ADVERTISEMENT

ಬಂಕ್‌ ಮಾಲೀಕರಿಗೆ ನಷ್ಟ

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 19:58 IST
Last Updated 2 ಜುಲೈ 2017, 19:58 IST
ಬಂಕ್‌ ಮಾಲೀಕರಿಗೆ ನಷ್ಟ
ಬಂಕ್‌ ಮಾಲೀಕರಿಗೆ ನಷ್ಟ   

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ಪೆಟ್ರೋಲ್‌ ಬಂಕ್‌ ಮಾಲೀಕರಿಗೆ ₹1 ಲಕ್ಷದಿಂದ ₹6 ಲಕ್ಷದವರೆಗೆ  ನಷ್ಟ ಉಂಟಾಗಿದೆ.

‘ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡ ಲಾಗಿದೆ. ಆದರೆ, ಜುಲೈ 1ರಿಂದ  ಜಿಎಸ್‌ಟಿ ಜಾರಿಯಾಗಿರುವುದರಿಂದ ರಾಜ್ಯ ಸರ್ಕಾರ  ಶೇ 5ರಷ್ಟಿದ್ದ ಪ್ರವೇಶ ತೆರಿಗೆ ರದ್ದುಪಡಿಸಿದೆ. ಇದರಿಂದ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ ₹3.30 ಹಾಗೂ ಡೀಸೆಲ್‌ ದರ ಪ್ರತಿ ಲೀಟರ್‌ಗೆ ₹2.80 ರಷ್ಟು ಇಳಿಕೆಯಾಗಿದೆ’ ಎಂದು ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್‌ಗಳ ಒಕ್ಕೂಟದ ಅಧ್ಯಕ್ಷ ರವೀಂದ್ರನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಎಸ್‌ಟಿ ಜಾರಿಗೂ ಮುನ್ನ ಬಂಕ್‌ ಮಾಲೀಕರು ದಾಸ್ತಾನು ಮಾಡಿದ್ದ ಪೆಟ್ರೋಲ್‌ ಹಾಗೂ ಡೀಸೆಲ್‌ಗೆ ಶೇ 5ರಷ್ಟು ಪ್ರವೇಶ ತೆರಿಗೆ ಪಾವತಿಸಿದ್ದರು. ಆದರೆ, ಈಗ ಪ್ರವೇಶ ತೆರಿಗೆ ಕೈಬಿಡಲಾಗಿದೆ. ಇದರಿಂದ ಪ್ರತಿ ಲೀಟರ್‌ ಇಂಧನದ ಮೇಲೆ ಶೇ 5ರಷ್ಟು ನಷ್ಟ ಉಂಟಾಗಿದೆ’ ಎಂದರು.

‘ಬಂಕ್‌ಗಳಲ್ಲಿ ದಾಸ್ತಾನು ಇಡುವ ಇಂಧನದ ಪ್ರಮಾಣದಲ್ಲಿ ವ್ಯತ್ಯಾಸ ಇರುತ್ತದೆ. ಕನಿಷ್ಠ 10 ಸಾವಿರದಿಂದ 50 ಸಾವಿರ ಲೀಟರ್‌ವರೆಗೆ ದಾಸ್ತಾನು ಇರುತ್ತದೆ. ಇದನ್ನು ಹೊಸ ದರದ ಪ್ರಕಾರವೇ  ಮಾರಾಟ ಮಾಡಬೇಕಿದೆ. ಈ ನಷ್ಟವನ್ನು ಕೇಂದ್ರ ಸರ್ಕಾರವಾಗಲೀ, ತೈಲ ಕಂಪೆನಿಗಳಾಗಲೀ ಭರಿಸುತ್ತಿಲ್ಲ’ ಎಂದು ಅವರು ನೊಂದು ನುಡಿದರು.

ದರ ಪರಿಷ್ಕರಣೆಯಿಂದ ಹೆಚ್ಚು ನಷ್ಟ: ‘ಪ್ರವೇಶ ತೆರಿಗೆ ತೆಗೆದಿದ್ದರಿಂದ ಒಂದು ದಿನ ಮಾತ್ರ ನಮಗೆ ನಷ್ಟ ಆಗಿದೆ. ಆದರೆ, ಪ್ರತಿದಿನ ದರ ಪರಿಷ್ಕರಣೆಯಿಂದ ನಮಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ’ ಎಂದು ಬೆಂಗಳೂರು ಪೆಟ್ರೋಲಿಯಂ ಡೀಲರ್‌ಗಳ ಸಂಘದ ಕಾರ್ಯದರ್ಶಿ ಕೆ.ಲೋಕೇಶ್‌ ಹೇಳಿದರು.

‘ಭಾರತೀಯ ತೈಲ ಪ್ರಾಧಿಕಾರವು  ಜೂನ್‌ 16ರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಪ್ರತಿದಿನ ಪರಿಷ್ಕರಣೆ ಮಾಡುವ ಆದೇಶವನ್ನು ಹೊರಡಿಸಿತ್ತು. ಅಂದಿನಿಂದ ಈವರೆಗೆ ಬಂಕ್‌ ಮಾಲೀಕರಿಗೆ ₹5 ಲಕ್ಷದಿಂದ ₹6 ಲಕ್ಷ ನಷ್ಟ ಉಂಟಾಗಿದೆ’ ಎಂದರು.

‘ಪ್ರತಿದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪ್ರತಿ ಲೀಟರ್‌ಗೆ 10–40 ಪೈಸೆಯಷ್ಟು ಏರಿಳಿತ ಆಗುತ್ತಿದೆ. 1–5 ಪೈಸೆ ಇಳಿಕೆ ಆದ ಉದಾಹರಣೆಯೂ ಇದೆ. ಪ್ರತಿದಿನ ಮಧ್ಯರಾತ್ರಿ ಇಂಧನದ ದರ ಪರಿಷ್ಕರಣೆ ಆಗುತ್ತದೆ. ಆದರೆ, ದಾಸ್ತಾನು ಇರುವ ಇಂಧನಕ್ಕೆ ಹಿಂದಿನ ದರವನ್ನೇ ಪಾವತಿಸಿರುತ್ತೇವೆ. ಇಂಧನದ ದರ 20 ಪೈಸೆ ಕಡಿಮೆಯಾದರೆ ಅದರ ನಷ್ಟವನ್ನು ನಾವೇ ಭರಿಸಬೇಕಿದೆ’ ಎಂದು ವಿವರಿಸಿದರು.

‘ಈ ಬಗ್ಗೆ ತೈಲ ಕಂಪೆನಿಗಳು ಅಥವಾ ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳನ್ನು ಕೇಳಿದರೆ, ದರ ಹೆಚ್ಚಾದಾಗ ಅದರ ಲಾಭವನ್ನು ನೀವು ಪಡೆಯುವುದಿಲ್ಲವೇ. ದರ ಇಳಿಕೆ ಆದಾಗಲೂ ಅದರ ನಷ್ಟವನ್ನು ನೀವೇ ಭರಿಸಬೇಕು ಎನ್ನುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರತಿದಿನ ದರ ಪರಿಷ್ಕರಣೆಯಿಂದ ಗ್ರಾಹಕರಿಗೆ ಯಾವುದೇ ಪ್ರಯೋಜನ ವಿಲ್ಲ. ಬಂಕ್‌ ಮಾಲೀಕರಿಗೆ ಕೆಲಸ ಹೆಚ್ಚಾ ಗಿದೆ. ಪ್ರತಿದಿನವೂ ಪರಿಷ್ಕೃತ ದರವನ್ನು ಕಂಪ್ಯೂಟರ್‌ನಲ್ಲಿ ಹಾಗೂ ಪಂಪ್‌ಗಳಲ್ಲಿ ಅಳವಡಿಸಬೇಕು’ ಎಂದರು.

‘ಜಿಎಸ್‌ಟಿ ಗೆ ಬಂದರೆ ಪೆಟ್ರೋಲ್‌ ದರ ₹40 ಆಗಲಿದೆ’
‘ಪೆಟ್ರೋಲ್‌, ಡೀಸೆಲ್‌ ಜಿಎಸ್‌ಟಿ ವ್ಯಾಪ್ತಿಗೆ ತಂದಿಲ್ಲ. ಸದ್ಯಕ್ಕೆ ಇದರ ಮೇಲೆ ಶೇ 23ರಷ್ಟು ಕೇಂದ್ರ ಅಬಕಾರಿ ಸುಂಕ ಹಾಗೂ ಶೇ 34 ರಾಜ್ಯ ತೆರಿಗೆ ವಿಧಿಸಲಾಗುತ್ತಿದೆ. ಇದು ಜಿಎಸ್‌ಟಿ ವ್ಯಾಪ್ತಿಗೆ ಒಳಪಟ್ಟರೆ, ಆಗ ಒಂದೇ ತೆರಿಗೆ ವಿಧಿಸಬೇಕಾಗುತ್ತದೆ. ಗರಿಷ್ಠ ಶೇ 28ರಷ್ಟು ಜಿಎಸ್‌ಟಿ ವಿಧಿಸಿದರೂ ಪೆಟ್ರೋಲ್‌ ದರ ₹40, ಡೀಸೆಲ್‌ ದರ ₹32 ಆಗುತ್ತದೆ. ಹೀಗಾಗಿ ಜಿಎಸ್‌ಟಿ ವ್ಯಾಪ್ತಿಗೆ ತರಬೇಕು’ ಎಂದು ಬಂಕ್‌ ಮಾಲೀಕರೊಬ್ಬರು ಒತ್ತಾಯಿಸಿದರು. ‘ಜಿಎಸ್‌ಟಿ ವ್ಯಾಪ್ತಿಗೆ ಒಳಪಟ್ಟರೆ, ನಾವು ಹೂಡುವ ಬಂಡವಾಳವೂ ಕಡಿಮೆ ಆಗಲಿದೆ. ಗ್ರಾಹಕರಿಗೂ ಕಡಿಮೆ ದರಕ್ಕೆ ಇಂಧನ ಸಿಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT