ADVERTISEMENT

ಫಲಿತಾಂಶ ಸುಧಾರಣೆಗೆ `13 ಸೂತ್ರ'

ಎಸ್‌ಎಸ್‌ಎಲ್‌ಸಿ ಪರೀಕ್ಷೆ; ಗುಲ್ಬರ್ಗ ವಿಭಾಗದಲ್ಲಿ ಪ್ರಯೋಗ

ಮಹೇಶ ಕನ್ನೇಶ್ವರ
Published 20 ಜುಲೈ 2013, 19:59 IST
Last Updated 20 ಜುಲೈ 2013, 19:59 IST

ಗುಲ್ಬರ್ಗ: ಗುಲ್ಬರ್ಗ ವಿಭಾಗದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಹೆಚ್ಚಿಸಲು ಶಿಕ್ಷಣ ಇಲಾಖೆಯು ಕಳೆದ ವರ್ಷದಿಂದ ರಾಜ್ಯದಲ್ಲಿಯೇ ಪ್ರಥಮವಾಗಿ 13 ಸಿದ್ಧಸೂತ್ರಗಳನ್ನು ಜಾರಿಗೆ ತಂದಿದೆ.

ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ, ಬೀದರ್, ಬಳ್ಳಾರಿ ಜಿಲ್ಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕು ಎನ್ನುವ ಉದ್ದೇಶದಿಂದ ಅನುದಾನಿತ, ಅನುದಾನ ರಹಿತ, ಸರ್ಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆ ಕರೆದು ಚರ್ಚಿಸಲಾಗಿತ್ತು. ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡರೂ ಫಲಿತಾಂಶದಲ್ಲಿ ಸುಧಾರಣೆಯಾಗಿರಲಿಲ್ಲ. ಹೀಗಾಗಿ ಇಲಾಖೆಯು `ಸಿದ್ಧಸೂತ್ರ'ಕ್ಕೆ ಮೊರೆ ಹೋಗಿದೆ. 

ಇಲಾಖೆಯ ಆಯುಕ್ತ ಸೈಯದ್ ಅಬ್ದುಲ್ ರಬ್ ಈ `ಸಿದ್ಧಸೂತ್ರ'ಗಳನ್ನು ರೂಪಿಸಿ, ವ್ಯವಸ್ಥಿತವಾಗಿ ಜಾರಿಗೆ ತರಲು ಮುತುವರ್ಜಿ ವಹಿಸಿದ್ದಾರೆ. ಇದರಡಿ ವಿಷಯವಾರು ಶಿಕ್ಷಕರಿಗೆ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಮೈಸೂರಿನಲ್ಲಿರುವ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ  ಸಹಯೋಗದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಕರಿಗೆ ಶೈಕ್ಷಣಿಕ ಪ್ರೇರಣೆ ಹಾಗೂ ತರಬೇತಿ ನೀಡಲಾಗಿದೆ. ವಿಜ್ಞಾನ, ಗಣಿತ, ಇಂಗ್ಲಿಷ್, ಸಮಾಜ ವಿಜ್ಞಾನ ವಿಷಯಗಳ ಕುರಿತು ಕಾರ್ಯಾಗಾರ ನಡೆಸಲಾಗಿದೆ. 20ಕ್ಕೂ ಹೆಚ್ಚು ಮಾದರಿ ಪ್ರಶ್ನೆಪತ್ರಿಕೆ, ಬೋಧನಾ ಮಾದರಿ ತಯಾರಿಸಿ ಶಿಕ್ಷಕರಿಗೆ ನೀಡಲಾಗಿದೆ.

`2010 ರಲ್ಲಿ ನಮ್ಮ ವಿಭಾಗದ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಶೇ 56.81 ರಷ್ಟಿತ್ತು. 2013 ರಲ್ಲಿ ಶೇ 75.17 ಕ್ಕೆ ತಲುಪಿದ್ದೇವೆ. ಮುಂದಿನ ವರ್ಷ ಶೇ 100 ರಷ್ಟು ಫಲಿತಾಂಶ ಪಡೆಯುವ ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ  ಪ್ರಥಮ ಸ್ಥಾನ ಪಡೆದಿರುವ ಚಿಕ್ಕೋಡಿ, ಬೆಂಗಳೂರು ಗ್ರಾಮಾಂತರ ಹಾಗೂ ಉಡುಪಿ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿನ ಶಿಕ್ಷಕರು, ಅಧಿಕಾರಿಗಳು ಫಲಿತಾಂಶ ಸುಧಾರಣೆಗೆ ಯಾವ ವಿಧಾನಗಳನ್ನು ಅನುಸರಿಸುತ್ತಿದ್ದಾರೆ ಎಂಬುದನ್ನು ಸಮಗ್ರವಾಗಿ ವಿಮರ್ಶೆಗೆ ಒಳಪಡಿಸಲಾಗಿದೆ' ಎಂದು ರಬ್ `ಪ್ರಜಾವಾಣಿ'ಗೆ ತಿಳಿಸಿದರು.

`ಫಲಿತಾಂಶ ಸುಧಾರಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಶಿಕ್ಷಕರು ಇಲಾಖೆ ನೀಡುವ ಬೋಧನಾ ಮಾದರಿಗಳನ್ನು ತರಗತಿಯಲ್ಲಿ ಕಡ್ಡಾಯವಾಗಿ ಬಳಸಲೇಬೇಕು. ಪ್ರತಿ ದಿನ ರಾತ್ರಿ 9ರ ನಂತರ 10 ಶಾಲೆಗಳ ಮುಖ್ಯ ಶಿಕ್ಷಕರಿಗೆ ಹಾಗೂ ಬೆಳಿಗ್ಗೆ 8 ಕ್ಕೆ 10 ಪಾಲಕರಿಗೆ ಪೋನ್ ಕರೆಗಳನ್ನು ಮಾಡುವ ಮೂಲಕ  ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ವಿಚಾರಿಸಲಾಗುತ್ತದೆ. ಇದನ್ನು ನಾನೇ ಮಾಡುತ್ತಿದ್ದೇನೆ. ಪ್ರತಿ ಜಿಲ್ಲೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕ್ಷೇತ್ರ  ಶಿಕ್ಷಣಾಧಿಕಾರಿ, ಉಪ ನಿರ್ದೇಶಕರು ಮೇಲುಸ್ತುವಾರಿ ಮಾಡುವಂತೆ ಕ್ರಮ ಜರುಗಿಸಲಾಗಿದೆ' ಎಂದು ಹೇಳಿದರು.

ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ಗುಲ್ಬರ್ಗ ಜಿಲ್ಲೆಗಳ ಜಿಲ್ಲಾವಾರು ಫಲಿತಾಂಶ ಉತ್ತಮ ರೀತಿಯಲ್ಲಿ ಇದೆ. ಬೀದರ್ ಜಿಲ್ಲೆ 2010 ರಲ್ಲಿ ಕೇವಲ ಶೇ 28 ರಷ್ಟು ಫಲಿತಾಂಶ ಬಂದಿತ್ತು. 2013ರಲ್ಲಿ ಶೇ 67.95ರಷ್ಟು ಬಂದಿದೆ. ಕೊನೆ ಜಿಲ್ಲೆ ಎಂಬ ಹಣೆ ಪಟ್ಟಿಯನ್ನು ಕಳಚಿ ಹಾಕುವ ಎಲ್ಲ ಪ್ರಯತ್ನಕ್ಕೆ ಇಲಾಖೆ ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT