ADVERTISEMENT

ಬಿಜೆಪಿಗೆ ‘ಅಭಿವೃದ್ಧಿ ದಾಖಲೆ’ ನೀಡಿದ ಖರ್ಗೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 19:37 IST
Last Updated 28 ಫೆಬ್ರುವರಿ 2018, 19:37 IST
ಬಿಜೆಪಿಗೆ ‘ಅಭಿವೃದ್ಧಿ ದಾಖಲೆ’ ನೀಡಿದ ಖರ್ಗೆ
ಬಿಜೆಪಿಗೆ ‘ಅಭಿವೃದ್ಧಿ ದಾಖಲೆ’ ನೀಡಿದ ಖರ್ಗೆ   

ಕಲಬುರ್ಗಿ: ‘ನರೇಂದ್ರ ಮೋದಿ ಮೂರು ಅವಧಿ ಮುಖ್ಯಮಂತ್ರಿ ಆಗಿದ್ದರೂ ಗುಜರಾತ್‌ನಲ್ಲಿ ಕಾರ್ಮಿಕರಿಗೆ ಆಸ್ಪತ್ರೆ ಇರಲಿಲ್ಲ. ನಾನು ಕೇಂದ್ರ ಕಾರ್ಮಿಕ ಸಚಿವನಾಗಿದ್ದಾಗ ಅಹಮದಾಬಾದ್‌ನ ಬಾಪೂನಗರ ಮತ್ತು ಅಂಕಲೇಶ್ವರದಲ್ಲಿ ಆಸ್ಪತ್ರೆಗಳನ್ನು ಆರಂಭಿಸಿದೆ’ ಎಂದು ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ‘ದಾಖಲೆ’ ನೀಡಿದರು.

‘ಈಗಿನ ರಾಜ್ಯಪಾಲ ವಿ.ಆರ್‌. ವಾಲಾ ಅವರು ಆಗ ಅಲ್ಲಿಯ ಜನಪ್ರತಿನಿಧಿಯಾಗಿದ್ದರು. ಅವರೂ ಸಮಾರಂಭಕ್ಕೆ ಬಂದಿದ್ದರು’ ಎಂದರು.

ಬುಧವಾರ ಇಲ್ಲಿ ನಡೆದ ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಾಲೇಜು ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯಲ್ಲಿದ್ದ ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲರಿಗೆ ಆ ಎರಡೂ ಸಮಾರಂಭಗಳ ಚಿತ್ರ ಮತ್ತು ವರದಿಯನ್ನು ನೀಡಿದ ಖರ್ಗೆ, ‘ಗುಜರಾತ್‌ನಲ್ಲಿ ನನ್ನ ಅಭಿವೃದ್ಧಿಯ ದಾಖಲೆಗಳನ್ನು ನಿಮ್ಮವರಿಗೆ ತೋರಿಸಿ’ ಎಂದು ಕೋರಿದರು.

ADVERTISEMENT

‘ಕೆಲವರು ಅಭಿವೃದ್ಧಿ ಎಲ್ಲಿ ಆಗಿದೆ ಎಂದು ಕೇಳುತ್ತಾರೆ. ಅವರ ಕಣ್ಣುಗಳು ಕುರುಡೋ ಅಥವಾ ಕಾಮಾಲೆ ರೋಗವೋ ಗೊತ್ತಿಲ್ಲ. ಅಂಥವರಿಗೆ ಚಿಕಿತ್ಸೆ ಕೊಡಿಸಲಿಕ್ಕಾಗಿಯೇ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಆರಂಭಿಸಬೇಕು. ಕಣ್ಣುಗಳಿಗೆ ಚಿಕಿತ್ಸೆ ಕೊಡಿಸಿ ಅಭಿವೃದ್ಧಿ ಕಾರ್ಯಗಳನ್ನು ಅವರಿಗೆ ತೋರಿಸಬೇಕು’ ಎಂದು ವೇದಿಕೆಯಲ್ಲಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲರಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.