಿತಾಂಶದ ಬಗ್ಗೆ ಆಕೆಗೆ ಕಾತುರ ಇತ್ತಾದರೂ ಖುಷಿ ಇರಲಿಲ್ಲ. ಆದರೆ, ಅವಳ ಪೋಷಕರು ಮಾತ್ರ ಫಲಿತಾಂಶವನ್ನೇ ಎದುರು ನೋಡುತ್ತಿದ್ದರು. ಫಲಿತಾಂಶದ ಮೇಲೆ ಮಗಳ ಮದುವೆ ಮಾಡಲು ನಿರ್ಧರಿಸಿದ್ದರು. ಕೊನೆಗೂ ಫಲಿತಾಂಶ ಬಂದಿದ್ದು, ಮದುವೆ ಫೇಲ್ ಆಗಿರುವುದಕ್ಕೆ ಪೋಷಕರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಘಟನೆ ಏನು?: ನಗರದ ಖಾಸಗಿ ಶಾಲೆಯಲ್ಲಿ ಉಮಾ ಪರೀಕ್ಷೆ ಬರೆದಿದ್ದಳು. ಫಲಿತಾಂಶದ ಬಳಿಕ ಮದುವೆ ಮಾಡಬೇಕು ಎಂದು ಪೋಷಕರು ನಿರ್ಧರಿಸಿದ್ದರು. ಫಲಿತಾಂಶ ವಿಳಂಬವಾದ ಹಿನ್ನೆಲೆಯಲ್ಲಿ ಮೇ 17ರಂದು ಕನಕಪುರದಲ್ಲಿ ಮದುವೆಗೆ ಏರ್ಪಾಡು ಮಾಡಿದ್ದರು. ವರನ ಊರು ಕನಕಪುರ ತಾಲ್ಲೂಕು ಕಸಬಾ ಹೋಬಳಿಯ ವಿರೂಪ್‌ಸಂದ್ರವಾದ್ದರಿಂದ ಅಲ್ಲಿಯೇ ಮದುವೆ ಮಾಡಲು ನಿರ್ಧರಿಸಿದ್ದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬಳಿಕ ವಿದ್ಯಾಭ್ಯಾಸ ಮುಂದುವರಿಸಬೇಕು ಎಂಬ ಕನಸು, ಗುರಿ ಇಟ್ಟುಕೊಂಡಿದ್ದ ಉಮಾಳಿಗೆ ಮದುವೆ ಎಂಬುದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಅತ್ತ ಮನೆಯವರ ಮಾತನ್ನೂ ಮೀರಲಾಗದು, ಇತ್ತ ತನ್ನ ಕನಸನ್ನೂ ಕಳೆದುಕೊಳ್ಳಲಾಗದ ಸಂದಿಗ್ಧ ಸ್ಥಿತಿಗೆ ಸಿಲುಕಿದಳು. ಹೇಗಾದರೂ ಆಗಲಿ, ಫಲಿತಾಂಶ ಬಂದ ಮೇಲೆ ನೋಡೋಣ ಎಂದು ಫಲಿತಾಂಶದ ದಾರಿ ಕಾಯುತ್ತಿದ್ದಳು.

ಮೈಸೂರಿನಲ್ಲೇ ಬಾಲ್ಯ ವಿವಾಹ ಮಾಡಿದರೆ ಪೊಲೀಸರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿತ ಹುಡುಗಿಯ ಮನೆಯವರು ಕನಕಪುರದಲ್ಲೇ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ವಿಷಯ ತಿಳಿದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮದುವೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಧು ಹಾಗೂ ವರನ ಮನೆಯವರು ಹಾಗೂ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ನಡೆಸಿರುವ ಪೊಲೀಸರು ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ಒಂದು ವೇಳೆ 18 ವರ್ಷಕ್ಕೂ ಮುನ್ನ ಮತ್ತೆ ಮದುವೆಗೆ ಮುಂದಾದರೆ, ಎರಡೂ ಮನೆಯವರಿಗೆ ಒಂದು ಲಕ್ಷ ರೂಪಾಯಿ ದಂಡ ಹಾಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ತಿಳಿಸಿ, ಎಚ್ಚರಿಕೆ ನೀಡಿದ್ದಾರೆ.

ಎಸ್ಸೆಸ್ಸೆಲ್ಸಿ ಫಲಿತಾಂಶದ ದಿನವೇ ಮದುವೆ ಗೊತ್ತು ಮಾಡಿರುವ ವಿಷಯ ತಿಳಿದ ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ ಹಾಗೂ ಪರಶುರಾಮ್ ಅವರು ಕನಕಪುರ ಪೊಲೀಸರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದರಿಂದ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಬಾಲ್ಯ ವಿವಾಹ ತಡೆಗಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.