ADVERTISEMENT

ಮತ್ತೆ ಬರಗಾಲದ ದವಡೆಗೆ ಮಂಡ್ಯ

ಬಸವರಾಜ ಹವಾಲ್ದಾರ
Published 13 ಜೂನ್ 2012, 19:30 IST
Last Updated 13 ಜೂನ್ 2012, 19:30 IST
ಮತ್ತೆ ಬರಗಾಲದ ದವಡೆಗೆ ಮಂಡ್ಯ
ಮತ್ತೆ ಬರಗಾಲದ ದವಡೆಗೆ ಮಂಡ್ಯ   

ಮಂಡ್ಯ:  ಜಿಲ್ಲೆಯ ಏಳೂ ಬರ ಪೀಡಿತ ತಾಲ್ಲೂಕುಗಳಲ್ಲಿ ಮತ್ತೊಮ್ಮೆ ಬರದ ಛಾಯೆ ಆವರಿಸಿದೆ. ಕಪ್ಪು ಮೋಡಗಳು ಹನಿಯಾಗಿ ಧರೆಗೆ ಇಳಿಯುತ್ತಿಲ್ಲ. ಪರಿಣಾಮ ಒಂದೆಡೆ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿರುವ ಬೆಳೆ ಕಮರುತ್ತಿದೆ. ಇನ್ನೊಂದೆಡೆ ಬಿತ್ತನೆಯ ಕಾರ್ಯ ಕುಂಠಿತಗೊಂಡಿದೆ.

ಮುಂಗಾರು ಪೂರ್ವ ಮಳೆಗೆ ಬಿತ್ತನೆಯಾಗಿದ್ದ ದ್ವಿದಳ ಧಾನ್ಯ ಬೆಳೆಗಳು ಬಹುತೇಕ ಒಣಗಿವೆ. ಕೆಆರ್‌ಎಸ್ ಅಣೆಕಟ್ಟಿನ ನಾಲೆಯ ನೀರು ಅವಲಂಬಿಸಿದ್ದ ಬೆಳೆಗಳು, ನಾಲೆಯಲ್ಲಿ ನೀರಿಲ್ಲದ ಕಾರಣ ಒಣಗಲಾರಂಭಿಸಿವೆ. ಜಿಲ್ಲೆಯ 4,100 ಹೆಕ್ಟೇರ್‌ನಲ್ಲಿ ಎಳ್ಳು, 3,481 ಹೆಕ್ಟೇರ್‌ನಲ್ಲಿ ಅಲಸಂದೆ, 308 ಹೆಕ್ಟೇರ್‌ನಲ್ಲಿ ಉದ್ದು, 251 ಹೆಕ್ಟೇರ್‌ನಲ್ಲಿ ಹೆಸರು ಸೇರಿದಂತೆ 9,893 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಆದರೆ ಮಳೆ ಅಭಾವದಿಂದ ಈ ಬೆಳೆಗಳೆಲ್ಲಾ ನೆಲ ಕಚ್ಚಿವೆ.

ಜಿಲ್ಲೆಯಲ್ಲಿ ಒಟ್ಟು 2,01,300 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಕೇವಲ 9,893 ಅಂದರೆ ಶೇ 4.9 ರಷ್ಟು ಮಾತ್ರ ಬಿತ್ತನೆಯಾಗಿದೆ. ಈಗ ಬಿತ್ತನೆಯಾಗಿರುವ ಬೆಳೆಯೂ ಕೈಗೆಟುಕುತ್ತಿಲ್ಲ. ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದಲ್ಲಿ 63,256 ಹೆಕ್ಟೇರ್ ಬತ್ತ, 24,882 ಹೆಕ್ಟೇರ್ ಕಬ್ಬು, 8,794 ತೋಟಗಾರಿಕೆ ಬೆಳೆ ಅಲ್ಲದೆ 10,400 ಹೆಕ್ಟೇರ್‌ನಷ್ಟು ಪ್ರದೇಶಗಳಲ್ಲಿ ಇನ್ನಿತರ ಬೆಳೆಗಳನ್ನು ಬೆಳೆಯಲಾಗಿದೆ.

ಅಣೆಕಟ್ಟಿನಲ್ಲಿ ನೀರಿನ ಮಟ್ಟ ವಿಶ್ವೇಶ್ವರಯ್ಯ ಕಾಲುವೆಯ ಮಟ್ಟ 74 ಅಡಿಗಿಂತ ಕಡಿಮೆಗೆ (ಈಗ 72 ಅಡಿ ಇದೆ) ಕುಸಿದಿರುವುದರಿಂದ ಜೂನ್ 1 ರಿಂದ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಅದಕ್ಕೂ ಒಂದು ವಾರ ಮೊದಲೇ ಕಾಲುವೆಯ ಕೊನೆಯಂಚಿನ ಹೊಲಗಳಿಗೆ ನೀರು ತಲುಪುವುದು ನಿಂತಿತ್ತು. ಪರಿಣಾಮ ನೀರಿಲ್ಲದ ಬೆಳೆ ಬಾಡತೊಡಗಿದೆ.

ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿ 189 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 119.6 ಮಿ.ಮೀ ಮಾತ್ರ ಮಳೆಯಾಗಿದೆ. ಜೂನ್ ಅರ್ಧ ತಿಂಗಳು ಕಳೆಯುತ್ತಾ ಬಂದರೂ ಮಳೆಯಾಗಿಲ್ಲ. ಹೀಗಾಗಿ ಭೂಮಿಯೂ ನೀರಿಗಾಗಿ ಬಾಯಿ ತೆರೆದುಕೊಂಡಿದೆ.

`ಮಳೆ ಕೊರತೆಯಿಂದಾಗಿ ಭೂಮಿಯಲ್ಲಿನ ತೇವಾಂಶ ಇಲ್ಲವಾಗಿದೆ. ಪರಿಣಾಮ ಅಲಸಂದೆ, ಎಳ್ಳು ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳ ಬೆಳೆ ಒಣಗಲಾರಂಭಿಸಿದೆ. ಕೂಡಲೇ ಮಳೆಯಾದರೆ ಇಳುವರಿಯಲ್ಲಿ ಕಡಿಮೆಯಾದರೂ ಒಂದಷ್ಟು ಫಸಲು ಬರಲಿದೆ. ಬತ್ತ ಕಟಾವು ನಡೆಯುತ್ತಿರುವುದರಿಂದ ಆ ಬೆಳೆಗೆ ಹೆಚ್ಚು ತೊಂದರೆಯಾಗುವುದಿಲ್ಲ. ಆದರೆ ಕೆಲವು ಕಡೆಗಳಲ್ಲಿ ಕಬ್ಬು ಬೆಳೆ ಒಣಗಲು ಆರಂಭಿಸಿದೆ.

ಬಿಸಿಲು ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಅದರ ಇಳುವರಿಯೂ ಕಡಿಮೆಯಾಗುತ್ತದೆ~ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಂಗಯ್ಯ.ಅಲಸಂದೆ, ಎಳ್ಳು ಸಂಪೂರ್ಣ ಒಣಗಿ ಹೋಗಿದೆ. ಕೆಆರ್‌ಎಸ್ ನೀರಿನ ಮಟ್ಟ ಕುಸಿದಿರುವುದರಿಂದ ಬತ್ತ, ಕಬ್ಬು, ರಾಗಿಯೂ ಒಣಗಲಾರಂಭಿಸಿದೆ.
 

2004ರಲ್ಲಿನ ಅನಾಹುತ ಮತ್ತೆ ಸಂಭವಿಸಲಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ~ ಎನ್ನುತ್ತಾರೆ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೋಣಸಾಲೆ ನರಸರಾಜು. ಮಳೆ ಬರದಿದ್ದರೆ ಲಕ್ಷಾಂತರ ಹೆಕ್ಟೇರ್ ಬೆಳೆ ನಾಶವಾಗುವುದರಿಂದ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುತ್ತದೆ. ಸರ್ಕಾರ ಈ ಬಾರಿ ಬೆಳೆಗೆ ನೀಡಿರುವ ಸಾಲ ಮನ್ನಾ ಮಾಡಬೇಕು. ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT