ADVERTISEMENT

ಬಿಜೆಪಿ ತೊರೆಯುವುದಿಲ್ಲ: ಕರುಣಾಕರ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ಹರಪನಹಳ್ಳಿ (ದಾವಣಗೆರೆ ಜಿಲ್ಲೆ): ~ನಾನು ಬಿಜೆಪಿಯಲ್ಲಿಯೇ ಇದ್ದೇನೆ, ಈ ಪಕ್ಷವನ್ನು ತೊರೆಯಲಾರೆ. ಬಿಎಸ್‌ಆರ್ ಪಕ್ಷ ಸೇರಲಾರೆ~ ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ಪುನರುಚ್ಚರಿಸಿದರು.

ಬುಧವಾರ ತಾಲ್ಲೂಕಿನ ಚಿರಸ್ತಹಳ್ಳಿ, ದುಗ್ಗಾವತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ವಿವಿಧ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಾದ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಬಳಿಕ, ನೀಲಗುಂದ ಗ್ರಾಮದ ವೆಂಕಟೇಶ್ವರ ಕಾಲೊನಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಸಾಕಷ್ಟು ಹೊಸ ಪಕ್ಷಗಳು ಬರುತ್ತಿವೆ; ಹೋಗುತ್ತಿವೆ. ಹಾಗಂತ ಎಲ್ಲಾ ಹೊಸ ಪಕ್ಷಗಳಿಗೆ ಸೇರ್ಪಡೆಯಾಗಲು ಸಾಧ್ಯವೆ? ಎಂದು ಪಕ್ಷೇತರ ಶಾಸಕ ಬಿ. ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಪಕ್ಷ ಸೇರ್ಪಡೆ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.

ತಮ್ಮದೇ ಜಿಲ್ಲೆಯ, ತಮ್ಮ ಆಪ್ತಬಳಗದ ಬಿ. ಶ್ರೀರಾಮುಲು ಸಂಘಟಿಸಲಿರುವ ಹೊಸ ಪಕ್ಷಕ್ಕೆ ಸೇರ್ಪಡೆಯಾಗುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ, ಯಾವುದೇ ಜಿಲ್ಲೆಯವರು ಹೊಸ ಪಕ್ಷ ಕಟ್ಟಲಿ, ನಾನಂತೂ ಬಿಜೆಪಿಯಲ್ಲಿದ್ದೇನೆ. ಆ ಪಕ್ಷ ತೊರೆಯುವ, ಇಲ್ಲವೇ ಹೊಸ ಪಕ್ಷ ಸೇರ್ಪಡೆಯಾಗುವ ಆಲೋಚನೆಗಳಂತೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಬಣಗಳ ಕುರಿತು ಕೇಳಲಾದ ಪ್ರಶ್ನೆಗೆ, ~ಮನೆ ಎಂದ ಮೇಲೆ ಭಿನ್ನಾಭಿಪ್ರಾಯಗಳು ಸಹಜ. ಅಂತಹ ಗೊಂದಲದ ವಾತಾವರಣ ಸದ್ಯದಲ್ಲಿಯೇ ತಿಳಿಯಾಗಲಿದೆ~ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.