ADVERTISEMENT

ಬರದ ನಡುವೆ ಕರ್ನಾಟಕದ ಔದಾರ್ಯ: ರಾಜೇಂದ್ರ ಸಿಂಗ್‌

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2016, 19:30 IST
Last Updated 4 ಅಕ್ಟೋಬರ್ 2016, 19:30 IST
ಬರದ ನಡುವೆ ಕರ್ನಾಟಕದ ಔದಾರ್ಯ: ರಾಜೇಂದ್ರ ಸಿಂಗ್‌
ಬರದ ನಡುವೆ ಕರ್ನಾಟಕದ ಔದಾರ್ಯ: ರಾಜೇಂದ್ರ ಸಿಂಗ್‌   

ಬೆಂಗಳೂರು: ತೀವ್ರ ಮಳೆ ಕೊರತೆ ನಡುವೆಯೂ ಕರ್ನಾಟಕ ತಮಿಳುನಾಡಿಗೆ ಕಾವೇರಿ ಜಲಾಶಯಗಳಿಂದ ನೀರು ಬಿಟ್ಟು ಉದಾರತೆ ಮೆರೆದಿದೆ ಎಂದು ಜಲ ತಜ್ಞ ರಾಜೇಂದ್ರ ಸಿಂಗ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವರ್ಷ ಬರಗಾಲದಲ್ಲಿ ಕರ್ನಾಟಕ ದೇಶದಲ್ಲೆ ಮೊದಲ ಸ್ಥಾನದಲ್ಲಿದೆ. ಸಂಕಷ್ಟ ನುಂಗಿಕೊಂಡು ನೀರು ಬಿಡುಗಡೆ ಮಾಡುವ ಮೂಲಕ ಕನ್ನಡಿಗರು ಉದಾರಿಗಳಾಗಿದ್ದಾರೆ ಎಂದು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಕೃಷ್ಣರಾಜ ಸಾಗರ ಜಲಾಶಯದಲ್ಲಿ ಹಾಲಿ ಇರುವ ನೀರಿನ ಪ್ರಮಾಣವನ್ನು  ಖುದ್ದು ಭೇಟಿ ನೀಡಿ ಗಮನಿಸಿದ್ದೇನೆ. ಜಲಾಶಯದ ಮುಂಭಾಗ ನೀರು ಹರಿಯುವುದನ್ನು ನೋಡಿದರೆ ಸಂತಸ ಆಗುತ್ತದೆ. ಆದರೆ, ಹಿಂಭಾಗದಲ್ಲಿ ಖಾಲಿ ಆಗುತ್ತಿರುವುದನ್ನು ನೋಡಿದರೆ ದುಃಖವಾಗುತ್ತದೆ’ ಎಂದರು.

ಕಾವೇರಿ ಸಮಸ್ಯೆ ಬಗೆಹರಿಸುವುದು ಕಷ್ಟ ಅಲ್ಲ. ಆದರೆ, ತಮಿಳುನಾಡು ಮತ್ತು ಕರ್ನಾಟಕದ ರಾಜಕಾರಣಿಗಳಿಗೆ ಕಾವೇರಿ ವಿವಾದ ಜೀವಂತ ಇರುವುದೇ  ಇಷ್ಟ. ಸಕ್ಕರೆ ಮತ್ತು ಭತ್ತದ ಲಾಬಿ ಕೂಡ ಇದರ ಹಿಂದಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಕಬ್ಬು ಮತ್ತು ಭತ್ತದ ಬೆಳೆಗೆ ನೀರು ಒದಗಿಸುವುದು ಕಷ್ಟ ಎಂಬುದು ಎರಡೂ ಸರ್ಕಾರಕ್ಕೂ ಗೊತ್ತಿದೆ. ಆದರೂ, ಅದೇ ಬೆಳೆಗೆ ಎರಡೂ ಸರ್ಕಾರಗಳು ಪ್ರೋತ್ಸಾಹ  ನೀಡುತ್ತಿವೆ.ವಿವಾದ ಬಡಿದೆಬ್ಬಿಸಿ ನಂತರ ಅದರ ಲಾಭ ಪಡೆದುಕೊಳ್ಳಲು ರಾಜಕಾರಣಿಗಳು ಪೈಪೋಟಿ ನಡೆಸುತ್ತಿದ್ದಾರೆ ಎಂದು ಬೇಸರ  ವ್ಯಕ್ತಪಡಿಸಿದರು.

ತಮಿಳುನಾಡು ಮತ್ತು ಕರ್ನಾಟಕದ ರೈತರು ಹುಟ್ಟು ಹಾಕಿರುವ ಕಾವೇರಿ ಕುಟುಂಬಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕು.  ಕರ್ನಾಟಕ ಮತ್ತು ತಮಿಳುನಾಡಿಗೆ ಮಾತ್ರವಲ್ಲದೆ ಕಾವೇರಿ ನೀರು ಬಳಕೆ ಮಾಡುವ ಭಾಗದ  ಎಲ್ಲರ ಪ್ರಾತಿನಿಧ್ಯ ಅದರಲ್ಲಿ  ಇರಬೇಕು ಎಂದರು.

‘ಎರಡೂ ರಾಜ್ಯದ ರೈತರು ಮತ್ತು ವಿಜ್ಞಾನಿಗಳೊಂದಿಗೆ ಸೋಮವಾರ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಕಾವೇರಿ ಕುಟುಂಬವನ್ನು ವಿಸ್ತರಿಸಿ ಸಾಂವಿಧಾನಿಕ ಮಾನ್ಯತೆ ನೀಡುವುದಾದರೆ ಸಮಸ್ಯೆ ಬಗೆಹರಿಸಲು ನಾನೂ ಜೊತೆಯಲ್ಲಿದ್ದು ಸಲಹೆ ನೀಡುತ್ತೇನೆ’ ಎಂದು ಹೇಳಿದರು.

ಕಾವೇರಿ ರಾಷ್ಟ್ರದ ಸಂಪತ್ತು
ಕಾವೇರಿ ಯಾವುದೋ ಒಂದೆರಡು ರಾಜ್ಯದ ಸ್ವತ್ತಲ್ಲ. ಅದು ರಾಷ್ಟ್ರೀಯ ಸಂಪತ್ತು ಎಂದು ರಾಜೇಂದ್ರ ಸಿಂಗ್ ಹೇಳಿದರು. ರಾಜ್ಯಗಳ ನಡುವಿನ ಗಡಿ ರೇಖೆಗಳು ಆಡಳಿತಾತ್ಮಕ ವಿಷಯಗಳಿಗೆ ಸೀಮಿತ ಆಗಬೇಕು. ಕಾವೇರಿ ವಿಷಯ ಬಂದಾಗ ನೀರು ಬಳಕೆ ಮಾಡುವ ಎಲ್ಲರೂ ಒಂದೇ  ಎಂದು ಪರಿಗಣಿಸುವುದು ಸೂಕ್ತ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.