ADVERTISEMENT

ಮನೆ ಕೆಲಸ: ಸಾಮಾಜಿಕ ಭದ್ರತೆಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 19:30 IST
Last Updated 19 ಜೂನ್ 2011, 19:30 IST

ಬೆಂಗಳೂರು: ಮನೆ ಕೆಲಸ ಮಾಡುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡಲು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಶಿಫಾರಸು ಮಾಡಿದ್ದು, ಭಾರತ ಸೇರಿದಂತೆ ಒಟ್ಟು 43 ರಾಷ್ಟ್ರಗಳು ಇದಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಇಲ್ಲಿ ಹೇಳಿದರು.

ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾರ್ಮಿಕರಿಗೆ ವಾರದ ರಜೆ, ಕಾರ್ಮಿಕ ವಿಮಾ ಯೋಜನೆ, ಭವಿಷ್ಯ ನಿಧಿ ಸೇರಿದಂತೆ ಅನೇಕ ಶಿಫಾರಸುಗಳು ಇದರಲ್ಲಿ ಒಳಗೊಂಡಿವೆ ಎಂದು ಅವರು ಹೇಳಿದರು. ಈಚೆಗೆ ಜಿನೀವಾದಲ್ಲಿ ನಡೆದ 100ನೇ ಐಎಲ್‌ಒ ಸಮಾವೇಶದಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಭಾಗವಹಿಸಿದ್ದ 436 ರಾಷ್ಟ್ರಗಳ ಪೈಕಿ ಕೆಲವು ಮಾತ್ರ ಇದಕ್ಕೆ ಅನುಮತಿ ನೀಡಿವೆ ಎಂದರು.

ಸ್ವಾಸ್ಥ್ಯ ಬಿಮಾ ಯೋಜನೆ: ಭಾರತದಲ್ಲಿ ಕಾರ್ಮಿಕರಿಗೆ ನೀಡುತ್ತಿರುವ ಸ್ವಾಸ್ಥ್ಯ ಬಿಮಾ ಯೋಜನೆಗೆ ರಾಷ್ಟ್ರದಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ಇತರ ಕೆಲವು ರಾಷ್ಟ್ರಗಳು ಇದನ್ನು ಅಳವಡಿಸಿಕೊಳ್ಳಲು ಮುಂದೆ ಬಂದಿವೆ. ಬೀಡಿ ಕಾರ್ಮಿಕರಿಗಾಗಿ ನಾಲ್ಕು ನೂತನ ಆಸ್ಪತ್ರೆ ಸೇರಿದಂತೆ 40 ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ಅವರು ತಿಳಿಸಿದರು.

ಾಜ್ಯದ ಕೊಳ್ಳೇಗಾಲ, ಮಂಡ್ಯ ಹಾಗೂ ಯಾದಗಿರಿಯಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಖರ್ಗೆ ವಿವರಿಸಿದರು.

ಕೌಶಲ್ಯ ತರಬೇತಿ: ಸುಮಾರು 50 ಕೋಟಿ ಯುವಕರಿಗೆ 2022ರ ಒಳಗೆ ಕೌಶಲ್ಯ ತರಬೇತಿ ನೀಡುವ ಮಹತ್ವದ ಯೋಜನೆ  ಶೀಘ್ರದಲ್ಲಿ ಜಾರಿಗೆ ತರಲಾಗುವುದು. ಈ ಪೈಕಿ ಪ್ರತಿ ವರ್ಷ ಕಾರ್ಮಿಕ ಇಲಾಖೆಯಿಂದ ನಾಲ್ಕು ಕೋಟಿ ಮಂದಿಗೆ ತರಬೇತಿ ನೀಡಲಾಗುವುದು. ಉಳಿದ ತರಬೇತಿ ಕಾರ್ಯಕ್ರಮಗಳನ್ನು ಇನ್ನಿತರ ಕೆಲವು ಇಲಾಖೆಗಳಿಗೆ ವಹಿಸಿಕೊಡಲಾಗಿದೆ ಎಂದರು.

ಇದರ ಜೊತೆಗೆ ಕಾರ್ಮಿಕರಿಗಾಗಿ ಭವಿಷ್ಯ ನಿಧಿ, ಇಎಸ್‌ಐ ಸೇರಿದಂತೆ ಇತರ ಕಟ್ಟಡಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ತಯಾರು ಇದ್ದು, ರಾಜ್ಯ ಸರ್ಕಾರದಿಂದ ಜಮೀನು ಮಂಜೂರು ಆಗಬೇಕಿದೆ ಎಂದು ನುಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT