ADVERTISEMENT

ಬಾಲಕೃಷ್ಣೇಗೌಡ ವಿರುದ್ಧ ದೂರು: ಲೋಕಾಯುಕ್ತ ತನಿಖೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 19:30 IST
Last Updated 24 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹಿರಿಯ ಪುತ್ರ ಎಚ್.ಡಿ.ಬಾಲಕೃಷ್ಣೇಗೌಡ ಅವರು ಕೆಎಎಸ್ ಅಧಿಕಾರಿಯಾಗಿದ್ದ ಅವಧಿಯಲ್ಲಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪದ ಬಗೆಗಿನ ದೂರನ್ನು ಲೋಕಾಯುಕ್ತ ತನಿಖೆಗೆ ವಹಿಸಿ ಲೋಕಾಯುಕ್ತ ವಿಶೇಷ ಕೋರ್ಟ್ ಶನಿವಾರ ಆದೇಶಿಸಿದೆ.

ಇದರ ವರದಿಯನ್ನು ಅಕ್ಟೋಬರ್ 10ರ ಒಳಗೆ ನೀಡುವಂತೆ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಅವರು ಲೋಕಾಯುಕ್ತ ಎಸ್ಪಿ ಅವರಿಗೆ ನಿರ್ದೇಶಿಸಿದರು. ಬಾಲಕೃಷ್ಣೇಗೌಡ ಅವರು ಕೆಎಎಸ್ ಅಧಿಕಾರಿಯಾಗಿದ್ದ ಅವಧಿಯಲ್ಲಿ  (1984- 2005) ಭಾರಿ ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎನ್ನುವುದು ಆರೋಪ. ಇವರ ವಿರುದ್ಧ  ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯಲ್ಲಿನ ನಿವೃತ್ತ ಮೆಕ್ಯಾನಿಕಲ್ ಎಂಜಿನಿಯರ್ ಎಸ್.ಎನ್.ಬಾಲಕೃಷ್ಣ ದೂರು ದಾಖಲು ಮಾಡಿದ್ದಾರೆ.

ಬಾಲಕೃಷ್ಣೇಗೌಡರ ಅಧಿಕೃತ ಆದಾಯ 30 ಲಕ್ಷ ರೂಪಾಯಿ ಮಾತ್ರ. ಇವರು 2005ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಆ ಸಂದರ್ಭದಲ್ಲಿ 77 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಖರೀದಿ ಮಾಡಿದ್ದಾರೆ ಎನ್ನುವುದು ಆರೋಪ. ಈ ಆರೋಪದ ಕುರಿತಾಗಿ ಒಂದು ಸಾವಿರ ಪುಟಗಳಿಗೂ ಹೆಚ್ಚು ದಾಖಲೆಗಳನ್ನು ಒಳಗೊಂಡ ದೂರನ್ನು ಸಲ್ಲಿಸಿದ್ದ ಅವರು, `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988~ರ ಕಲಂ 13(1)(ಇ) ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.

ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬದವರ ವಿರುದ್ಧ ಒಂದೇ ಕಾಯ್ದೆ ಅಡಿಯಲ್ಲಿ ಒಂದೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ವಿಚಾರಣೆ ಮುಂದೂಡಿಕೆ: ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ವಕೀಲ ವಿನೋದ ಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ವಿಶೇಷ ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.

ಜಂತಕಲ್ ಮೈನಿಂಗ್ ಕಂಪೆನಿಯ ಗಣಿ ಗುತ್ತಿಗೆಯ ನವೀಕರಣಕ್ಕೆ ಕಾನೂನುಬಾಹಿರವಾಗಿ ಶಿಫಾರಸು ಮಾಡಿರುವ ವಿವಾದಕ್ಕೆ ಸಿಲುಕಿರುವ ಕುಮಾರಸ್ವಾಮಿ, ನಿವೇಶನ ವಿವಾದಕ್ಕೆ ಒಳಗಾಗಿರುವ ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಜಂತಕಲ್ ಕಂಪೆನಿ ಮಾಲೀಕ ವಿನೋದ್ ಗೋಯಲ್ ಅವರು ಶನಿವಾರ ಕೋರ್ಟ್ ಮುಂದೆ ಖುದ್ದು ಹಾಜರು ಇದ್ದರು. ಗೋಯಲ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಧೀಶರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.