ADVERTISEMENT

ಬೇಬಿಬೆಟ್ಟಕ್ಕೆ ಮಾನವ ಹಕ್ಕುಗಳ ಆಯೋಗ ಭೇಟಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST

ಮಂಡ್ಯ: ‘ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿ ಸ್ಫೋಟದಿಂದ ಜೀವ ಕಳೆದುಕೊಳ್ಳುತ್ತಿರುವ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಮಾನವ ಹಕ್ಕುಗಳ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾವು–ನೋವುಗಳ ಮಾಹಿತಿ ಪಡೆಯಬೇಕು’ ಎಂದು ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಇಲ್ಲಿ ಮಂಗಳವಾರ ಆಗ್ರಹಿಸಿದರು.

‘ಶಕ್ತಿಯುತ ಸಿಡಿಮದ್ದುಗಳನ್ನು ಬೇಬಿ ಬೆಟ್ಟದಲ್ಲಿ ಸಿಡಿಸುತ್ತಿದ್ದಾರೆ. ಅಕ್ರಮ ಗಣಿಗಳ ಮಾಲೀಕರು ಪ್ರಾಕೃತಿಕ ಸಂಪನ್ಮೂಲವನ್ನು ನಾಶ ಮಾಡುವ ಉಗ್ರಗಾಮಿಗಳಾಗಿದ್ದಾರೆ. ಮೆಗ್ಗರ್ ಸ್ಫೋಟದಿಂದ ಕಾರ್ಮಿಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಕಳೆದ ವಾರ ನಡೆದ ಸ್ಫೋಟದಲ್ಲಿ ಕಾರ್ಮಿಕ ಮೃತಪಟ್ಟಿದ್ದು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಮತ್ತೊಬ್ಬ ಕಾರ್ಮಿಕ ಮೃತಪಟ್ಟಿದ್ದು ಪ್ರಕರಣವನ್ನು ಮುಚ್ಚಿಹಾಕಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಕಲ್ಲು ಗಣಿ ಸ್ಫೋಟದಿಂದ ಸಾವು–ನೋವುಗಳಿಗೆ ಲೆಕ್ಕವಿಲ್ಲದಂತಾಗಿದ್ದು ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಹೀಗಾಗಿ ಮಾನವ ಹಕ್ಕುಗಳ ಆಯೋಗ ಗಣಿ ಪ್ರದೇಶಕ್ಕೆ ಭೇಟಿ ನೀಡಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ರಾಜ್ಯದಲ್ಲಿ ಗಣಿ ನೀತಿ ಇಲ್ಲದೆ ಅಕ್ರಮ ಗಣಿಗಾರಿಕೆ ತಲೆಎತ್ತಿದೆ. ಪಾಂಡವಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿ ವಿರುದ್ಧ ನಿರಂತರ ಹೋರಾಟ ನಡೆಸಲು ರೈತಸಂಘ ನಿರ್ಧರಿಸಿದೆ. ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸುವವರೆಗೂ ಹೋರಾಟ ನಡೆಸುತ್ತೇವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.