ADVERTISEMENT

ಬೀದರ್‌ನ ಇರಾನಿ ಗಲ್ಲಿಯ 36 ಜನ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ಬೀದರ್: ಬೆಂಗಳೂರಿನ ವಿಶೇಷ ಪೊಲೀಸ್ ತಂಡವು ಶನಿವಾರ ನಸುಕಿನ ಜಾವ ಇಲ್ಲಿನ ಇರಾನಿ ಗಲ್ಲಿಯ ಮೇಲೆ ಹಠಾತ್ ದಾಳಿ ನಡೆಸಿ 36 ಜನರನ್ನು ವಶಕ್ಕೆ ತೆಗೆದುಕೊಂಡಿದೆ. ಪೊಲೀಸರಂತೆ ವೇಷ ಧರಿಸಿ ಜನರ ದಿಕ್ಕು ತಪ್ಪಿಸಿ ಮೋಸ, ಲೂಟಿ ಮಾಡುತ್ತಿದ್ದ ಆರೋಪಗಳಿಗೆ ಸಂಬಂಧಿಸಿ ಈ ದಾಳಿ ನಡೆದಿದೆ.

ಬೆಂಗಳೂರಿನ ವಿವಿಧೆಡೆ ಜನರ ಗಮನ ಬೇರೆ ಕಡೆಗೆ ಸೆಳೆದು ಅವರ ಬಳಿಯಿದ್ದ ಚಿನ್ನಾಭರಣ ಲಪಟಾಯಿಸುತ್ತಿದ್ದ ಆರೋಪಿಗಳು ಇರಾನಿ ಕಾಲೊನಿಯಲ್ಲಿ ಇರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಸತೀಶಕುಮಾರ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಮೋಸ ವಂಚನೆಯ ಮೂಲಕ ಕಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಶಾಮೀಲಾಗಿರುವ ಆರೋಪಿಗಳು ಬೀದರ್‌ನ ಇರಾನಿ ಗಲ್ಲಿಯಲ್ಲಿ ವಾಸಿಸುತ್ತಿರುವ ಬಗ್ಗೆ ಬೆಂಗಳೂರು ಪೊಲೀಸರು ವಿವರ ಸಂಗ್ರಹಿಸಿದ್ದರು. ಈ ಕುರಿತು ನನಗೂ ಮಾಹಿತಿ ನೀಡಿದ್ದರು. ದಾಳಿಯ ವೇಳೆ ಕೆಲವರು ವಿರೋಧ ವ್ಯಕ್ತಪಡಿಸಿದರು. ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲೂ ಪ್ರಯತ್ನಿಸಿದರು. ಪೊಲೀಸರು ಅದನ್ನು ವಿಫಲಗೊಳಿಸಿದರು~ ಎಂದು ವಿವರಿಸಿದರು.

ಬೆಂಗಳೂರಿನ ಇಬ್ಬರು ಡಿಸಿಪಿ, ಒಬ್ಬರು ಎಸಿಪಿ, 10 ಇನ್‌ಸ್ಪೆಕ್ಟರ್, 60 ಮಹಿಳಾ ಪೇದೆಗಳು ಹಾಗೂ 150 ಪೇದೆಗಳು ದಾಳಿಯಲ್ಲಿ ಭಾಗವಹಿಸಿದ್ದರು. ಅವರ ಜೊತೆಗೆ ಬೀದರ್ ಜಿಲ್ಲೆಯ ನಾಲ್ವರು ಇನ್ಸ್‌ಪೆಕ್ಟರ್‌ಗಳು, ಮೂವರು ಸಬ್ ಇನ್‌ಸ್ಪೆಕ್ಟರ್ ಹಾಗೂ 25 ಜನ ಪೇದೆಗಳು ನೆರವು ನೀಡಿದ್ದರು. ಬೆಂಗಳೂರಿನಿಂದ ಪೊಲೀಸರ ವಿಶೇಷ ತಂಡವು ಖಾಸಗಿ ವಾಹನಗಳಲ್ಲಿ ಆಗಮಿಸಿತ್ತು. ಬೆಳಗಿನ ಜಾವ 2 ರಿಂದ 4 ಗಂಟೆವರೆಗೆ ಈ ದಾಳಿ ನಡೆಸಲಾಯಿತು. ಅಪಾರ ಪ್ರಮಾಣದ ಚಿನ್ನ ವಶಪಡಿಸಿಕೊಳ್ಳಲಾಯಿತು ಎಂದು ಹೇಳಿದರು.

ಕೆಲ ಮನೆಗಳಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ನಗದು ಪತ್ತೆಯಾಗಿದೆ. ಮಂಚದ ಮೇಲೆ ಮಲಗಿಕೊಂಡಿದ್ದ ಮಹಿಳೆಯೊಬ್ಬಳು ಶಸ್ತ್ರಚಕಿತ್ಸೆ ಆಗಿದೆ. ಹೀಗಾಗಿ ಏಳಲು ಸಾಧ್ಯವಿಲ್ಲ ಎನ್ನುವಂತೆ ನಟಿಸಿದಳು. ಮಹಿಳಾ ಪೊಲೀಸರು ತಪಾಸಣೆ ನಡೆಸಿದಾಗ ಹಾಸಿಗೆಯ ಕೆಳಗೆ 35 ತೊಲ ಚಿನ್ನ ಪತ್ತೆಯಾಯಿತು ಎಂದು ತಿಳಿಸಿದರು.

ಬೀದರ್‌ನಲ್ಲಿದ್ದುಕೊಂಡು ಬೇರೆ ಕಡೆ ಕಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ವಿಶೇಷ ನಿಗಾ ವಹಿಸಲಾಗುತ್ತದೆ. ಕಾರ್ಯಾಚರಣೆ ವೇಳೆ ಮಹಿಳೆಯರ ಮೇಲೆ ಯಾವುದೇ ದೌರ್ಜನ್ಯ ನಡೆದಿಲ್ಲ. ಅಂತಹ ಆರೋಪಗಳ ಬಗ್ಗೆ ಕುರಿತು ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು. ಆರೋಪಿಗಳನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.