ADVERTISEMENT

ಮದುವೆ ದಿಬ್ಬಣದ 10 ಮಂದಿ ಸಾವು

ಹೊನ್ನಾಳಿಯ ತುಗ್ಗಲಹಳ್ಳಿ ಬಳಿ ಕ್ಯಾಂಟರ್ ಪಲ್ಟಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 19:30 IST
Last Updated 23 ಡಿಸೆಂಬರ್ 2013, 19:30 IST
ಮದುವೆ ದಿಬ್ಬಣದ 10 ಮಂದಿ ಸಾವು
ಮದುವೆ ದಿಬ್ಬಣದ 10 ಮಂದಿ ಸಾವು   

ದಾವಣಗೆರೆ/ನ್ಯಾಮತಿ: ಮದುವೆ ಕಾರ್ಯ­­­ದಲ್ಲಿ ಪಾಲ್ಗೊಂಡು ಗ್ರಾಮಕ್ಕೆ ವಾಪಸ್‌ ಆಗುತ್ತಿದ್ದ ಕ್ಯಾಂಟರ್‌ ಪಲ್ಟಿ­ಯಾಗಿ 10 ಮಂದಿ ಮೃತಪಟ್ಟು, 33ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಹೊನ್ನಾಳಿ ತಾಲ್ಲೂಕಿನ ತುಗ್ಗಲಹಳ್ಳಿ ಗ್ರಾಮದ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.

ಘಟನೆಯಲ್ಲಿ ಹರಿಹರ ತಾಲ್ಲೂಕು ಭಾನುವಳ್ಳಿಯ ಪರಮೇಶ್ವರಪ್ಪ (56), ಮಹಾದೇವ್‌ (60), ನಾಗಪ್ಪ (55), ಮುರಳಿ (9), ಸಂತೋಷ್‌ (25), ಮುರಳಿಸಿದ್ದಪ್ಪ (45), ನಾಗರಾಜ್‌ (50), ರವಿ (30), ಬಿ.ಬಿ.­ಹನುಮಂತಪ್ಪ (55) ಹಾಗೂ ಹಡಗಲಿ ತಾಲ್ಲೂಕು ಅರವಿ ಗ್ರಾಮದ ಹನು­ಮಂತರೆಡ್ಡಿ (62) ಮೃತಪಟ್ಟವರು.

ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಗಾಯ­ಗೊಂಡ­­ವರನ್ನು  ದಾವಣ-­ಗೆರೆಯ ಜಿಲ್ಲಾ ಆಸ್ಪತ್ರೆ ಹಾಗೂ ಎಸ್ಎಸ್‌ ಹೈಟೆಕ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನ್ಯಾಮತಿ ಸಮೀಪದ ತೀರ್ಥ­ರಾಮೇ­ಶ್ವರ ದೇಗುಲದಲ್ಲಿ ಒಡೆಯರ­ಹತ್ತೂರು ಹುಡುಗನ ಜತೆಗೆ ಹರಿಹರ ತಾಲ್ಲೂಕು ಭಾನುವಳ್ಳಿಯ ಹುಡುಗಿಯ ವಿವಾಹ ನಡೆದಿತ್ತು. ಮದುವೆ ಮುಗಿಸಿಕೊಂಡು ಖುಷಿ­ಯಿಂದಲೇ ವಾಹನ ಏರಿದ್ದಾರೆ.  ಅವರ ಸಂತೋಷ ಕೆಲವೇ ಗಂಟೆ­ಗಳಲ್ಲಿ ಕಣ್ಮರೆಯಾಗಿದೆ.
ತುಗ್ಗಲಹಳ್ಳಿ ಗ್ರಾಮದ ಬಳಿಯ ರಸ್ತೆ ಇಳಿಜಾರಿನಲ್ಲಿ ವೇಗವಾಗಿ ಬರುತ್ತಿದ್ದ ಕ್ಯಾಂಟರ್ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ.

ಚಾಲಕನ ನಿರ್ಲಕ್ಷ್ಯ: ಈ ದುರ್ಘ­ಟನೆಗೆ ಕ್ಯಾಂಟರ್‌ ಚಾಲಕನ ಅತಿ­ವೇಗವೇ ಕಾರಣ ಎನ್ನಲಾಗಿದೆ. ಮಾನವೀಯತೆ ಮೆರೆದ ಗ್ರಾಮಸ್ಥರು: ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿ­ಸಲು ಸ್ಥಳೀಯರು ನೆರವಾದರು. ಕೆಲವರನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ಖಾಸಗಿ ವಾಹನಗಳಿಗೆ ಡೀಸೆಲ್‌ ವೆಚ್ಚ ನೀಡಿ ಗಾಯಾಳು­ಗಳನ್ನು ಆಸ್ಪತ್ರೆಗೆ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.