ADVERTISEMENT

ಮಲೆನಾಡು ಗಾಂಧಿ...

​ಪ್ರಜಾವಾಣಿ ವಾರ್ತೆ
Published 17 ಜೂನ್ 2012, 19:30 IST
Last Updated 17 ಜೂನ್ 2012, 19:30 IST
ಮಲೆನಾಡು ಗಾಂಧಿ...
ಮಲೆನಾಡು ಗಾಂಧಿ...   

ಚಿಕ್ಕಮಗಳೂರು: `ಉಸಿರು ನಿಲ್ಲುವ ಮೊದಲು ಹೆಸರು ನಿಲ್ಲುವ ಕೆಲಸ ಮಾಡು~ ಮಾತಿಗೆ ಅರ್ಥ ಬರುವಂತೆ ಬದುಕಿ, ರಾಜಕೀಯ ಕ್ಷೇತ್ರದಲ್ಲಿ ಇಂದಿಗೂ ಜೀವಂತ ದಂತಕಥೆ, ಆದರ್ಶ ರಾಜಕಾರಣಿ ಎನಿಸಿಕೊಂಡು ಬದುಕುತ್ತಿರುವವರು ಎಚ್.ಜಿ. ಗೋವಿಂದೇಗೌಡರು. ಜನರೇ ಅವರಿಗೆ ನೀಡಿದ ಬಿರುದು `ಮಲೆನಾಡು ಗಾಂಧಿ~. ಗಾಂಧಿ ಹೆಸರಿಗೆ ಅನ್ವರ್ಥ ನಾಮದಂತೆ ಬದುಕುತ್ತಿರುವ ಅವರ ಸಂಪನ್ನ ಜೀವನ ಪ್ರತಿಯೊಬ್ಬರಿಗೂ ಅನುಕರಣೀಯ.

ಎಚ್.ಜಿ.ಗೋವಿಂದೇಗೌಡ ಅವರು ಎನ್.ಆರ್.ಪುರ ತಾಲ್ಲೂಕಿನ ಕಾನೂರು ಗ್ರಾಮದ ಇಣಚಿ ಮನೆಯಲ್ಲಿ ಗಿಡ್ಡೇಗೌಡ ಮತ್ತು ಬೋಬಮ್ಮ ದಂಪತಿಯ ಏಕಮಾತ್ರ ಪುತ್ರನಾಗಿ 1926ರ ಮೇ 25ರಂದು ಜನಿಸಿದರು. ಪುರಸಭೆ ಅಧ್ಯಕ್ಷ ಸ್ಥಾನದಿಂದ ಪ್ರೌಢಶಿಕ್ಷಣ ಸಚಿವರಾಗುವವರೆಗೆ ರಾಜಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಸರಳತೆಯಿಂದಲೇ ಬೆಳೆದವರು. 1995ರ ಅವಧಿಯಲ್ಲಿ ರಾಜ್ಯದ ಪ್ರೌಢಶಿಕ್ಷಣ ಸಚಿವರಾದಾಗ ಶಿಕ್ಷಣ ಕ್ಷೇತ್ರದಲ್ಲಿ ತಂದಂತಹ ಬದಲಾವಣೆ ಮತ್ತು ಶಿಕ್ಷಕರ ನೇಮಕಾತಿಗೆ ಕೈಗೊಂಡ ದಿಟ್ಟ ಕ್ರಮ ಸಹಸ್ರಾರು ಶಿಕ್ಷಕರು ಅವರ ಪೂಜ್ಯಭಾವದಿಂದ ಕಾಣುವಂತಾಗಿದೆ.

ನಿಜವಾದ ರಾಜಕಾರಣಿ ಹೇಗಿರಬೇಕು. ಎಂದು ಯಾರನ್ನಾದರೂ ಕೇಳಿದರೆ ಜಿಲ್ಲೆಯಲ್ಲಿ ಪ್ರತಿಯೊಬ್ಬರು ಪಕ್ಷಾತೀತವಾಗಿ ಗೋವಿಂದೇಗೌಡರ ಹೆಸರು ಹೇಳುತ್ತಾರೆ. ಜಿಲ್ಲೆಯಲ್ಲಿ ನೂರಕ್ಕೇ ನೂರಷ್ಟು ಗಾಂಧಿವಾದಿಯಾಗಿ ಬದುಕುತ್ತಿರುವ ಏಕೈಕ ರಾಜಕಾರಣಿ ಇದ್ದರೆ ಅದು ಗೋವಿಂದೇಗೌಡರು ಮಾತ್ರ ಎಂದೂ ಇಂದಿಗೂ ಜನರು ನೆನೆಯುತ್ತಾರೆ.  ಜಾತಿ, ಹಣ, ಹೆಂಡ, ಕುಟುಂಬ ಸದಸ್ಯರ ಮೂಗು ತೂರಿಸುವಿಕೆ... ಹೀಗೆ ಯಾವುದೂ ಇಲ್ಲದೆ ಚುನಾವಣೆಗಳನ್ನು ಗೆದ್ದು ವಿಧಾನಸಭೆ ಪ್ರವೇಶಿಸಿ, ಶಿಕ್ಷಣ ಸಚಿವರಾಗಿ ಹೆಸರು ಮಾಡಿರುವುದು ಅನುಕರಣೀಯ ಎನ್ನುತ್ತಾರೆ ಅವರ ಸಮಕಾಲೀನರು.

`ಸರಳತೆ~ ಎನ್ನುವುದನ್ನೇ ಪ್ರದರ್ಶನ ಮಾಡಿಕೊಂಡಿರುವ ರಾಜಕಾರಣಿಗಳ ನಡುವೆ `ಮಲೆನಾಡ ಗಾಂಧಿ~ ಬಾಲ್ಯದಿಂದಲೂ ಅತ್ಯಂತ ಸರಳವಾಗಿ, ಶುದ್ಧ ಚಾರಿತ್ರ್ಯವಿಟ್ಟುಕೊಂಡು ಬದುಕುತ್ತಿದ್ದಾರೆ. ಖಾದಿ ಜುಬ್ಬಾ, ಪೈಜಾಮ, ಚಪ್ಪಲಿ ಅವರ ಧಿರಿಸು. ಎಂದೂ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ.  ಒಮ್ಮೆ ಅಧಿಕಾರದ ರುಚಿ ನೋಡಿದವರು ಕುರ್ಚಿಗೆ ಅಂಟಿಕೊಳ್ಳಲು ಹಪಹಪಿಸುವರ ನಡುವೆ ತಾವಿನ್ನೂ ಪ್ರಭಾವಿ ವ್ಯಕ್ತಿಯಾಗಿದ್ದಾಗಲೇ ರಾಜಕೀಯ ನಿವೃತ್ತಿಯನ್ನು 1999ರಲ್ಲಿ ಘೋಷಿಸಿದರು.

ತಮ್ಮ ಬಳಿ ಸಲಹೆ ಕೇಳಿಕೊಂಡು ಬರುವವರಿಗೆ ಮಾರ್ಗದರ್ಶನ ಮಾಡಿಕೊಂಡು ಕೊಪ್ಪ ತಾಲ್ಲೂಕಿನ ಗುಣವಂತೆ ಗ್ರಾಮದ ತಮ್ಮ ಮಣಿಪುರ ಎಸ್ಟೇಟ್‌ನಲ್ಲಿ ಏಕೈಕ ಪುತ್ರ ವೆಂಕಟೇಶ್ ಜತೆಗೆ ನೆಲೆಸಿದ್ದಾರೆ. ಈಗ 86 ಹರೆಯದ ಗೋವಿಂದೇಗೌಡರು ರಾಜಕೀಯ ಜಂಜಾಟದಿಂದ ದೂರವುಳಿದು, ಜೀವನದ `ಸಂಧ್ಯಾಕಾಲ~ವನ್ನು ನೆಮ್ಮದಿಯಿಂದ ಕಳೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.