ADVERTISEMENT

ಬಸವ ಮೂರ್ತಿ ಭಗ್ನ: ಚಿಂಚೋಳಿ ಬಂದ್‌

​ಪ್ರಜಾವಾಣಿ ವಾರ್ತೆ
Published 3 ಮೇ 2014, 19:30 IST
Last Updated 3 ಮೇ 2014, 19:30 IST
ಗುಲ್ಬರ್ಗ ಜಿಲ್ಲೆ ಚಿಂಚೋಳಿ ತಾಲ್ಲೂಕು ಚಂದನಕೇರಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ದುಷ್ಕರ್ಮಿಗಳಿಂದ ಭಗ್ನವಾದ ಬಸವೇಶ್ವರ ಮೂರ್ತಿ
ಗುಲ್ಬರ್ಗ ಜಿಲ್ಲೆ ಚಿಂಚೋಳಿ ತಾಲ್ಲೂಕು ಚಂದನಕೇರಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ದುಷ್ಕರ್ಮಿಗಳಿಂದ ಭಗ್ನವಾದ ಬಸವೇಶ್ವರ ಮೂರ್ತಿ   

ಚಿಂಚೋಳಿ (ಗುಲ್ಬರ್ಗ ಜಿಲ್ಲೆ):  ತಾಲ್ಲೂಕಿನ ಚಂದನಕೇರಾ ಗ್ರಾಮದಲ್ಲಿ ದುಷ್ಕರ್ಮಿಗಳು ಬಸವ ಜಯಂತಿ ದಿನವಾದ ಶುಕ್ರವಾರ ರಾತ್ರಿ ಬಸವೇಶ್ವರರ ಅಶ್ವಾರೂಢ ಮೂರ್ತಿ ಭಗ್ನಗೊಳಿಸಿದ್ದಾರೆ. ಇದನ್ನು ಖಂಡಿಸಿ ಗ್ರಾಮಸ್ಥರು ಶನಿವಾರ ಬೆಳಿಗ್ಗೆ 6ರಿಂದ ಫಿರೋಜಾಬಾದ್‌– ಕಮಲಾಪುರ ರಾಜ್ಯ ಹೆದ್ದಾರಿಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದರು.

ಚಿಂಚೋಳಿಯಲ್ಲೂ ಅಖಿಲ ಭಾರತ ವೀರಶೈವ ಮಹಾಸಭೆಯ ಆಶ್ರಯದಲ್ಲಿ ಬಂದ್‌ ಆಚರಿಸಲಾಯಿತು. ಬೆಳಿಗ್ಗೆ 2 ಗಂಟೆ ಕಾಲ ಹೆಚ್ಚುಹೊತ್ತು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಶಾಸಕರನ್ನೂ ಬಿಡಲಿಲ್ಲ: ಕುಡಿಯುವ ನೀರಿನ ಬಗ್ಗೆ ಚೇಂಗಟಾ ಗ್ರಾಮದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆ ತೆರಳುವ ಮುನ್ನ ಚಂದನಕೇರಾ ಗ್ರಾಮಕ್ಕೆ ಬಂದ ಶಾಸಕ ಡಾ.ಉಮೇಶ ಜಾಧವ್‌ ಘಟನೆಯನ್ನು ಖಂಡಿಸಿದರು. ಧರಣಿ ನಡೆಸುತ್ತಿದ್ದವರೊಂದಿಗೆ ಕುಳಿತು, ಕೆಲ ಸಮಯದ ನಂತರ ಜನ ಸಂಪರ್ಕ ಸಭೆಗೆ ತೆರಳಲು ಮುಂದಾದಾಗ ಜನರು ವಿರೋಧ ವ್ಯಕ್ತಪಡಿಸಿದರು. ಹೀಗಾಗಿ  ಜಿಲ್ಲಾಧಿಕಾರಿ ಬರುವವರೆಗೂ ಶಾಸಕರು ಕಾಯಬೇಕಾಯಿತು.

ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿ ಡಾ.ಎನ್‌.ವಿ.ಪ್ರಸಾದ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್ ಸಿಂಗ್‌ ಗ್ರಾಮಕ್ಕೆ ಬಂದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ‘ಒಂದು ತಿಂಗಳಲ್ಲಿ ಇದೇ ಸ್ಥಳದಲ್ಲಿ ಜಿಲ್ಲಾಡಳಿತದಿಂದ ನೂತನ ಅಶ್ವಾರೂಢ ಕಂಚಿನ ಮೂರ್ತಿ ಸ್ಥಾಪಿಸಲಾಗುವುದು’ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸೇರಿದ್ದ ಪ್ರತಿಭಟನಾಕಾರರು  ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್‌ಸಿಂಗ್‌, ‘ಸಂಶಯಾಸ್ಪದ ವ್ಯಕ್ತಿಗಳ ಹೆಸರುಗಳನ್ನು ಪೊಲೀಸರ ಗಮನಕ್ಕೆ ತನ್ನಿ. ವಿಚಾರಣೆ ನಡೆಸಿ, ತಪ್ಪಿತಸ್ಥ ಎಂದು ಕಂಡು ಬಂದರೆ ಗಡಿಪಾರು ಮಾಡಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.