ADVERTISEMENT

ಮತ ಮೌಲ್ಯ ಸಾರಿದ 1 ಓಟು!

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 19:59 IST
Last Updated 16 ಏಪ್ರಿಲ್ 2013, 19:59 IST
ಕೃಷ್ಣಮೂರ್ತಿ        ಧ್ರುವನಾರಾಯಣ
ಕೃಷ್ಣಮೂರ್ತಿ ಧ್ರುವನಾರಾಯಣ   

ಚಾಮರಾಜನಗರ: ಪ್ರತಿಯೊಂದು ಮತಕ್ಕೂ ಮೌಲ್ಯವಿದೆ ಎಂಬ ಮಾತಿಗೆ 2004ರ ಚುನಾವಣೆಯಲ್ಲಿ ಜಿಲ್ಲೆಯ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹೊರಬಿದ್ದ ಫಲಿತಾಂಶವೇ ಸಾಕ್ಷಿ.

ಈಗ ಸಂತೇಮರಹಳ್ಳಿ ಕ್ಷೇತ್ರ ಇಲ್ಲ. 2008ರ ಕ್ಷೇತ್ರ ಪುನರ್ ವಿಂಗಡಣೆ ಪರಿಣಾಮ ತನ್ನ ಅಸ್ತಿತ್ವ ಕಳೆದುಕೊಂಡಿತು. ಈ ಕ್ಷೇತ್ರ 1962ರ ಚುನಾವಣೆಯಲ್ಲಿ ಜನ್ಮತಾಳಿತು. ಆರಂಭದಿಂದಲೂ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ದಲಿತ ಮುಖಂಡ, ಮಾಜಿ ರಾಜ್ಯಪಾಲ ದಿ. ಬಿ. ರಾಚಯ್ಯ ಅವರಿಗೆ ಭದ್ರವಾದ ರಾಜಕೀಯ ನೆಲೆ ಒದಗಿಸಿಕೊಟ್ಟ ಹಿರಿಮೆಯನ್ನು ಕ್ಷೇತ್ರ ಹೊಂದಿತ್ತು.

ಈ ಕ್ಷೇತ್ರವು 1962ರಿಂದ 2004ರವರೆಗೆ ಒಟ್ಟು 10 ಚುನಾವಣೆ ಕಂಡಿತು. ಅಸ್ತಿತ್ವ ಕಳೆದುಕೊಳ್ಳುವವರೆಗೂ ಪರಿಶಿಷ್ಟ ಜಾತಿಯ 'ಬಲಗೈ' ಸಮುದಾಯದ ಜನಪ್ರತಿನಿಧಿಗಳ ಹಿಡಿತದಲ್ಲಿಯೇ ಇತ್ತು.  2004ರ ವಿಧಾನಸಭಾ ಚುನಾವಣಾ ಫಲಿತಾಂಶದಿಂದ ಈ ಕ್ಷೇತ್ರ ರಾಜ್ಯದ ಗಮನ ಸೆಳೆಯಿತು. ಆ ಚುನಾವಣೆಯಲ್ಲಿ ಒಟ್ಟು 6 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದರು. ಎಲ್ಲರೂ `ಬಲಗೈ' ಸಮುದಾಯಕ್ಕೆ ಸೇರಿದವರು.

ಕ್ಷೇತ್ರದಲ್ಲಿದ್ದ ಮತದಾರರ ಸಂಖ್ಯೆ 1,32,014. ಒಟ್ಟು ಶೇ. 72.12ರಷ್ಟು ಮತದಾನವಾಗಿತ್ತು. ಆರ್. ಧ್ರುವನಾರಾಯಣ (ಕಾಂಗ್ರೆಸ್) ಹಾಗೂ ಎ.ಆರ್. ಕೃಷ್ಣಮೂರ್ತಿ (ಜೆಡಿಎಸ್) ನಡುವೆ ನೇರ ಹಣಾಹಣಿ ಏರ್ಪಟ್ಟಿತು. ಮತ ಎಣಿಕೆಯ ಕೊನೆಯ ಸುತ್ತಿನವರೆಗೂ ವಿಜಯಲಕ್ಷ್ಮೀ ಚಂಚಲೆಯಾದಳು. `ಗೆಲುವು' ಎಂಬ ಮಾಯೆ ಅಭ್ಯರ್ಥಿಗಳು, ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ತುದಿಗಾಲ ಮೇಲೆ ನಿಲ್ಲಿಸಿತು.

ಅಂತಿಮವಾಗಿ ಧ್ರುವನಾರಾಯಣ 40,752, ಪ್ರತಿಸ್ಪರ್ಧಿಯಾಗಿದ್ದ ಕೃಷ್ಣಮೂರ್ತಿ 40,751 ಮತ ಪಡೆದರು.  ಮರು ಎಣಿಕೆಯಲ್ಲೂ ಫಲಿತಾಂಶ ಬದಲಾಗಲಿಲ್ಲ. ಧ್ರುವನಾರಾಯಣ ಒಂದೇ ಮತದಿಂದ ಗೆದ್ದಿದ್ದರು. ರೋಚಕ ಫಲಿತಾಂಶ ನೀಡಿದ ಕ್ಷೇತ್ರ ಮುಂದಿನ ಸಾರ್ವತ್ರಿಕ ಚುನಾವಣೆ ವೇಳೆಗೆ ತನ್ನ ಅಸ್ತಿತ್ವ ಕಳೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.