ADVERTISEMENT

ಬಗೆಹರಿಯಿತು ಖಾತೆ ಕಗ್ಗಂಟು: ಜೆಡಿಎಸ್‌ಗೆ ಹಣಕಾಸು, ಇಂಧನ, ಲೋಕೋಪಯೋಗಿ

2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಜಂಟಿ ಫೈಟ್

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 12:12 IST
Last Updated 1 ಜೂನ್ 2018, 12:12 IST
ಬಗೆಹರಿಯಿತು ಖಾತೆ ಕಗ್ಗಂಟು: ಜೆಡಿಎಸ್‌ಗೆ ಹಣಕಾಸು, ಇಂಧನ, ಲೋಕೋಪಯೋಗಿ
ಬಗೆಹರಿಯಿತು ಖಾತೆ ಕಗ್ಗಂಟು: ಜೆಡಿಎಸ್‌ಗೆ ಹಣಕಾಸು, ಇಂಧನ, ಲೋಕೋಪಯೋಗಿ   

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮುನ್ನಡೆಗೆ ತೊಡಕಾಗಿದ್ದ ಖಾತೆ ಹಂಚಿಕೆ ಹಗ್ಗಜಗ್ಗಾಟಕ್ಕೆ ಶುಕ್ರವಾರ ಸಂಜೆ ಅಲ್ಪವಿರಾಮ ಬಿದ್ದಿದೆ. ಪತ್ರಿಕಕಾಗೋಷ್ಠಿಯಲ್ಲಿ ಮಾತನಾಡಿದ ವೇಣುಗೋಪಾಲ್ ಖಾತೆ ಹಂಚಿಕೆಯ ವಿವರಗಳನ್ನು ಬಹಿರಂಗಪಡಿಸಿದರು.

ಭಾರೀ ಜಟಾಪಟಿಗೆ ಕಾರಣವಾಗಿದ್ದ ಹಣಕಾಸು, ಲೋಕೋಪಯೋಗಿ ಮತ್ತು ಇಂಧನ ಇಲಾಖೆಗಳನ್ನು ತನ್ನ ಸುಪರ್ದಿಯಲ್ಲಿಯೇ ಇರಿಸಿಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ. ಇಂಧನ ಖಾತೆಗೆ ಪಟ್ಟು ಹಿಡಿದಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ವರಿಷ್ಠರು ಹೇಗೆ ಸಮಾಧಾನಪಡಿಸುತ್ತಾರೋ ಕಾದುನೋಡಬೇಕು.

ಕಾಂಗ್ರೆಸ್ ಪಾಳಯಕ್ಕೆ ಸಿಕ್ಕಿರುವ ಖಾತೆಗಳಲ್ಲಿ ಗೃಹ, ನೀರಾವರಿ ಮತ್ತು ಬೆಂಗಳೂರು ನಗರ ಅಭಿವೃದ್ಧಿ ಇಲಾಖೆಗಳು ಪ್ರತಿಷ್ಠಿತ ಎನಿಸಿಕೊಂಡಿವೆ.

ADVERTISEMENT

ಸರ್ಕಾರ ಮತ್ತು ಪಕ್ಷಗಳ ನಡುವೆ ತಲೆದೋರಬಹುದಾದ ಭಿನ್ನಾಭಿಪ್ರಾಯ ಪರಿಹರಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚಿಸಲಾಗಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಮಿತಿಯ ಸದಸ್ಯರು. ಡ್ಯಾನಿಶ್ ಅಲಿ ಸಂಚಾಲಕರಾಗಿರುತ್ತಾರೆ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ವೇಣುಗೋಪಾಲ್ ತಿಳಿಸಿದರು.

ಎಲ್ಲ ನಿಗಮ ಮತ್ತು ಮಂಡಳಿಗಳ ನೇಮಕಾತಿ ಪ್ರಕ್ರಿಯೆಯನ್ನು ಸಮನ್ವಯ ಸಮಿತಿ ಅಂತಿಮಗೊಳಿಸಬೇಕು. ಈ ನೇಮಕಾತಿಗಳಲ್ಲಿ ಕಾಂಗ್ರೆಸ್‌ಗೆ ಮೂರನೇ ಎರಡು (2/3) ಮತ್ತು ಜೆಡಿಎಸ್‌ಗೆ ಮೂರನೇ ಒಂದು (1/3) ಪಾಲು ಸಿಗಲಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಗ್ಗೂಡಿ ಸೆಣೆಸಲಿವೆ ಎಂದು ಅವರು ಘೋಷಿಸಿದರು.

ಕೋಮುಸೌಹಾರ್ದ, ಪಾರದರ್ಶಕ ಆಡಳಿತ ಮತ್ತು ಅಭಿವೃದ್ಧಿಗೆ ಮೈತ್ರಿ ಸರ್ಕಾರ ಆದ್ಯತೆ ಕೊಡಲಿದೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಐದು ವರ್ಷ ಆಡಳಿತ ಪೂರ್ಣಗೊಳಿಸಲಿದ್ದಾರೆ ಎಂದು ನುಡಿದರು.

ಖಾತೆ ಹಂಚಿಕೆ ವಿವರ:
ಕಾಂಗ್ರೆಸ್
ಗೃಹ, ನೀರಾವರಿ, ಬೆಂಗಳೂರು ನಗರ ಅಭಿವೃದ್ಧಿ, ಕೈಗಾರಿಕೆ, ಆರೋಗ್ಯ, ಕಂದಾಯ, ಮುಜರಾಯಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಕೃಷಿ, ವಸತಿ, ವೈದ್ಯಕೀಯ ಶಿಕ್ಷಣ, ಅರಣ್ಯ, ಗಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆಹಾರ, ಸಂಸದೀಯ ವ್ಯವಹಾರ, ವಿಜ್ಞಾನ ಐಟಿಬಿಟಿ, ಕನ್ನಡ ಮತ್ತು ಸಂಸ್ಕೃತಿ, ಕ್ರೀಡೆ ಮತ್ತು ಯುವಜನ.

ಜೆಡಿಎಸ್
ಮಾಹಿತಿ ತಂತ್ರಜ್ಞಾನ, ಯೋಜನೆ ಮತ್ತು ಸಾಂಖ್ಯಿಕ, ಹಣಕಾಸು, ಅಬಕಾರಿ, ಲೋಕೋಪಯೋಗಿ, ಇಂಧನ, ಸಹಕಾರ, ಪ್ರವಾಸೋದ್ಯಮ, ಶಿಕ್ಷಣ, ಪಶುಸಂಗೋಪನೆ, ತೋಟಗಾರಿಕೆ ಮತ್ತು ರೇಷ್ಮೆ, ಸಣ್ಣ ಕೈಗಾರಿಕೆ, ಸಾರಿಗೆ, ಸಣ್ಣ ನೀರಾವರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.