ADVERTISEMENT

ಬಿದರಿ ಮನವಿಗೆ ಹೈಕೋರ್ಟ್ ಗರಂ: ಜಟಿಲವಾದ ಡಿಜಿಪಿ ನೇಮಕ

​ಪ್ರಜಾವಾಣಿ ವಾರ್ತೆ
Published 17 ಮೇ 2012, 19:30 IST
Last Updated 17 ಮೇ 2012, 19:30 IST

ಬೆಂಗಳೂರು: ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಹುದ್ದೆಯ ನೇಮಕ ವಿವಾದ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲಕ್ಕಿಂತ, ಈ ಪ್ರಕರಣದ ವಿಚಾರಣೆಯನ್ನು ಯಾವ ನ್ಯಾಯಮೂರ್ತಿಗಳು ನಡೆಸಬೇಕು ಎಂಬ ಪ್ರಶ್ನೆ ಈಗ ಜಟಿಲವಾಗಿದೆ.

ಕಾರಣ, ನ್ಯಾಯಮೂರ್ತಿಗಳಾದ ಎನ್.ಕುಮಾರ್ ಹಾಗೂ ಎಚ್.ಎಸ್.ಕೆಂಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈಗ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಇದೇ ನ್ಯಾಯಪೀಠವೇ ವಿಚಾರಣೆ ಮುಂದುವರಿಸಲು ತನ್ನ ಅಭ್ಯಂತರವೇನೂ ಇಲ್ಲ ಎಂದು ಸರ್ಕಾರ ತಿಳಿಸಿದೆ. ಆದರೆ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ವರ್ಗಾವಣೆಗೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ಶಂಕರ ಬಿದರಿ ಇದನ್ನು ಒಪ್ಪುತ್ತಿಲ್ಲ. ಪ್ರಕರಣದ ವಿಚಾರಣೆಯನ್ನು ಬೇರೆ ಪೀಠ ನಡೆಸಬೇಕು ಎನ್ನುವುದು ಅವರ ಕೋರಿಕೆ.

ಈ ಹಿನ್ನೆಲೆಯಲ್ಲಿ, ಪೀಠ ಬದಲಾವಣೆ ಕೋರಿದ ಅರ್ಜಿಯನ್ನು ರಿಜಿಸ್ಟ್ರಾರ್ ಕಚೇರಿಯ ಮುಂದೆ ಇಡಲು ನ್ಯಾಯಮೂರ್ತಿಗಳು ನಿರ್ದೇಶಿಸಿದರು. ರಿಜಿಸ್ಟ್ರಾರ್ ಅವರು ಬಿದರಿ ಅವರ ಮನವಿಯನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇಡಲಿದ್ದಾರೆ. ಈ ಮನವಿಯ ವಿಚಾರಣೆಯನ್ನು ಯಾರು ನಡೆಸಬೇಕು ಎಂಬ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ನಂತರ ತೀರ್ಮಾನಿಸಲಿದ್ದಾರೆ. ಇದಾದ ನಂತರ ಮುಖ್ಯ ಅರ್ಜಿಯ ವಿಚಾರಣೆ ಆರಂಭಗೊಳ್ಳಲಿದೆ. ಪೀಠ ಬದಲಾವಣೆ ಕೋರಿ ಬಿದರಿ ಸಲ್ಲಿಸಿದ್ದ ಮನವಿ ಕುರಿತಾಗಿ ಗುರುವಾರ ಹೈಕೋರ್ಟ್‌ನಲ್ಲಿ ವಾತಾವರಣ ಸ್ವಲ್ಪ ಹೊತ್ತು  `ಗರಂ~ ಆಯಿತು.

ADVERTISEMENT

ಮಾರ್ಚ್‌ನಲ್ಲಿ ಬಿದರಿ ವಿರುದ್ಧ ಇದೇ ಪೀಠ ಕೆಲವೊಂದು ಆಕ್ಷೇಪ ವ್ಯಕ್ತಪಡಿಸಿ ಡಿಜಿಪಿ ಹುದ್ದೆಯಿಂದ ಕೆಳಕ್ಕೆ ಇಳಿಯುವಂತೆ ಆದೇಶಿಸಿತ್ತು.ಬಳಿಕ ಬಿದರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ವಿಭಾಗೀಯ ಪೀಠದ ಆದೇಶಕ್ಕೆ ತಡೆ ನೀಡಿದ್ದ ಸುಪ್ರೀಂಕೋರ್ಟ್, ಪ್ರಕರಣದ ಮರು ವಿಚಾರಣೆ ನಡೆಸುವಂತೆ ಹೈಕೋರ್ಟ್‌ಗೆ ಸೂಚಿಸಿತ್ತು. ಈಗ ಪುನಃ ಅದೇ ವಿಭಾಗೀಯ ಪೀಠ ವಿಚಾರಣೆ ನಡೆಸಿದರೆ ಪಕ್ಷಪಾತ ಮಾಡುವ  ಸಾಧ್ಯತೆ ಇದೆ ಎನ್ನುವುದು ಬಿದರಿ ವಾದ.

ಬಿದರಿ ಪರ ವಕೀಲ ಎಸ್.ಎಂ.ಚಂದ್ರಶೇಖರ್ ವಾದ ಮಂಡಿಸಿದಾಗ ನ್ಯಾಯಮೂರ್ತಿಗಳು, `ನಾವೇ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಹೇಳಿದೆ. ಆ ನಿರ್ದೇಶನದಂತೆ ಮುಖ್ಯ ನ್ಯಾಯಮೂರ್ತಿಗಳು ಈ ಪೀಠವನ್ನು ರಚಿಸಿದ್ದಾರೆ. ಉನ್ನತ ಕೋರ್ಟ್  ಹಾಗೂ ಮುಖ್ಯ ನ್ಯಾಯಮೂರ್ತಿಗಳ ಆದೇಶವನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯ. ಡಿಜಿಪಿ ನೇಮಕ ವಿವಾದದಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತೇವೆ ಎಂದು ನಿಮಗೆ ಅನ್ನಿಸಿದ್ದರೆ, ಪೀಠ ಬದಲಾವಣೆ ಕೋರಿ ನೀವು ಸಲ್ಲಿಸಿರುವ ಮನವಿಯ ಕುರಿತು ಸರಿಯಾದ ಆದೇಶ ಹೊರಡಿಸುತ್ತೇವೆ ಎಂದು ನಿಮಗೆ ಹೇಗೆ ಅನ್ನಿಸುತ್ತದೆ~ ಎಂದು ಪ್ರಶ್ನಿಸಿದರು.

`ಅಷ್ಟಕ್ಕೂ ಪಕ್ಷಪಾತ ಮಾಡಲು ಬಿದರಿ ಅವರೇನು ನಮ್ಮ ವೈರಿಯೇ, ಕಾನೂನನ್ನು ಕಾಪಾಡುವುದು ನಮ್ಮ ಕರ್ತವ್ಯವಷ್ಟೆ. ಅರ್ಹತೆ ಆಧಾರದ ಮೇಲೆ ತೀರ್ಪು ನೀಡುವುದು ನಮ್ಮ ಜವಾಬ್ದಾರಿ. ಬೇರೆ ಪೀಠ ಬೇಕಿದ್ದರೆ ಅದನ್ನು ಸುಪ್ರೀಂಕೋರ್ಟ್‌ನಲ್ಲಿ ಹೇಳಬೇಕಿತ್ತು. ಈಗ ಇಲ್ಲಿ ಹೇಳಿದರೆ ಏನು ಪ್ರಯೋಜನ, ನಿಮ್ಮ ಈ ಹೇಳಿಕೆಗಳು ನ್ಯಾಯಾಂಗ ನಿಂದನೆ ಆಗುತ್ತವೆ ಎಂಬ ಎಚ್ಚರಿಕೆ ಇರಲಿ~ ಎಂದು ವಕೀಲರನ್ನು ನ್ಯಾ.ಕುಮಾರ್ ತರಾಟೆಗೆ ತೆಗೆದುಕೊಂಡರು.

ವಕೀಲರಿಗೆ ಕಿವಿಮಾತು:  ಪೀಠ ಬದಲಾವಣೆಗೆ ಒತ್ತುಕೊಟ್ಟ ವಕೀಲ ಚಂದ್ರಶೇಖರ್ ಅವರನ್ನು ಉದ್ದೇಶಿಸಿದ ನ್ಯಾಯಮೂರ್ತಿಗಳು, `ಇಲ್ಲಿ ಸಾವಿರಾರು ವಕೀಲರು ಬಂದು ಹೋಗುತ್ತಾರೆ. ಆದರೆ ಅವರಲ್ಲಿ ಕೆಲವೇ ಕೆಲವರ ಹೆಸರು ಮಾತ್ರ ಚಿರಕಾಲ ಉಳಿಯುತ್ತದೆ. ಅಂತಹ ವಕೀಲರಾಗಲು ಪ್ರಯತ್ನಿಸಬೇಕು. ನ್ಯಾಯಮೂರ್ತಿಗಳಂತೆ ವಕೀಲರಿಗೂ ಅವರದ್ದೇ ಆದ ಜವಾಬ್ದಾರಿ ಇರುತ್ತದೆ. ನ್ಯಾಯಾಲಯದ ಘನತೆಯನ್ನು ಕಾಪಾಡುವುದು ಅವರ ಕರ್ತವ್ಯವಾಗುತ್ತದೆ~ ಎಂದು ಕಿವಿ ಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.