ADVERTISEMENT

ಬಿಜೆಪಿಗೆ ಆರೆಸ್ಸೆಸ್ ಹೈಕಮಾಂಡ್'

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 18:02 IST
Last Updated 12 ಡಿಸೆಂಬರ್ 2012, 18:02 IST

ಹುಬ್ಬಳ್ಳಿ: ಬಿಜೆಪಿಯ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುತ್ತಿರುವ ಆರ್‌ಎಸ್‌ಎಸ್,  ಹಣ, ಅಧಿಕಾರ ಹಾಗೂ ರಾಜಕೀಯ ಲಾಭಕ್ಕಾಗಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಆಪರೇಷನ್ ಕಮಲ ಕೂಡ ಆರ್‌ಎಸ್‌ಎಸ್ ಎಂಬ ಹೈಕಮಾಂಡ್ ಸೂಚನೆಯಂತೆ ನಡೆದಿದೆ. ಬಿಜೆಪಿಗೆ ಆರೆಸ್ಸೆಸ್ಸೇ ಹೈಕಮಾಂಡ್' ಎಂದು ವಿಧಾನಪರಿಷತ್ ಮಾಜಿ ಸದಸ್ಯ ವಿಜಯ ಸಂಕೇಶ್ವರ ಮಂಗಳವಾರ ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಹುಬ್ಬಳ್ಳಿಗೆ ಬಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಆರ್‌ಎಸ್‌ಎಸ್ ಮುಖಂಡರು ರಾಜಕೀಯ ಮಾಡುವುದಾದರೆ ಬಹಿರಂಗವಾಗಿ ಮಾಡಬೇಕು. ಇನ್ನೊಬ್ಬರ ಹೆಗಲ ಮೇಲೆ ಕೋವಿ ಇರಿಸಿ ಗುಂಡು ಹೊಡೆಯುವ ತಂತ್ರ ಕೈ ಬಿಡಬೇಕು' ಎಂದರು.

ಆರ್‌ಎಸ್‌ಎಸ್ ಮುಖಂಡರಾದ ಸಂತೋಷ, ಸತೀಶ ಹಾಗೂ ಪ್ರಧಾನ್ ಅವರಿಗೆ ಬಿಜೆಪಿ ಕೆಲವು ಹಿರಿಯ ನಾಯಕರ ಅರ್ಧದಷ್ಟು ವಯಸ್ಸು ಕೂಡ ಆಗಿಲ್ಲ. ಆದರೆ ಅವರೆಲ್ಲರನ್ನೂ `ಜೀ' ಎಂದು ಕರೆಯಬೇಕು, ಅವರ ಮುಂದೆ ಕೈಕಟ್ಟಿ ನಿಲ್ಲಬೇಕು.

ಇಂಥ ಪರಿಸ್ಥಿತಿಯಿಂದಾಗಿ ಲೋಕಸಭೆಯಿಂದ ಹಿಡಿದು ತಾಲ್ಲೂಕು ಪಂಚಾಯಿತಿ ಚುನಾವಣೆವರೆಗೂ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಆರ್‌ಎಸ್‌ಎಸ್ ಮುಖಂಡರಿಂದ ನಡೆಯುತ್ತದೆ. ಸಂಭಾವನೆ ರೂಪದಲ್ಲಿ ಕೋಟ್ಯಂತರ ರೂಪಾಯಿ ಗಳಿಸುವ ಆರ್‌ಎಸ್‌ಎಸ್ ತನ್ನ ನಿಲುವನ್ನು ಬಹಿರಂಗಪಡಿಸಬೇಕು. ಹಾಗೆ ಮಾಡದೆ ಕೋಣೆಯಲ್ಲಿ ಕುಳಿತುಕೊಂಡು ಎಲ್ಲವನ್ನೂ ನಿಯಂತ್ರಿಸುವುದು ಸರಿಯಲ್ಲ' ಎಂದರು.

`ಬಾಲಕನಿದ್ದಾಗಿನಿಂದಲೂ ಆರ್‌ಎಸ್‌ಎಸ್ ಕಟ್ಟಾ ಬೆಂಬಲಿಗನಾದ ನನಗೆ ಸುಮಾರು ಎಂಟು ವರ್ಷಗಳಿಂದ ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಂದ ಬೇಸರವಾಗಿದೆ. ಎರಡು ವರ್ಷಗಳಿಂದ ನಾನು ಆರ್‌ಎಸ್‌ಎಸ್ ಸಂಪರ್ಕ ಕಡಿದುಕೊಂಡಿದ್ದೇನೆ' ಎಂದರು.

`ರೆಡ್ಡಿ ಹಾಲು ಕೊಡುವ ಹಸು': `ಜನಾರ್ದನ ರೆಡ್ಡಿ ಒಳ್ಳೆಯ ಹಾಲು ಕೊಡುವ ಹಸು. ಅವರಿಂದ ಹಣ ಪಡೆಯಲು ಆರ್‌ಎಸ್‌ಎಸ್ ಕೂಡ ಹಿಂದೇಟು ಹಾಕಿಲ್ಲ' ಎಂದು ವ್ಯಂಗ್ಯವಾಡಿದ ಸಂಕೇಶ್ವರ, `ಆರ್‌ಎಸ್‌ಎಸ್‌ನ ಇಂಥ ಚಟುವಟಿಕೆಗಳ ಬಗ್ಗೆ ಬಿಜೆಪಿಯಲ್ಲಿ ಅನೇಕರಿಗೆ ಅಸಮಾಧಾನವಿದೆ. ಆದರೆ ವಿರೋಧಿಸಲು ಯಾರೂ ಮುಂದೆ ಬರುತ್ತಿಲ್ಲ' ಎಂದರು.

`ಈ ಹಿಂದೆ ಬಸವರಾಜ ಹೊರಟ್ಟಿ ವಿರುದ್ಧ ಉತ್ತಮ ಅಭ್ಯರ್ಥಿಯನ್ನು ನಿಲ್ಲಿಸುವ ವಿಷಯದಲ್ಲೂ ಆರ್‌ಎಸ್‌ಎಸ್ ಅಡ್ಡಿಯಾಗಿತ್ತು' ಎಂದು ಆರೋಪಿಸಿದರು.

`ನಾನು ಈಗ ಯಾವ ಪಕ್ಷದಲ್ಲೂ ಇಲ್ಲ. ಎಲ್ಲರ ಒಳ್ಳೆಯ ಕೆಲಸಗಳನ್ನು ಮೆಚ್ಚುತ್ತೇನೆ. ನನ್ನನ್ನು ಎಂಎಲ್‌ಸಿ ಮಾಡಿದ ಹಾಗೂ ಈ ಹಿಂದೆ ಕನ್ನಡ ನಾಡು ಪಕ್ಷ ಸ್ಥಾಪಿಸಿದ್ದಾಗ ನನ್ನ ಬಳಿಗೆ ಬಂದು ಮಾತನಾಡಿದ್ದ ಯಡಿಯೂರಪ್ಪ ಅವರ ನೂತನ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದೇನೆ. ಯಡಿಯೂರಪ್ಪ ಹಾಗೂ ನಾನು ಅಣ್ಣ-ತಮ್ಮಂದಿರಂತೆ ಇದ್ದೇವೆ. ವಿಧಾನ ಪರಿಷತ್ ಸದಸ್ಯನಾಗಿದ್ದುಕೊಂಡೇ ಒಂದು ಪಕ್ಷಕ್ಕೆ ಬೆಂಬಲ ಸೂಚಿಸುವುದು ಸರಿಯಲ್ಲ ಎಂಬ ಕಾರಣದಿಂದ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ' ಎಂದರು.

`ಡಿವಿಎಸ್ ಜೋಕರ್, ಈಶ್ವರಪ್ಪ ನಾಲಾಯಕ್': ವಿಧಾನ ಪರಿಷತ್ ಸದಸ್ಯತ್ವಕ್ಕೆ ಕದ್ದು ಮುಚ್ಚಿ ರಾಜೀನಾಮೆ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿರುವುದನ್ನು ಪ್ರಸ್ತಾಪಸಿದ ಸಂಕೇಶ್ವರ, `ಸದಾನಂದಗೌಡ ಬಿಜೆಪಿಯ ಜೋಕರ್ ಇದ್ದಂತೆ. ಯಡಿಯೂರಪ್ಪ ಅವರನ್ನು ಕಂಡು ಹೆದರಿದ್ದ ಗೌಡರು ಸದನಕ್ಕೇ ಬರುತ್ತಿರಲಿಲ್ಲ. ಈಗ ಬರಲು ಆರಂಭಿಸಿದ್ದಾರೆ' ಎಂದು ಕುಟುಕಿದರು.

ರಾಜೀನಾಮೆ ವಿಚಾರದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಜೊತೆ ಮಾತನಾಡದಿರುವ  ಬಗ್ಗೆ ಪ್ರಶ್ನಿಸಿದಾಗ, `ಈಶ್ವರಪ್ಪ ಅತ್ಯಂತ ನಾಲಾಯಕ್ ವ್ಯಕ್ತಿ. ಅವರ ಜೊತೆ ಮಾತನಾಡುವುದೇನಿದೆ' ಎಂದು ಮರುಪ್ರಶ್ನಿಸಿದರು.

`ಕೆಜೆಪಿ ಸಮಾವೇಶದಲ್ಲಿ ಭಾಗವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಲು ಬಿಜೆಪಿಗೆ ಹಕ್ಕಿಲ್ಲ. ಸರ್ಕಾರಕ್ಕೆ ಅವರು ಇನ್ನೂ ಬೆಂಬಲ ಕೊಡುತ್ತಿರುವುದಕ್ಕೆ ಧನ್ಯವಾದ ಹೇಳಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT