ADVERTISEMENT

‘ಮಕ್ಕಳ ಕಳ್ಳರು’ ವದಂತಿ ಅಷ್ಟೆ!

25 ದಿನಗಳಲ್ಲಿ 81 ಅಮಾಯಕರಿಗೆ ಥಳಿತ: ರಾಜ್ಯದಾದ್ಯಂತ ಜಾಗೃತಿ

ಎಂ.ಸಿ.ಮಂಜುನಾಥ
Published 25 ಮೇ 2018, 2:17 IST
Last Updated 25 ಮೇ 2018, 2:17 IST
‘ಮಕ್ಕಳ ಕಳ್ಳರು’ ವದಂತಿ ಅಷ್ಟೆ!
‘ಮಕ್ಕಳ ಕಳ್ಳರು’ ವದಂತಿ ಅಷ್ಟೆ!   

ಬೆಂಗಳೂರು: ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಶುರುವಾದ ಮಕ್ಕಳ ಕಳ್ಳರ ವದಂತಿ, ಗಡಿ ಜಿಲ್ಲೆಗಳ ಮೂಲಕ ರಾಜ್ಯಕ್ಕೂ ನುಸುಳಿ ಪೋಷಕರು ಕಂಗಾಲಾಗುವಂತೆ ಮಾಡಿದೆ. ಪೊಲೀಸರು ಜೀಪು ಹಾಗೂ ಆಟೊಗಳಿಗೆ ಧ್ವನಿವರ್ಧಕ ಕಟ್ಟಿಕೊಂಡು ಜಾಗೃತಿ ಮೂಡಿಸುತ್ತಿದ್ದರೂ, ಜನ ಅಮಾಯಕರನ್ನು ಥಳಿಸುತ್ತಿರುವ ಪ್ರಕರಣಗಳು ನಿಲ್ಲುತ್ತಿಲ್ಲ. ‌

25 ದಿನಗಳಲ್ಲಿ ರಾಜ್ಯದಲ್ಲಿ ಇಂಥ 68 ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಭಿಕ್ಷುಕರು, ಮಾನಸಿಕ ಅಸ್ವಸ್ಥರು, ಕೂಲಿಕಾರ್ಮಿಕರು, ಇಟ್ಟಿಗೆ ಗೂಡು
ಗಳಲ್ಲಿ ಕೆಲಸ ಮಾಡುವವರು ಸೇರಿ 81 ಅಮಾಯಕರು ಸಾರ್ವಜನಿಕರಿಂದ ಹಲ್ಲೆಗೆ ಒಳಗಾಗಿದ್ದಾರೆ. ಚಾಮರಾಜಪೇಟೆಯ ಪೆನ್ಶನ್‌ ರಸ್ತೆಯಲ್ಲಿ ಬುಧ
ವಾರ ರಾಜಸ್ಥಾನದ ಕಾಲುರಾಮ್ ಎಂಬಾತನನ್ನು ಜನ ಮಕ್ಕಳ ಕಳ್ಳನೆಂದು ಹೊಡೆದು ಸಾಯಿಸಿದ್ದಾರೆ.

ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿ–ಐಜಿಪಿ ನೀಲಮಣಿ ಎನ್‌.ರಾಜು, ವದಂತಿಗಳಿಗೆ ಕಿವಿಗೊಡದಂತೆ ತಮ್ಮ ವ್ಯಾಪ್ತಿಯಲ್ಲಿ ಜನ ಜಾಗೃತಿ ಮೂಡಿಸುವಂತೆ ಎಲ್ಲ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿದ್ದಾರೆ. ಅದರನ್ವಯ ಪೊಲೀಸರು ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹಳ್ಳಿಗಳಲ್ಲಿ ಈ ಬಗ್ಗೆ ಪ್ರತಿದಿನ ಡಂಗುರವನ್ನೂ ಸಾರಿ ಜನರ ಆತಂಕ ದೂರ ಮಾಡುವ ಪ್ರಯತ್ನವೂ ನಡೆಯುತ್ತಿದೆ.

ADVERTISEMENT

‘ಪ್ರಜಾವಾಣಿ’ ಜತೆ ಮಾತನಾಡಿದ ಮಕ್ಕಳ ಸಹಾಯವಾಣಿ (1098) ಸಿಬ್ಬಂದಿ, ‘ಮನೆ ಹತ್ತಿರ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿದ್ದಾರೆ ಎಂದು ಪ್ರತಿದಿನ 10 ರಿಂದ 15 ಮಂದಿ ಕರೆ ಮಾಡುತ್ತಾರೆ. ಚಿತ್ರದುರ್ಗ, ಬಳ್ಳಾರಿ, ಯಾದಗಿರಿ, ಕಲಬುರ್ಗಿ ಹಾಗೂ ಹಾಸನ ಜಿಲ್ಲೆಗಳಿಂದ ಹೆಚ್ಚು ದೂರುಗಳು ಬರುತ್ತಿವೆ. ಕೂಡಲೇ, ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸುತ್ತಿದ್ದೇವೆ’ ಎಂದು ಹೇಳಿದರು.

ವದಂತಿ ಶುರುವಾಗಿದ್ದು ಹೀಗೆ: ‘ಉತ್ತರ ಭಾರತದಿಂದ 300ಕ್ಕೂ ಹೆಚ್ಚು ಮಕ್ಕಳ ಕಳ್ಳರು ತಮಿಳುನಾಡಿಗೆ ಬಂದಿದ್ದಾರೆ. ಎಲ್ಲರೂ ಜಾಗೃತರಾಗಿರಿ. ನಿಮ್ಮ ಮಕ್ಕಳನ್ನು ಯಾವ ಕ್ಷಣದಲ್ಲಾದರೂ ಅಪಹರಿಸಿಕೊಂಡು ಹೋಗಿ ಅಂಗಾಂಗಗಳನ್ನು ಕದಿಯುತ್ತಾರೆ. ಈ ಸಂದೇಶವನ್ನು ನಿಮ್ಮ ಆಪ್ತರಿಗೂ ರವಾನಿಸಿ, ಅವರ ಮಕ್ಕಳನ್ನೂ ರಕ್ಷಿಸಿ’ ಎಂಬ ಸಂದೇಶ ಹಾಗೂ ವಿಡಿಯೊ ತುಣುಕುಗಳು ಎರಡು ತಿಂಗಳ ಹಿಂದೆ ತಮಿಳುನಾಡಿನಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಈ ಬಗ್ಗೆ ಸ್ಥಳೀಯ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನವಾಗಲಿಲ್ಲ. ಜನ ಸಂಶಯದ ಮೇಲೆ ಅಮಾಯಕರನ್ನು ಮನಸೋಇಚ್ಛೆ ಥಳಿಸಲು ಪ್ರಾರಂಭಿಸಿದರು. ತಿರುವಣ್ಣಾಮಲೈನಲ್ಲಿ ರುಕ್ಮಿಣಿ  (65) ಎಂಬ ಹಿರಿಯ ಮಹಿಳೆಯ ಹತ್ಯೆಯೂ ಆಯಿತು. ಈ ವದಂತಿಯಿಂದ ನಡೆದ ಮೊದಲ ಹತ್ಯೆ ಅದು.

‘ಪೋಷಕರಿಗೆ ದೃಶ್ಯ ಕಣ್ಮುಂದೆ ಬರುತ್ತದೆ’

‘ಜನ ಅಂತೆ–ಕಂತೆಗಳನ್ನು ಬಹಳ ಬೇಗ ನಂಬುತ್ತಾರೆ. ಅದೂ, ಮಕ್ಕಳ ಸುರಕ್ಷತೆ ವಿಚಾರವಾದ ಕಾರಣ ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದಾರೆ. ಪೋಷಕರು ವದಂತಿಯ ಸಂದೇಶ ನೋಡುತ್ತಿದ್ದಂತೆಯೇ, ತಮ್ಮ ಮಕ್ಕಳನ್ನು ಅಪಹರಿಸಿದಂಥ ದೃಶ್ಯ ಕಣ್ಮುಂದೆ ಬರುತ್ತದೆ. ಹೀಗಾಗಿ, ಮಾಸಿದ ಬಟ್ಟೆ ತೊಟ್ಟ ಹಾಗೂ ಗಡ್ಡಬಿಟ್ಟು ಓಡಾಡುವ ಯಾವುದೇ ವ್ಯಕ್ತಿಯನ್ನೂ ನೋಡಿದರೂ, ಕಳ್ಳನೆಂದೇ ಭಾವಿಸುತ್ತಾರೆ’ ಎಂದು ಮನೋವೈದ್ಯರೂ ಆಗಿರುವ ನಿಮ್ಹಾನ್ಸ್ ನಿರ್ದೇಶಕ ಬಿ.ಎನ್.ಗಂಗಾಧರ್ ಅಭಿಪ್ರಾಯಪಟ್ಟರು.

‘ಮತ್ತೊಂದು ನರಮೇಧ ನಡೆಯಬಾರದು’

‘2011ರಲ್ಲಿ ಚಿಂತಾಮಣಿಯಲ್ಲಿ ಕಳ್ಳರೆಂದು ಭಾವಿಸಿ ಜನ 11 ಮಂದಿಯನ್ನು ದೊಣ್ಣೆಗಳಿಂದ ಹೊಡೆದು ಸಾಯಿಸಿದ್ದರು. ಈಗಿನ ಪರಿಸ್ಥಿತಿ ಅಂದಿನ ನರಮೇಧವನ್ನು ನೆನಪಿಸುತ್ತಿದೆ. ಸುಳ್ಳು ಸುದ್ದಿಯಿಂದಾಗಿ ಅಂಥ ಮತ್ತೊಂದು ದುರಂತ ನಡೆಯಬಾರದು. ಹೀಗಾಗಿ, ಎಲ್ಲ ಜಿಲ್ಲೆಗಳಲ್ಲೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್‌ಪಂತ್ ‘ಪ್ರಜಾವಾಣಿ’ಗೆ ತಿಳಿಸಿದರು.

* ರಾಜ್ಯದ ಎಲ್ಲ ಐಜಿಪಿಗಳ ಮತ್ತು ಎಸ್ಪಿ ಜತೆ ಮಾತನಾಡಿದ್ದೇನೆ. ಎಲ್ಲೂ ಮಕ್ಕಳ ಅಪಹರಣ ನಡೆದಿಲ್ಲ. ಸಾರ್ವಜನಿಕರು ವದಂತಿಗೆ ಕಿವಿಗೊಡಬಾರದು

-ನೀಲಮಣಿ ಎನ್‌.ರಾಜು, ಡಿಜಿ–ಐಜಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.