ಕೋಲಾರ: ಖಾದಿ, ಗಾಂಧೀಜಿ, ಭಗವದ್ಗೀತೆ ಬಗ್ಗೆ ಶ್ರದ್ಧೆ ಹೊಂದಿದ್ದ ಸರಳ ಜೀವಿ ಕೆ.ಪಟ್ಟಾಭಿರಾಮನ್ ಅವರನ್ನು ಸ್ಮರಣೆ ಮಾಡುವವರು ಇಲ್ಲವೇ ಎಂದು ಕೇಳುವ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ. ಆದರೆ ಇದೇ ವೇಳೆ ಅವರ ಕುರಿತ ಪುಸ್ತಕ ಬಿಡುಗಡೆಯಾಗಿರುವುದು ಆಶಾದಾಯಕ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬೆಗ್ಲಿಹೊಸಹಳ್ಳಿಯ ಗ್ರೀನ್ ವ್ಯಾಲಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಕೆ.ಆರ್.ಜಯಶ್ರೀ ಅವರ ‘ಕೋಲಾರ ಗಾಂಧಿ ಕೆ.ಪಟ್ಟಭಿರಾಮನ್’ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಚಿವ ಸಂಪುಟದಲ್ಲಿ ಸ್ಥಾನ ಗಳಿಸುವ ಎಲ್ಲ ಅರ್ಹತೆ ಇದ್ದರೂ ಪಟ್ಟಾಭಿರಾಮನ್ ಅವರಿಗೆ ದೊರಕಲಿಲ್ಲ ಎಂದು ಹೇಳಿದರು.
ಜಾತಿ ಜನಸಂಖ್ಯೆ ಆಧರಿಸಿ ಚುನಾವಣೆ ಟಿಕೆಟ್ ನೀಡುವ ಧೋರಣೆಯನ್ನು ವಿರೋಧಿಸಿದ್ದ ಅವರು, ಕಾಂಗ್ರೆಸ್ ತೊರೆದು ಸರ್ವೋದಯ ಪಕ್ಷ ಸ್ಥಾಪಿಸಿ ಸ್ವತಂತ್ರವಾಗಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದರು ಎಂದರು.
ಪಟ್ಟಾಭಿರಾಮನ್ ಅವರ ಮೊಮ್ಮಗಳು, ನಿವೃತ್ತ ಪ್ರಾಂಶುಪಾಲರಾದ ಕೆ.ಎಂ.ಉಮಾದೇವಿ ಕೃತಿ ಬಿಡುಗಡೆ ಮಾಡಿದರು.
ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪಟ್ಟಾಭಿರಾಮನ್ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದು, ಕೋಲಾರ– ಚಿಕ್ಕಬಳ್ಳಾಪುರ ಕೇಂದ್ರೀಯ ಸಹಕಾರ ಬ್ಯಾಂಕ್ ನಿರ್ದೇಶಕ ಕೆ.ವಿ.ಶಂಕರಪ್ಪ, ಪಟ್ಟಾಭಿರಾಮನ್ ಅವರಿಂದ ತಾವು ಉಪಕೃತರಾದದ್ದನ್ನು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲ ಕೆ.ಮುನಿಸ್ವಾಮಿಗೌಡರೇ ಕಾರ್ಯಕ್ರಮ ನಿರ್ವಹಿಸಿ ಗಮನ ಸೆಳೆದರು. ವನಸುಮ ಪ್ರಕಾಶನದ ಆರ್.ವೇಣುಗೋಪಾಲ್, ಲೇಖಕಿ ಕೆ.ಆರ್.ಜಯಶ್ರೀ, ಅವರ ತಾಯಿ ಕಮಲಮ್ಮ ವೇದಿಕೆಯಲ್ಲಿದ್ದರು. ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ವಕೀಲ ಬಿಸಪ್ಪಗೌಡ, ಪಟ್ಟಾಭಿರಾಮನ್ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.