ಬ್ರಹ್ಮಾವರ: ಟೆಂಪೊದಲ್ಲಿ ದನವನ್ನು ಸಾಗಿಸುತ್ತಿದ್ದ ಬಿಜೆಪಿ ಕಾರ್ಯಕರ್ತನ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕೊಲೆ ಮಾಡಿದ ಘಟನೆ ಬ್ರಹ್ಮಾವರದ ಕೊಕ್ಕರ್ಣೆಯ ಕೆಂಜೂರು ಶಾಲೆಯ ಬಳಿ ಬುಧವಾರ ಮಧ್ಯರಾತ್ರಿ ನಡೆದಿದೆ.
ಕೆಂಜೂರಿನ ಪ್ರವೀಣ ಪೂಜಾರಿ (28) ಕೊಲೆಯಾದ ಬಿಜೆಪಿ ಕಾರ್ಯಕರ್ತ. ಪ್ರವೀಣ್ ಮತ್ತು ಅವರ ಸ್ನೇಹಿತ ಅಕ್ಷಯ್ ದೇವಾಡಿಗ (20) ವಾಹನದಲ್ಲಿ 4 ದನಗಳನ್ನು ಸಾಗಿಸುತ್ತಿದ್ದರು. ಅವರ ಮೇಲೆ ಹಿಂದೂ ಜಾಗರಣ ವೇದಿಕೆಯ ಸುಮಾರು 30 ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಪ್ರವೀಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಕ್ಷಯ್ ಕೂಡ ಗಾಯಗೊಂಡಿದ್ದು ಬ್ರಹ್ಮಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬ್ರಹ್ಮಾವರದಲ್ಲಿ ಪೆಟ್ರೋಲ್ ಬಂಕ್ ಹೊಂದಿರುವ ಹಿಂದೂ ಜಾಗರಣ ವೇದಿಕೆ ಮುಖಂಡ ಅರವಿಂದ ಸೇರಿಗಾರ ಎಂಬಾತ ತನ್ನ ಸಹಚರ ಪ್ರಕಾಶ್‌ನೊಂದಿಗೆ ಸೇರಿ ಈ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ. ಗುರುವಾರ ಪೆಟ್ರೋಲ್ ಬಂಕ್‌ಗೆ ಬೀಗ ಹಾಕಲಾಗಿದೆ.
ಪ್ರಕರಣದ ಸಂಬಂಧ 17 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗೆ ಶೋಧ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಕೆ.ಟಿ. ಬಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.