ADVERTISEMENT

ಬಂಡಿಗಳು ಹೋಗಿ ಬೈಕ್‌ಗಳು ಬಂದವು!

ಬದಲಾಯಿತು ಗ್ರಾಮಗಳ ಬದುಕು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST

ಹಲಗಾ (ಬೆಳಗಾವಿ): `ಹಲಗಾ ಕುಪ್ಪದಲ್ಲಿ ಸುವರ್ಣ ವಿಧಾನಸೌಧ ಬಂದಿದ್ದೇ ತಡ, ನಮ್ಮ ಹಲಗಾ, ಬಸ್ತವಾಡ ಮತ್ತು ಕುಪ್ಪದ ಸುತ್ತಲಿನ ಗ್ರಾಮಗಳ ಚಿತ್ರಣವೇ ಬದಲಾಗಿ ಹೋಗಿದೆ. ಎತ್ತಿನ ಬಂಡಿಗಳೆಲ್ಲ ಕ್ಷಣಾರ್ಧದಲ್ಲಿ ಮಾಯವಾಗುತ್ತಿದ್ದು, ಅವುಗಳ ಸ್ಥಾನವನ್ನು ಕಾರು-ಬೈಕ್‌ಗಳು ಆಕ್ರಮಿಸಿಬಿಟ್ಟಿವೆ'.

ಹಲಗಾ ಗ್ರಾಮದ ರೈತ ಚಂಗಪ್ಪ ಜ್ಯೋತಿಬಾ ಹೆಬ್ಬಾಜಿ ಬಲು ಬೇಜಾರಿನಿಂದ ಹೇಳುತ್ತಿದ್ದರು. `ಅರೆರೆ, ಕುಪ್ಪದಲ್ಲಿ ಸುವರ್ಣ ವಿಧಾನಸೌಧ ಬರುವುದಕ್ಕೂ ಎತ್ತಿನ ಬಂಡಿ ಕಾಣೆಯಾಗುವುದಕ್ಕೂ ಏನು ಸಂಬಂಧ' ಎಂದು ಕೇಳಿದಾಗ ಹೆಬ್ಬಾಜಿ ಹಿರಿದಾದ ಕಥೆಯನ್ನೇ ನಮ್ಮ ಮುಂದೆ ಬಿಚ್ಚಿಟ್ಟರು.

`ಸುವರ್ಣ ಸೌಧದ ಮೇಲೆ ನಿಂತು ಸುತ್ತ ಎತ್ತ ನೋಡಿದರೂ ನಿಮಗೆ ಈಗ ಕಾಣುವುದಲ್ಲ ಆ ಹಸಿರು. ಅದು ಮುಂದಿನ ಸಲ ಬಂದಾಗ ಖಂಡಿತ ಇರುವುದಿಲ್ಲ. ಈಗಾಗಲೇ ಆ ಹೊಲಗಳೆಲ್ಲ ಮಾರಾಟವಾಗಿ ಹೋಗಿವೆ. ಉಳಿದ ಹೊಲಗಳನ್ನು ಕೊಳ್ಳಲು ದಲ್ಲಾಳಿಗಳು ನಿತ್ಯ ರೈತರ ಮನೆಗೆ ಎಡತಾಕುತ್ತಿದ್ದಾರೆ' ಎಂದರು ಅವರು.

ವರ್ಷದ ಹಿಂದೆ ಪ್ರತಿ ಎಕರೆಗೆ ರೂ 5 ರಿಂದ 7 ಲಕ್ಷದಷ್ಟಿದ್ದ ಭೂಮಿ ಬೆಲೆ, ಕಳೆದ ಆರು ತಿಂಗಳಲ್ಲಿ ರಾಕೆಟ್ ಮೇಲೆ ನಿಂತಂತೆ ನಿತ್ಯವೂ ಏರುತ್ತಿದೆ. ಸದ್ಯ ಪ್ರತಿ ಎಕರೆ ಮಾರುಕಟ್ಟೆ ದರ ರೂ 60 ಲಕ್ಷದ ಗಡಿಯನ್ನೂ ದಾಟಿ, ಮುಂದಕ್ಕೆ ಹಾರಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದ ಕೆಲವು ಹೊಲಗಳು ರೂ 80 ಲಕ್ಷಕ್ಕೆ ಎಕರೆಯಂತೆ ಬಿಕರಿಯಾಗುತ್ತಿವೆ.

`ಊರ ಮುಂದಿನ ಹೊಲ ಪರರ ಪಾಲಾಗಿ, ಕೈತುಂಬಿ ತುಳುಕುವಷ್ಟು ದುಡ್ಡು ಬಂದಿದೆ. ಆದ್ದರಿಂದಲೇ ಊರೊಳಗೆ ಎಲ್ಲಿ ನೋಡಿದರೂ ಮೋಟಾರ್ ಗಾಡಿಗಳೇ ಓಡಾಡುತ್ತಿವೆ. ಹೊಲಗಳ ಜೊತೆಯಲ್ಲಿ ಎತ್ತಿನ ಬಂಡಿಗಳನ್ನೂ ನಮ್ಮ ರೈತರು ಮಾರಾಟ ಮಾಡಿದ್ದಾರೆ. ಹಳೆಯ ಇಮಾರತಿನ ಮನೆಗಳಿದ್ದ ಜಾಗದಲ್ಲಿ ಹೊಸ ಮನೆಗಳು ಭರದಿಂದ ತಲೆ ಎತ್ತುತ್ತಿವೆ' ಎಂದು ವಿವರಿಸಿದರು ಹೆಬ್ಬಾಜಿ.

ಜೋಳ, ಬತ್ತದಂತಹ ಆಹಾರ ಧಾನ್ಯಗಳನ್ನೇ ಈ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಅಲ್ಲಲ್ಲಿ ಕಬ್ಬಿನ ಬೆಳೆಯೂ ತಲೆ ಎತ್ತಿದೆ. ಹೊಲಗಳ ನಡುವೆ ಇರುವ ಸುವರ್ಣ ವಿಧಾನಸೌಧ, ಮುಂದಿನ ದಿನಗಳಲ್ಲಿ ಭವ್ಯ ಕಟ್ಟಡಗಳಿಂದ ಸುತ್ತುವರಿಯುವುದು ನಿಶ್ಚಿತವಾಗಿದೆ.

ಹಲಗಾ ಮಾತ್ರವಲ್ಲದೆ ಬಸ್ತವಾಡ, ಕೊಂಡಸಕೊಪ್ಪ, ಕಮಕಾರಹಟ್ಟಿ, ಅಲಾರವಾಡ, ತಾರಿಹಾಳ, ಶೆಗಣಮಟ್ಟಿ ಮೊದಲಾದ ಗ್ರಾಮಗಳ ರೈತರ ಸ್ಥಿತಿಯೂ ಇದೇ ಆಗಿದೆ. ಪ್ರತಿ ಗ್ರಾಮದಲ್ಲೂ ದಲ್ಲಾಳಿಗಳು ಎಡೆಬಿಡದೆ ಓಡಾಡುತ್ತಿದ್ದಾರೆ. ಊರೂರಿನಲ್ಲೂ ಮರಿ ದಲ್ಲಾಳಿಗಳೂ ಹುಟ್ಟಿಕೊಂಡಿದ್ದಾರೆ. ಖರೀದಿ `ಪ್ಯಾಕೇಜ್' (ಹಣ ಕೊಡುವವರು, ದಲ್ಲಾಳಿಗಳು, ಕ್ರಯಪತ್ರ ಬರೆಯುವವರು) ಹೊತ್ತ ಕಾರುಗಳು ಕುಪ್ಪದ ಸುತ್ತಲಿನ ಗ್ರಾಮಗಳನ್ನು ಸುತ್ತುತ್ತಿವೆ.

ರೈತರು ಹೊಲ ಮಾರಿದ್ದರಿಂದ ಊರಿನ ಗುಡಿ ಕೈಗಾರಿಕೆಗಳೂ ಅದರ ಬಿಸಿ ಅನುಭವಿಸಬೇಕಿದೆ. `ಈ ವರ್ಷ ಎತ್ತಿನ ಬಂಡಿಗಳ ಹಳಿ ಕಟ್ಟಿಸುವವರು, ನೇಗಿಲು ಮಾಡಿಸುವವರು, ಕುಂಟಿ-ರಂಟೆ ಸರಿಪಡಿಸುವವರು ಯಾರೂ ಬರುತ್ತಿಲ್ಲ. ಜೀವನ ನಡೆಸುವುದೇ ಕಷ್ಟವಾಗಿದೆ. ಏನು ಮಾಡುವುದೋ ತಿಳಿಯುತ್ತಿಲ್ಲ' ಎಂದು ನೋವು ತೋಡಿಕೊಂಡರು ಕಮ್ಮಾರ ವೃತ್ತಿಯಲ್ಲಿ ತೊಡಗಿಸಿಕೊಂಡ ಗಜಾನನ ಲೋಹಾರ್. `ಕೂಲಿ ಕೆಲಸವೂ ಸಿಗುವುದಿಲ್ಲ. ಹೊಟ್ಟೆ ಹೊರೆಯುವುದು ಕಷ್ಟವಾಗಿದೆ' ಎಂದು ಮಗನ ಮಾತಿಗೆ ದನಿಗೂಡಿಸಿದರು ಗಂಗೂ ಲೋಹಾರ್.

`ಹೌದು, ಈ ಹೊಲಗಳನ್ನೆಲ್ಲ ಕೊಳ್ಳುವವರು ಯಾರು' ಎಂಬ ಪ್ರಶ್ನೆಗೆ ಉತ್ತರ ನೀಡಲು ಇಲ್ಲಿಯ ಬಹುತೇಕ ರೈತರು ಹಿಂದೇಟು ಹಾಕುತ್ತಾರೆ. ಮತ್ತಷ್ಟು ಒತ್ತಾಯ ಮಾಡಿ ಕೇಳಿದರೆ ಜಿಲ್ಲೆಯ ಗಣ್ಯ ರಾಜಕಾರಣಿಗಳ ಹೆಸರನ್ನು ಗುಟ್ಟಾಗಿ ಉಸುರುತ್ತಾರೆ. ಹಲಗಾ 865 ಮನೆಗಳ ಗ್ರಾಮ. 200 ರೈತ ಕುಟುಂಬಗಳು ಇಲ್ಲಿವೆ. ಈ ರೈತರು ಹೊಂದಿದ್ದ 1,780 ಎಕರೆ ಪ್ರದೇಶದಲ್ಲಿ ಈಗಾಗಲೇ 600 ಎಕರೆಯಷ್ಟು ಜಮೀನು ಮಾರಾಟವಾಗಿದೆ. ಸರ್ಕಾರ ಸ್ವಾಧೀನಪಡಿಸಿಕೊಂಡ 125 ಎಕರೆ ಭೂಮಿಯೂ ಅದರಲ್ಲಿ ಸೇರಿದೆ.

ಸುವರ್ಣ ವಿಧಾನಸೌಧ ಸುತ್ತಲಿನ ಒಂದು ಕಿ.ಮೀ. ಪ್ರದೇಶವನ್ನು ಸರ್ಕಾರ ಹಸಿರು ವಲಯ ಎಂದು ಘೋಷಿಸಿದೆ. ಅಂದರೆ ಆ ಭಾಗದಲ್ಲಿ ಯಾವುದೇ ಕಟ್ಟಡಗಳು ಬರುವಂತಿಲ್ಲ. ಸೌಧದ ಕೂಗಳತೆ ದೂರದಲ್ಲಿ ಇರುವ ಹೊಲಗಳ ಮಾಲೀಕರಿಗೆ ಈ ನಿಯಮವೇ ಮುಳುವಾಗಿ ಪರಿಣಮಿಸಿದೆ. ಅಕ್ಕ-ಪಕ್ಕದವರು ರೂ 80 ಲಕ್ಷಕ್ಕೆ ಎಕರೆಯಂತೆ ಮಾರುತ್ತಿದ್ದು ತಮಗೆ ಅಂತಹ ಅವಕಾಶ ಸಿಗುತ್ತಿಲ್ಲ ಎಂದು ಕೈ-ಕೈ ಹಿಸುಕಿಕೊಳ್ಳುತ್ತಿದ್ದಾರೆ. ಹಸಿರು ವಲಯದ ಭೂಮಿಯಲ್ಲಿ ರೈತ ಉಳುಮೆ ಮಾಡಲು ಮನಸ್ಸು ಮಾಡದಿದ್ದರೆ ಸರ್ಕಾರವೇ ಆ ಪ್ರದೇಶವನ್ನು ಖರೀದಿ ಮಾಡಲಿದೆ. ಖಾಸಗಿ ವ್ಯಕ್ತಿಗಳು ಕೊಟ್ಟಷ್ಟು ಹಣವನ್ನು ಸರ್ಕಾರ ಕೊಡುವುದಿಲ್ಲ ಎಂಬುದೇ ರೈತರ ಆತಂಕಕ್ಕೆ ಕಾರಣವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.