ಮೈಸೂರು: ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಕಾಡಲ್ಲಿ ಮಂಗಳವಾರ ಬೆಂಕಿ ಬಿದ್ದಿದೆ. ಅರಣ್ಯ ವಲಯದ ಸಿಬ್ಬಂದಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಎಚ್.ಡಿ. ಕೋಟೆ ವರದಿ: ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯದ ಹೆಬ್ಬಾಳ ಗಸ್ತಿನಲ್ಲಿ ಮಂಗಳವಾರ ಮಧ್ಯಾಹ್ನ ಸುಮಾರು 1 ಗಂಟೆ ಸಮಯದಲ್ಲಿ ಕಾಡಿನ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 40ರಿಂದ 50 ಎಕರೆ ಕಾಡು ಭಸ್ಮವಾಗಿದೆ.
ಅಂತರಸಂತೆ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಪ್ರಶಾಂತ್‌ಕುಮಾರ್ ಪೈ, ಬಳ್ಳೆ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಎ.ವಿ. ಸತೀಶ್ ಮತ್ತು ಎರಡು ವನ್ಯಜೀವಿ ವಲಯದ ಸಿಬ್ಬಂದಿಯೊಂದಿಗೆ ಜಂಗಲ್ ಲಾಡ್ಜ್ಸ್, ಸೆರಾಯ್ ರೆಸಾಟರ್್ ಸಿಬ್ಬಂದಿ ಮತ್ತು ಗುಂಡತ್ತೂರು ಹಾಗೂ ಮಳಲಿ ಗ್ರಾಮದ ಅನೇಕ ಗ್ರಾಮಸ್ಥರು ಬೆಂಕಿ ಆರಿಸುವಿಕೆಯಲ್ಲಿ ಕೈ ಜೋಡಿಸಿದ್ದರಿಂದ ಸಂಜೆ 5 ಗಂಟೆ ವೇಳೆಯಲ್ಲಿ ಬೆಂಕಿಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾದರು.
ಗೋಣಿಕೊಪ್ಪಲು ವರದಿ: ತಿತಿಮತಿ ಸಮೀಪದ ದೇವಮಚ್ಚಿ ಅಕ್ಕಿಮಾಳ ಅರಣ್ಯ ಪ್ರದೇಶಕ್ಕೆ ಮಂಗಳವಾರ ಬೆಂಕಿ ಬಿದ್ದಿದೆ. ಅಗ್ನಿಯ ಕೆನ್ನಾಲಿಗೆ ಭೀಕರವಾಗಿದ್ದು, ಬೆಂಕಿಯ ಕಿಡಿಗಳು ಪಕ್ಕದಲ್ಲಿದ್ದ ದನದ ಕೊಟ್ಟಿಗೆಯ ಮೇಲೆ ಬಿದ್ದು ಎರಡು ಕೊಟ್ಟಿಗೆಗಳು ಸುಟ್ಟುಹೋಗಿವೆ. ಪಕ್ಕದ ಮನೆಗೂ ಬೆಂಕಿ ಹರಡಿದ್ದು, ಸಾರ್ವಜನಿಕರು ಇದನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ.
ಅಕ್ಕಿಮಾಳದ ನಿವಾಸಿಗಳಾದ ಅಗಸ್ಟಿನ್ ಅವರ ಕೊಟ್ಟಿಗೆ ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟುಹೋಗಿದೆ. ಭಾಗ್ಯಮ್ಮ ಅವರ ಮನೆಗೆ ಬೆಂಕಿ ಹರಡಿದ ಸಂದರ್ಭ ಟಾಟಾ ಕಾಫಿ ಸಂಸ್ಥೆಯಿಂದ ಬಂದ 2 ನೀರಿನ ಟ್ಯಾಂಕರ್‌ಗಳು ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತವನ್ನು ತಪ್ಪಿಸಿವೆ.
ಅರಣ್ಯದ ಅಂಚಿನಲ್ಲಿರುವ ಮೂಡಗದ್ದೆ ರಮೇಶ್ ಅವರ ಕಾಫಿ ತೋಟಕ್ಕೂ ಬೆಂಕಿ ಹರಡಿತ್ತು. ನಂತರ ಗೋಣಿಕೊಪ್ಪಲಿನ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.
ಹುಣಸೂರು ವರದಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಅಂಟಿಕೊಂಡ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿರುವ ವರದಿ ತಡವಾಗಿ ಬೆಳಕಿಗೆ ಬಂದಿದೆ.
ವೀರನಹೊಸಹಳ್ಳಿ ವಲಯಕ್ಕೆ ಸೇರಿದ ಗುರುಪುರ ಟಿಬೇಟನ್ ಪುನರ್ವಸತಿ ಕೇಂದ್ರಕ್ಕೆ ಹೊಂದಿಕೊಂಡಿದ್ದ ಹುಲ್ಲುಗಾವಲು ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ವೀರನಹೊಸಹಳ್ಳಿ ವಲಯ ಅರಣ್ಯಾಧಿಕಾರಿ ರಾಜಪ್ಪ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ಹತೋಟಿಗೆ ತಂದರು.
ಮತ್ತೊಂದು ಪ್ರಕರಣದಲ್ಲಿ ಮತ್ತಿಗೋಡು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಅಯ್ಯನಕೆರೆ ಹಾಡಿ ಭಾಗದ ಪ್ರಾದೇಶಿಕ ಅರಣ್ಯ ವಿಭಾಗಕ್ಕೆ ಸೇರಿದ ಕೋರ್ ಅರಣ್ಯ ಪ್ರದೇಶಕ್ಕೆ ಬೆಂಕಿ ತಗಲಿ ಅಂದಾಜು 10–15 ಎಕರೆ ಪ್ರದೇಶ ಸಂಪೂರ್ಣ ಭಸ್ಮಗೊಂಡಿದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ವಿಜಯಕುಮಾರ್, ಅಯ್ಯನಕೆರೆ ಹಾಡಿ ಪ್ರದೇಶಕ್ಕೆ ಸೇರಿದ ಅರಣ್ಯಕ್ಕೆ ಬೆಂಕಿ ಬಿದ್ದಿಲ್ಲ. ಆ ಪ್ರದೇಶ ಪ್ರಾದೇಶಿಕ ಅರಣ್ಯ ವಿಭಾಗಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗುಂಡ್ಲುಪೇಟೆ ವರದಿ: ಸೋಮವಾರ ರಾತ್ರಿ 8 ಗಂಟೆ ವೇಳೆಗೆ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಕರಡಿಕಲ್ಲು ಗುಡ್ಡಕ್ಕೆ ಬೆಂಕಿ ಬಿದ್ದು, ಸುಮಾರು 3 ಎಕರೆ ಅರಣ್ಯ ಭಸ್ಮಗೊಂಡಿತ್ತು. ವಲಯ ಅರಣ್ಯಾಧಿಕಾರಿ ಪರಮೇಶ್ ಮತ್ತು ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಮದ್ದೂರು ಅರಣ್ಯ ವಲಯ ಕಚೇರಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಒಳಕಾಡಿನ ಎರೆದಿಬ್ಬದ ಬಳಿ ಸೋಮವಾರ ರಾತ್ರಿ ಕಾಣಿಸಿಕೊಂಡ ಬೆಂಕಿಗೆ 5 ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ. ಇಲ್ಲಿ ಬಿದಿರು ಬೆಳೆದಿರದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ. ನೆರೆಯ ಗ್ರಾಮದ ದುಷ್ಕರ್ಮಿಗಳು ಬೆಂಕಿ ಹಾಕಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶಂಕಿಸಿದ್ದಾರೆ.
‘ಮದ್ದೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿಕೊಂಡು ಸ್ವಲ್ಪ ಹಾನಿಯಾಗಿದೆ. ಹೆಚ್ಚಿನ ಹಾನಿ ಸಂಭವಿಸಿಲ್ಲ. ಈ ಸ್ಥಳ ಹೊರತುಪಡಿಸಿ ಯಾವುದೇ ಪ್ರದೇಶದಲ್ಲಿ ಬೆಂಕಿ ಬಿದ್ದಿಲ್ಲ’ ಎಂದು ವಲಯಾರಣ್ಯಾಧಿಕಾರಿ ಟಿ.ಎ. ರತ್ನಪ್ರಭಾ ಖಚಿತಪಡಿಸಿದರು.
ಓಂಕಾರ ಅರಣ್ಯ ವಲಯ: ಓಂಕಾರ ಅರಣ್ಯದಲ್ಲಿ ಮಂಗಳವಾರ ಅಲ್ಪ ಪ್ರಮಾಣದಲ್ಲಿ ಭೂಮಿ ಮಟ್ಟದ ಬೆಂಕಿ ಕಾಣಿಸಿಕೊಂಡಿದೆ. ವಲಯ ಕಚೇರಿ ಸಮೀಪ ಇರುವ ಬೇಗೂರು–- ಹೆಡಿಯಾಲ ರಸ್ತೆಯ ಪಾರ್ಶ್ವದಲ್ಲಿ ಕಿಡಿಗೇಡಿಗಳು ಬೆಂಕಿ ಹಾಕಿರುವುದರಿಂದ ಕುರುಚಲು ಗಿಡಗಳು ಭಸ್ಮವಾದವು. ತಕ್ಷಣ ಕಾರ್ಯಪ್ರವೃತ್ತರಾದ ವಲಯ ಅರಣ್ಯಾಧಿಕಾರಿ ಸತೀಶ್ ಹಾಗೂ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶ್ವಸಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.