ADVERTISEMENT

ಮತ್ತೆ ಮಠಗಳಿಗೆ ಹಣ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2011, 18:50 IST
Last Updated 9 ಮಾರ್ಚ್ 2011, 18:50 IST
ಮತ್ತೆ ಮಠಗಳಿಗೆ ಹಣ
ಮತ್ತೆ ಮಠಗಳಿಗೆ ಹಣ   

ಬೆಂಗಳೂರು: ರಾಜ್ಯದಲ್ಲಿನ ಮತ್ತಷ್ಟು ಮಠಗಳಿಗೆ ಉದಾರವಾಗಿ ಅನುದಾನ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,  2011-12ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಿರುವ ಹೊಸ ಯೋಜನೆಗಳ ಅನುಷ್ಠಾನ ಸಂಬಂಧ ಏಪ್ರಿಲ್ ಅಂತ್ಯದ ಒಳಗೆ ಸರ್ಕಾರಿ ಆದೇಶ ಹೊರಡಿಸಿ ಅಗತ್ಯವಿರುವ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಬಜೆಟ್ ಮೇಲಿನ ಚರ್ಚೆಗೆ ಬುಧವಾರ ವಿಧಾನ ಸಭೆಯಲ್ಲಿ ಉತ್ತರಿಸಿದ ಅವರು, ಚಿಕ್ಕಮಗಳೂರಿನ ದತ್ತಪೀಠ, ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ, ಆದಿಚುಂಚನಗಿರಿ ಕ್ಷೇತ್ರದಲ್ಲಿರುವ ಕಾಲಭೈರವೇಶ್ವರ ಸ್ವಾಮಿ ಸಂಸ್ಕೃತ, ವೇದ ಮತ್ತು ಆಗಮ ಮಹಾವಿದ್ಯಾಲಯದ ನೂತನ ಕಟ್ಟಡ ಹಾಗೂ ವಸತಿ ಸಮುಚ್ಚಯ ನಿರ್ಮಾಣಕ್ಕೆ ತಲಾ 5 ಕೋಟಿ ರೂಪಾಯಿ, ಉಡುಪಿಯ ಮಧ್ವಾಚಾರ್ಯ ಪಾಜಕ ಕ್ಷೇತ್ರ ಹಾಗೂ ಬೆಳ್ತಂಗಡಿ ತಾಲ್ಲೂಕು ವೇಣೂರಿನ ದಿಗಂಬರ ಜೈನ ತೀರ್ಥಕ್ಷೇತ್ರದ ಅಭಿವೃದ್ಧಿಗೆ ತಲಾ 2 ಕೋಟಿ ರೂಪಾಯಿ ನೀಡುವುದಾಗಿ ಪ್ರಕಟಿಸಿದರು.

‘ಮೇ 30ಕ್ಕೆ ಸರ್ಕಾರ ಮೂರು ವರ್ಷ ಪೂರೈಸಲಿದ್ದು, ಉಳಿದ ಎರಡು ವರ್ಷಗಳ ಅವಧಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ನೀಲನಕ್ಷೆ ರೂಪಿಸುತ್ತೇವೆ. ಪ್ರತಿಪಕ್ಷಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ನಂತರ ಇದಕ್ಕೆ ಅಂತಿಮ ರೂಪ ನೀಡಲಾಗುವುದು. ಆಡಳಿತದಲ್ಲಿ ಏನಾದರೂ ಲೋಪದೋಷಗಳು ಇದ್ದರೆ ಸರಿಪಡಿಸಿಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

‘ಬಜೆಟ್ ಕಾರ್ಯಕ್ರಮಗಳು ಕಾಲಮಿತಿಯಲ್ಲಿ ಅನುಷ್ಠಾನಗೊಳ್ಳದೆ ಇರುವುದನ್ನು ಗಮನಿಸಿದ್ದೇವೆ. ಆದರೆ ಇನ್ನು ಮುಂದೆ ಈ ರೀತಿ ಆಗುವುದಿಲ್ಲ. 2011-12ನೇ ಸಾಲಿನ ಬಜೆಟ್ ಮಂಡಿಸಿದ ಮರು ದಿನವೇ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಇದಾದ ನಂತರ ಕಾರ್ಯದರ್ಶಿಗಳ ಮಟ್ಟದ ಸಭೆ ಕರೆದು ಹೊಸ ಯೋಜನೆಗಳ ಅನುಷ್ಠಾನ ಸಂಬಂಧ ಸೂಚನೆಗಳನ್ನು ನೀಡಲಾಗಿದೆ’ ಎಂದರು.

ಇರುವ ಸಂಪನ್ಮೂಲಗಳನ್ನು ಉಪಯೋಗ ಮಾಡಿಕೊಂಡು ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಆಡಳಿತ ಮತ್ತು ಪ್ರತಿಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ, ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದು ಸಾಧನೆ ಎಂಬುದಾಗಿ ಭಾವಿಸಿಲ್ಲ. 

ಬರುವ ದಿನಗಳಲ್ಲಿ ಕೃಷಿ, ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಗ್ರಾಮೀಣ ಪ್ರದೇಶದ ಜನ ನಗರಗಳಿಗೆ ವಲಸೆ ಬರುವುದನ್ನು ತಪ್ಪಿಸಬೇಕಿದೆ ಎಂದರು.

ಬಜೆಟ್‌ನಲ್ಲಿ ಘೋಷಿಸಿರುವ ಸುವರ್ಣ ಭೂಮಿ ಕೃಷಿ ಮತ್ತು ಕೆರೆಗಳಲ್ಲಿ ಹೂಳೆತ್ತುವ ಯೋಜನೆ ಏಪ್ರಿಲ್‌ನಿಂದಲೇ ಜಾರಿಗೆ ಬರಲಿದೆ. ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದ 25 ಕೆರೆಗಳಲ್ಲಿ ಹೂಳು ತೆಗೆಯಲಾಗುತ್ತದೆ. ಸುವರ್ಣ ಭೂಮಿ ಯೋಜನೆಯಿಂದ 10 ಲಕ್ಷ ಕುಟುಂಬಗಳಿಗೆ ಲಾಭವಾಗಲಿದೆ. ಯೋಜನೆಯ ಅರ್ಜಿಗಳನ್ನು ಮುದ್ರಿಸಿ ತಾಲ್ಲೂಕು ಕೇಂದ್ರಗಳಿಗೆ ಕಳುಹಿಸಿಕೊಡಲಾಗುವುದು. ರೈತರು ಅದನ್ನು ಭರ್ತಿ ಮಾಡಿ, ಪಹಣಿ ಮತ್ತು ಒಪ್ಪಿಗೆ ಪತ್ರದೊಂದಿಗೆ ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕು.

ಅರ್ಜಿಗಳ ಸಂಖ್ಯೆ ಹೆಚ್ಚಾದರೆ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಮೊದಲ ಕಂತಾಗಿ ಏಪ್ರಿಲ್‌ನಲ್ಲಿ ಐದು ಸಾವಿರ ರೂಪಾಯಿ ನೀಡಲಾಗುತ್ತದೆ. ಅದನ್ನು ಸದುಪಯೋಗಪಡಿಸಿಕೊಂಡು ಬಿತ್ತನೆ ಮಾಡಿ ಬೆಳೆ ಆರಂಭಿಸಿದ್ದರೆ ಆಗಸ್ಟ್‌ನಲ್ಲಿ ಎರಡನೇ ಕಂತಿನ ಹಣ ನೀಡಲಾಗುತ್ತದೆ. ಒಂದು ವೇಳೆ ರೈತರು ಒಪ್ಪಿಗೆ ಪತ್ರದಲ್ಲಿ ಹೇಳಿದ ಪ್ರಕಾರ ನಡೆದುಕೊಳ್ಳದಿದ್ದರೆ ಮೂರು ವರ್ಷ ಅವರಿಗೆ ಯಾವುದೇ ಸೌಲಭ್ಯಗಳನ್ನು ನೀಡುವುದಿಲ್ಲ ಎಂದರು.

ಜಲಾಶಯಗಳ ಸಮೀಪದ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟವನ್ನು ವೃದ್ಧಿಸುವುದರ ಜೊತೆಗೆ ಅನವಶ್ಯಕವಾಗಿ ನೀರು ಹರಿದು ಹೋಗುವುದನ್ನು ತಡೆಯುವ ದೃಷ್ಟಿಯಿಂದ ಕಾರ್ಯಕ್ರಮ ರೂಪಿಸುವ ಬಗ್ಗೆ ಚಿಂತನೆ ನಡೆದಿದೆ. ಸದ್ಯ ಮೀನು ಉತ್ಪಾದನೆ 4.90 ಲಕ್ಷ ಮೆಟ್ರಿಕ್ ಟನ್‌ಗೆ ಏರಿದ್ದು, ಇದನ್ನು ಮತ್ತಷ್ಟು ಹೆಚ್ಚಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ರೈತರಿಗೆ ನೀಡುವ ಸಬ್ಸಿಡಿ ಮಧ್ಯವರ್ತಿಗಳ ಪಾಲಾಗದಂತೆ ಬಿಗಿಕ್ರಮಕೈಗೊಳ್ಳಲಾಗುವುದು. ಬಿತ್ತನೆ ಬೀಜಗಳ ಮಾರಾಟದಲ್ಲಿ ನಡೆಯುವ ಅಕ್ರಮ, ನಕಲಿ ಬೀಜಗಳ ಹಾವಳಿ ತಡೆಯುವ ದೃಷ್ಟಿಯಿಂದ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಒಂದು ಸುತ್ತಿನ ಚರ್ಚೆ ನಡೆದಿದೆ. ವಿಶ್ವವಿದ್ಯಾಲಯಗಳಲ್ಲಿಯೇ ಬಿತ್ತನೆ ಬೀಜಗಳನ್ನು ಬೆಳೆದು ರೈತರಿಗೆ ತಲುಪಿಸಲು ಸಾಧ್ಯವೇ ಎಂಬ ಬಗ್ಗೆ ಮತ್ತೊಮ್ಮೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.

ಕಲ್ಲಿದ್ದಲು: ರಾಜ್ಯದಲ್ಲಿನ ಹೊಸ ವಿದ್ಯುತ್ ಯೋಜನೆಗಳಿಗೆ ಕೇಂದ್ರ ಸರ್ಕಾರ ಕಲ್ಲಿದ್ದಲು ಹಂಚಿಕೆ ಮಾಡುತ್ತಿಲ್ಲ. ಪ್ರತಿಪಕ್ಷಗಳ ಮುಖಂಡರನ್ನೂ ಸೇರಿಸಿಕೊಂಡು ಒತ್ತಡ ತರುವ ಕೆಲಸ ಮಾಡುತ್ತೇವೆ. ಅಲ್ಲದೆ ರಾಜ್ಯವೇ ಪ್ರತ್ಯೇಕ ಕಲ್ಲಿದ್ದಲು ಗಣಿ ಹೊಂದುವ ಬಗ್ಗೆ ಚಿಂತನೆ ನಡೆದಿದೆ. ಈಗ ನೀಡುವ ಪ್ರಮಾಣದಷ್ಟು ವಿದ್ಯುತ್ ಅನ್ನೇ ಬೇಸಿಗೆಯಲ್ಲೂ ನೀಡುತ್ತೇವೆ ಎಂದು ಭರವಸೆ ನೀಡಿದರು.

ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿ ತಾಯಂದಿರಿಗೆ ಸೀರೆ ಹಂಚುವುದು ಬಿಜೆಪಿ ಕಾರ್ಯಕ್ರಮವಲ್ಲ, ಇದು ಸರ್ಕಾರಿ ಯೋಜನೆಯಾಗಿದ್ದು, ಸೀರೆಗಳ ಗುಣಮಟ್ಟ ಸರಿ ಇಲ್ಲದಿದ್ದರೆ ಸರಿಪಡಿಸುವ ಕೆಲಸ ಮಾಡುತ್ತೇವೆ. ಇದಕ್ಕೆ ಸಹಕಾರ ನೀಡಿ ಎಂದು ಪ್ರತಿಪಕ್ಷಗಳಿಗೆ ಮನವಿ ಮಾಡಿದರು.

ಈ ವರ್ಷ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಒಟ್ಟು 750 ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಈ ಹಣದಲ್ಲಿ ಸರ್ಕಾರವೇ ನೇರವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಬಗ್ಗೆ ಚಿಂತನೆ ನಡೆದಿದೆ. ಸುವರ್ಣ ಗ್ರಾಮೋದಯ ಯೋಜನೆಗೆ ಇದುವರೆಗೆ 1063 ಕೋಟಿ ರೂಪಾಯಿ ವೆಚ್ಚವಾಗಿದ್ದು, ಈ ವರ್ಷ 400 ಕೋಟಿ ರೂಪಾಯಿ ನೀಡುವುದಾಗಿ ಹೇಳಿದರು.

1.84 ಕೋಟಿ ಫಲಾನುಭವಿಗಳು: ವಿವಿಧ ಯೋಜನೆಗಳಡಿ 1.84 ಕೋಟಿ ಮಂದಿ ಫಲಾನುಭವಿಗಳಾಗಿದ್ದು, 2010-11ನೇ ಸಾಲಿನ ಪರಿಷ್ಕೃತ ಅಂದಾಜಿನ ಪ್ರಕಾರ 7,449 ಕೋಟಿ ವೆಚ್ಚ ಮಾಡಲಾಗಿದೆ. ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ ಫಲಾನುಭವಿಗಳ ಸಂಖ್ಯೆ ಶೇ 30ರಷ್ಟಿದೆ. ಒಂದು ವರ್ಷದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದು, ತೆರಿಗೆ ಸಂಗ್ರಹ, ಬಂಡವಾಳ ಹೂಡಿಕೆ ಉತ್ತಮವಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಯೋಜನಾ ಗಾತ್ರದ 31 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತೇವೆ ಎಂದು ಭರವಸೆ ನೀಡಿದರು.

ಸಾವಯವ ಕೃಷಿ ನೆಪದಲ್ಲಿ ಪ್ರತಿ ತಿಂಗಳ ಕೊನೆಯ ಶನಿವಾರ ರೈತರೊಂದಿಗೆ ಇರುವ ಅವಕಾಶ ಸಿಕ್ಕಿದೆ. ವಾಸ್ತವವಾಗಿ ನೋಡಿದಾಗ ರೈತರಿಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿಲ್ಲ. ಹತ್ತು ಹಲವು ಸಂಕೋಲೆಗಳಲ್ಲಿ ಸಿಲುಕಿದ್ದಾರೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಉತ್ತಮ ಮಳೆಯಾದ ಪರಿಣಾಮ ರೈತರು ಸಮಾಧಾನದಿಂದ ಇದ್ದಾರೆ. 8.7 ಲಕ್ಷ ರೈತರು ಭೂ ಚೇತನ ಕಾರ್ಯಕ್ರಮದ ಉಪಯೋಗ ಪಡೆಯುತ್ತಿದ್ದು, ಇದಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

ಲೇಖಾನುದಾನಕ್ಕೆ ಒಪ್ಪಿಗೆ
ಬೆಂಗಳೂರು: ವಿಧಾನ ಮಂಡಲದ ಉಭಯ ಸದನಗಳು 2011-12ನೇ ಆರ್ಥಿಕ ಸಾಲಿನ ಮೊದಲ ನಾಲ್ಕು ತಿಂಗಳ ಲೇಖಾನುದಾನಕ್ಕೆ ಬುಧವಾರ ಒಪ್ಪಿಗೆ ನೀಡಿದ್ದು, ಜುಲೈ ಅಂತ್ಯವರೆಗೆ 29,216 ಕೋಟಿ ರೂಪಾಯಿ ವೆಚ್ಚ ಮಾಡುವುದಕ್ಕೆ ಅನುಮತಿ ದೊರೆತಿದೆ.

ADVERTISEMENT

ಹೊಸ ಘೋಷಣೆ, ಕಾರ್ಯಕ್ರಮ.....
-ಬೆಂಗಳೂರು ನಗರದಲ್ಲಿ ಕುಡಿಯುವ ನೀರು ಸರಬರಾಜಿಗೆ 25 ಕೋಟಿ ಸೇರಿದಂತೆ ರಾಜ್ಯದಲ್ಲಿ ಕುಡಿಯುವ ನೀರು ಸರಬರಾಜು ಮತ್ತು 
- ಕೊಳವೆಬಾವಿ ಕೊರೆಯಲು ರೂ 100 ಕೋಟಿ
- ಈಚೆಗೆ ನಿರ್ಮಿಸುತ್ತಿರುವ ವಿವಿಧ ಮಿನಿ ವಿಧಾನ ಸೌಧ ಕಾಮಗಾರಿಗಳಿಗೆ ಸಲಕರಣೆಗಳನ್ನು ಪೂರೈಸಲು ರೂ 10 ಕೋಟಿ
-ಜಿಲ್ಲೆಗಳ ಅಭಿವೃದ್ಧಿ ಕೈಗೊಳ್ಳಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ತಲಾ ವಾರ್ಷಿಕ ಒಂದು ಕೋಟಿ ರೂಪಾಯಿ
-ಬೆಳಗಾವಿ ನಗರದ ಅಭಿವೃದ್ಧಿಗೆ ವಿಶೇಷ ಯೋಜನೆ. ಇದಕ್ಕೆ ಕೇಂದ್ರ ಸರ್ಕಾರದ ನೆರವು ಪಡೆಯಲು ಶಿಫಾರಸು
-ಚಿಕ್ಕಮಗಳೂರಿನ ದತ್ತಪೀಠ ಅಭಿವೃದ್ಧಿಗೆ ರೂ 5 ಕೋಟಿ
- ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ರೂ 5 ಕೋಟಿ
-ಉಡುಪಿಯ ಮಧ್ವಾಚಾರ್ಯ ಪಾಜಕ ಕ್ಷೇತ್ರದ ಅಭಿವೃದ್ಧಿಗೆ ರೂ 2 ಕೋಟಿ
-ಬೆಳ್ತಂಗಡಿ ತಾಲ್ಲೂಕು ವೇಣೂರಿನ ದಿಗಂಬರ ಜೈನ ತೀರ್ಥಕ್ಷೇತ್ರದ ಅಭಿವೃದ್ಧಿಗೆ ರೂ 2 ಕೋಟಿ
-ಆದಿಚುಂಚನಗಿರಿ ಕ್ಷೇತ್ರದಲ್ಲಿರುವ ಕಾಲಭೈರವೇಶ್ವರ ಸ್ವಾಮಿ ಸಂಸ್ಕೃತ, ವೇದ ಮತ್ತು ಆಗಮ ಮಹಾವಿದ್ಯಾಲಯದ ನೂತನ ಕಟ್ಟಡ ಹಾಗೂ ವಸತಿ ಸಮುಚ್ಚಯ ನಿರ್ಮಾಣಕ್ಕೆ ರೂ 5 ಕೋಟಿ
-ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರ್ ಸಭಾಂಗಣ ನಿರ್ಮಾಣಕ್ಕೆ ರೂ 5 ಕೋಟಿ
-ದೇವಿವನ, ದೇವರ ಕಾಡು, ರಸ್ತೆ ಬದಿ ನೆಡುತೋಪು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಲಾಲ್‌ಬಾಗ್ ಮಾದರಿಯ ಉದ್ಯಾನ ಸ್ಥಾಪನೆಗೆ ಈ  ವರ್ಷ 150 ಕೋಟಿ ರೂಪಾಯಿ
-ಕರ್ನಾಟಕ ನೇಕಾರರ ಅಭಿವೃದ್ಧಿ ನಿಗಮಕ್ಕೆ ಬಜೆಟ್‌ನಲ್ಲಿ ನೀಡಿರುವ ಅನುದಾನವೂ ಸೇರಿದಂತೆ ರೂ 20 ಕೋಟಿ
-ಟ್ರ್ಯಾಕ್ಟರ್, ಟಿಲ್ಲರ್, ಭತ್ತ, ಕಬ್ಬು ನಾಟಿ ಯಂತ್ರ, ಕಟಾವು ಯಂತ್ರ ಖರೀದಿಗೆ ಶೇ 50ರಷ್ಟು ರಿಯಾಯಿತಿ, ಇದಕ್ಕಾಗಿ 100 ಕೋಟಿ ಅನುದಾನ
- ಮೂರು ಲಕ್ಷ ರೂಪಾಯಿವರೆಗಿನ ಬೆಳೆ ಸಾಲಕ್ಕೆ ಶೇ 1ರ ಬಡ್ಡಿದರ
-ಮೂರು ಲಕ್ಷ ರೂಪಾಯಿಗೂ ಹೆಚ್ಚಿನ ಸಾಲಗಳಿಗೆ ಸಹಕಾರ ಸಂಘಗಳ ನಿಯಮಾವಳಿ ಪ್ರಕಾರ ಬಡ್ಡಿದರ


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.