ADVERTISEMENT

ಬನ್ನೇರುಘಟ್ಟಕ್ಕೆ ಆನೆ ಮರಿ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:21 IST
Last Updated 15 ಅಕ್ಟೋಬರ್ 2017, 19:21 IST
ಬನ್ನೇರುಘಟ್ಟಕ್ಕೆ ಆನೆ ಮರಿ ಸೇರ್ಪಡೆ
ಬನ್ನೇರುಘಟ್ಟಕ್ಕೆ ಆನೆ ಮರಿ ಸೇರ್ಪಡೆ   

ಆನೇಕಲ್‌: ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ‘ಸುವರ್ಣ’ ಗಂಡು ಮರಿಗೆ ಈಚೆಗೆ ಜನ್ಮ ನೀಡಿದ್ದಾಳೆ.

ತಾಯಿ ಮತ್ತು ಮರಿ ಉದ್ಯಾನದ ಸೀಗೆಕಟ್ಟೆಯ ಕೆರೆಯ ಬಳಿ ಸಂತಸದಿಂದಿರುವ ದೃಶ್ಯ ಭಾನುವಾರ ಕಂಡುಬಂತು.

ಉದ್ಯಾನದಲ್ಲಿ 21 ಆನೆಗಳಿದ್ದವು. ಗಂಡು ಮರಿ ಜನನದಿಂದ ಆನೆಗಳ ಸಂಖ್ಯೆ 22ಕ್ಕೇರಿತ್ತು. ಶುಕ್ರವಾರ ‘ಅಶ್ವತ್ಥಾಮ’ ಎಂಬ ಆನೆ ಮೃತಪಟ್ಟಿದ್ದರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ಸಂಸಾರ ಮತ್ತೆ 21ಕ್ಕೆ ಸೀಮಿತವಾಗಿದೆ.

ADVERTISEMENT

ಸೆಪ್ಟೆಂಬರ್‌ 22ರಂದು ‘ಸುವರ್ಣ‘ ಗಂಡು ಮರಿಗೆ ಜನ್ಮ ನೀಡಿರುವುದರಿಂದ ಉದ್ಯಾನದಲ್ಲಿ ಸಂತಸ ಮೂಡಿದೆ. ಆದರೂ ಅಶ್ವತ್ಥಾಮನ ಅಗಲಿಕೆಯ ನೋವು ಅದನ್ನು ನೋಡಿಕೊಳ್ಳುತ್ತಿದ್ದ ಮಾವುತರಲ್ಲಿ ಭಾನುವಾರವೂ ಕಂಡುಬಂದಿತು.

ಸುವರ್ಣ ಹಾಗೂ ವೇದಳ ಜೊತೆಗೆ ಪುಟಾಣಿ ಮರಿಯು ಅತ್ತಿಂದಿತ್ತ ಓಡಾಡುತ್ತಾ ಸೊಂಡಿಲಿನಿಂದ ತಾಯಿಯ ಸೊಂಡಿಲಿಗೆ ಬಡಿಯುತ್ತಾ ಕಾಲುಗಳ ಕೆಳಗಡೆ ನುಗ್ಗುತ್ತಿದ್ದ ನೋಟ ಮನಮೋಹಕವಾಗಿತ್ತು.

‘ಮರಿ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ತಾಯಿಯ ಹಾಲೇ ಅದರ ಆಹಾರವಾಗಿದೆ. ಸುವರ್ಣಳಿಗೆ ಮಾವುತರು ಹೆಚ್ಚಿನ ಆರೈಕೆ ಮಾಡುತ್ತಿದ್ದು ಕಾಳುಗಳ ಮಿಶ್ರಣ, ಕೊಬ್ಬರಿ, ಪೊಂಗಲ್, ಅಕ್ಕಿಬೆಲ್ಲ ಸೇರಿದಂತೆ ವಿಶೇಷ ಆಹಾರವನ್ನು ಸಿದ್ಧಪಡಿಸಿ ನೀಡಲಾಗುತ್ತಿದೆ. ಒಂದು ತಿಂಗಳ ಕಾಲ ವಿಶೇಷ ಆಹಾರ ನೀಡಲಾಗುವುದು’ ಎಂದು ಮಾವುತರು ತಿಳಿಸಿದರು.

ಜೈವಿಕ ಉದ್ಯಾನದಲ್ಲಿ ಅತಿ ಹೆಚ್ಚು ಮರಿಗಳನ್ನು ಹಾಕಿದ ಹೆಗ್ಗಳಿಕೆ ಸುವರ್ಣಳಿಗಿದೆ. ವೇದ, ಸುವರ್ಣಳ ಮರಿಯಾಗಿದೆ. ವನರಾಜ, ಗಜೇಂದ್ರ, ವೇದ, ಲಿಲ್ಲಿ, ಗಾಯತ್ರಿ, ರಂಗ, ನಿಸರ್ಗ, ಮೇನಕಾ, ಲಕ್ಷ್ಮೀ, ಶ್ರೀರಾಮುಲು, ವನಶ್ರೀ ಸೇರಿದಂತೆ 21 ಆನೆಗಳು ಈ ಉದ್ಯಾನದಲ್ಲಿದ್ದು ಪ್ರವಾಸಿಗರ ಕಣ್ಮನ ತಣಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.