ADVERTISEMENT

ಬಸ್ ಉರುಳಿ ಐವರ ದುರ್ಮರಣ

ಧಾರವಾಡ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಂತ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 19:59 IST
Last Updated 14 ಜೂನ್ 2013, 19:59 IST
ಧಾರವಾಡ ಬಳಿ ಶುಕ್ರವಾರ ಉರುಳಿ ಬಿದ್ದ ಖಾಸಗಿ ಬಸ್ಸಿನಲ್ಲಿದ್ದ ಬೆಂಗಳೂರಿನ ಹರ್ಷಿತ್ ಯಾವುದೇ ಗಾಯಗಳಿಲ್ಲದೇ ಪಾರಾಗ್ದ್ದಿದ್ದು, ಘಟನೆಯಲ್ಲಿ ಗಾಯಗೊಂಡು ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಜೊತೆಗಿರುವ ದೃಶ್ಯ
ಧಾರವಾಡ ಬಳಿ ಶುಕ್ರವಾರ ಉರುಳಿ ಬಿದ್ದ ಖಾಸಗಿ ಬಸ್ಸಿನಲ್ಲಿದ್ದ ಬೆಂಗಳೂರಿನ ಹರ್ಷಿತ್ ಯಾವುದೇ ಗಾಯಗಳಿಲ್ಲದೇ ಪಾರಾಗ್ದ್ದಿದ್ದು, ಘಟನೆಯಲ್ಲಿ ಗಾಯಗೊಂಡು ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಜೊತೆಗಿರುವ ದೃಶ್ಯ   

ಧಾರವಾಡ: ಮುಂಬೈನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಉರುಳಿ ದಂಪತಿ ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟು, 29 ಮಂದಿ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ಇಟಿಗಟ್ಟಿ ಗ್ರಾಮದ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ  ಶುಕ್ರವಾರ ನಸುಕಿನಲ್ಲಿ ಸಂಭವಿಸಿದೆ.

ಸತ್ತವರನ್ನು ಉತ್ತರ ಪ್ರದೇಶದ ವಿಜಯ ಬಹದ್ದೂರ್ ಮೌರ್ಯ (57), ಅವರ ಪತ್ನಿ ಮೀನಾದೇವಿ (45), ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಅನಂತವರಪ್ಪಡು ಗ್ರಾಮದ ಗೋಪಿನಾಥ್ ಮುಪ್ಪಾ (26), ಮನೋರಂಜನ್ ನಂದಾ (36) ಎಂದು ಗುರುತಿಸಲಾಗಿದೆ. ಇನ್ನೊಬ್ಬರ ಹೆಸರು ಗೊತ್ತಾಗಿಲ್ಲ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ ಮತ್ತು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಚಾಲಕರು ಪರಾರಿ
ಘಟನೆ ನಂತರ ಬಸ್ಸಿನ ಇಬ್ಬರೂ ಚಾಲಕರು ಪರಾರಿಯಾಗಿದ್ದಾರೆ. ಹಾಗಾಗಿ ಬಸ್ ಉರುಳಿ ಬೀಳಲು ಕಾರಣ ತಿಳಿದಿಲ್ಲ. ಆದರೆ ಮುಂದೆ ಸಾಗುತ್ತಿದ್ದ ವಾಹನವನ್ನು ಹಿಂದೆ ಹಾಕುವ ಭರದಲ್ಲಿ ಅಥವಾ ನಿದ್ದೆಗಣ್ಣಲ್ಲಿ ವಾಹನ ಚಾಲನೆ ಮಾಡಿದ್ದರಿಂದ ಈ ದುರ್ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಉರುಳಿ ಬಿದ್ದ ಬಸ್ಸಿನ ಎಡಭಾಗದ ಕಿಟಕಿಯಿಂದ ಹೊರಬಂದ ಕೆಲ ಪ್ರಯಾಣಿಕರು ಸಹಾಯಕ್ಕಾಗಿ ಕೂಗಿಕೊಂಡರು. ಬಸ್ಸನ್ನು ಕ್ರೇನ್ ಬಳಸಿ ಬಸ್ ಮೇಲೆತ್ತಲಾಯಿತು.

ಆಶ್ಚರ್ಯಕರವಾಗಿ ಬಾಲಕ ಪಾರು
ಘಟನೆಯಲ್ಲಿ ಬೆಂಗಳೂರಿನ ಹರ್ಷಿತ್ (7) ಎಂಬ ಬಾಲಕ ಯಾವುದೇ ಗಾಯಗಳಿಲ್ಲದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾನೆ.

ಬಸ್ ಉರುಳಿ ಬೀಳುವ ಸಂದರ್ಭದಲ್ಲಿ ಬಾಲಕ ಬಸ್ಸಿನಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದ. ಬಸ್ ಉರುಳುತ್ತಿದ್ದಂತೆಯೇ ತೆರೆದುಕೊಂಡ ಬಾಗಿಲ ಮೂಲಕ ಹೊರಗೆ ಜಿಗಿದುದರಿಂದ ಆತನಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಬಾಲಕನ ತಾಯಿ ತೀವ್ರವಾಗಿ ಗಾಯಗೊಂಡಿದ್ದು ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT