ADVERTISEMENT

‘ಮದ್ಯ ನಿಷೇಧದ ಘೋಷಣೆ ಪ್ರಣಾಳಿಕೆಯಲ್ಲಿ ಇರಲಿ’

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
‘ಮದ್ಯ ನಿಷೇಧದ ಘೋಷಣೆ ಪ್ರಣಾಳಿಕೆಯಲ್ಲಿ ಇರಲಿ’
‘ಮದ್ಯ ನಿಷೇಧದ ಘೋಷಣೆ ಪ್ರಣಾಳಿಕೆಯಲ್ಲಿ ಇರಲಿ’   

ರಾಯಚೂರು: ‘ಮಹಿಳೆಯರ, ಮಕ್ಕಳ, ಯುವಕರ ಬದುಕು ಬದಲಿಸಲು ಮದ್ಯ ನಿಷೇಧಿಸುತ್ತೇವೆ ಎನ್ನುವ ಭರವಸೆಯನ್ನು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಬೇಕು’ ಎಂದು ಚರಕ ಸಂಘಟನೆಯ ಮುಖಂಡ ಪ್ರಸನ್ನ ಹೆಗ್ಗೋಡು ಒತ್ತಾಯಿಸಿದರು.

ಮದ್ಯ ನಿಷೇಧಿಸುವಂತೆ ಒತ್ತಾಯಿಸಿ ನಗರದ ಮಹಾತ್ಮಗಾಂಧಿ ಪ್ರತಿಮೆ ಎದುರು ಮದ್ಯ ನಿಷೇಧ ಆಂದೋಲನ ಕರ್ನಾಟಕ ನೇತೃತ್ವದಲ್ಲಿ ಮಹಿಳೆಯರು 35 ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಸೋಮವಾರ ಪಾಲ್ಗೊಂಡು ಅವರು ಮಾತನಾಡಿದರು.

‘ಶೇ 5 ರಷ್ಟಿರುವ ಮದ್ಯ ವ್ಯಸನಿಗಳನ್ನು ಮುಂದಿಟ್ಟುಕೊಂಡು ಶೇ 95 ರಷ್ಟಿರುವ ಆರೋಗ್ಯವಂತರನ್ನು, ವಿದ್ಯಾವಂತರನ್ನು ಮದ್ಯದ ದಾಸರನ್ನಾಗಿಸುವ ಕಾರ್ಯಕ್ಕೆ ಸರ್ಕಾರ ಇಳಿದಿದೆ. ಮದ್ಯದ ವರಮಾನವು ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ₹4 ಸಾವಿರ ಕೋಟಿಯಿಂದ ₹18 ಸಾವಿರ ಕೋಟಿಗೆ ಏರಿಕೆಯಾಗಿದೆ. ಆದರೂ ಸರ್ಕಾರ ಮದ್ಯದಿಂದ ಹೆಚ್ಚು ವರಮಾನ ಪಡೆಯುವ ಹಪಾಹಪಿ ತೋರಿಸುತ್ತಿರುವುದು ಕಳವಳಕಾರಿ’ ಎಂದರು.

ADVERTISEMENT

‘ಸರ್ಕಾರವು ಮದ್ಯ ನಿಷೇಧಿಸಿದರೆ ಸಂಪೂರ್ಣವಾಗಿ ಮದ್ಯ ನಿಷೇಧ ಆಗುವುದಿಲ್ಲ ಎನ್ನುವ ಅರಿವು ನಮಗಿದೆ. ಆದರೆ, ಮದ್ಯ ಸೇವಿಸುವುದು ಕಷ್ಟ ಎನ್ನುವ ಪರಿಸ್ಥಿತಿಯನ್ನಾದರೂ ನಿರ್ಮಿಸಬೇಕು. ಜನರ ಮನವೊಲಿಸಿ ಮದ್ಯ ಸೇವನೆ ಬಿಡಿಸುವ ಕೆಲಸವನ್ನು ಜನಪರ ಸಂಘಟನೆಗಳಿಂದ ಮಾಡಿಸುತ್ತೇವೆ’ ಎಂದು ಅವರು ಹೇಳಿದರು.

**

ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ

‘ಅಬಕಾರಿ ಇಲಾಖೆಗೆ ಮದ್ಯ ಮಾರಾಟ ಗುರಿಯನ್ನು ಸರ್ಕಾರ ನಿಗದಿ ಪಡಿಸುತ್ತದೆ. ಗುರಿ ತಲುಪದಿದ್ದರೆ ಅಮಾನತುಗೊಳಿಸುವ ಬೆದರಿಕೆಯನ್ನೂ ಅಧಿಕಾರಿಗಳಿಗೆ ಹಾಕುವುದರಿಂದ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಮಾರಾಟ ವ್ಯಾಪಿಸುತ್ತಿದೆ’ ಎಂದು ಪ್ರಸನ್ನ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.