ADVERTISEMENT

ಮಳೆನೀರಿನೊಂದಿಗೆ ಉದ್ಯಾನಕ್ಕೆ ಬಂದ ಮೊಸಳೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
ಮೈಸೂರಿನ ಕುಪ್ಪಣ್ಣ ಉದ್ಯಾನಕ್ಕೆ ಹರಿದು ಬಂದಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸೆರೆಹಿಡಿದರು
ಮೈಸೂರಿನ ಕುಪ್ಪಣ್ಣ ಉದ್ಯಾನಕ್ಕೆ ಹರಿದು ಬಂದಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸೆರೆಹಿಡಿದರು   

ಮೈಸೂರು: ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿದ್ದ ಚರಂಡಿಯ ಮೂಲಕ ಕುಪ್ಪಣ್ಣ ಉದ್ಯಾನಕ್ಕೆ ಬಂದಿದ್ದ ಒಂದೂವರೆ ವರ್ಷದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸೆರೆಹಿಡಿದು ಶ್ರೀರಂಗಪಟ್ಟಣ ತಾಲ್ಲೂಕಿನ ಗೆಂಡೆ ಹೊಸಹಳ್ಳಿಯಲ್ಲಿ ಕಾವೇರಿ ನದಿಗೆ ಬಿಟ್ಟರು.

ಮೊಸಳೆಯು ಮೃಗಾಲಯದ ಪಕ್ಕದಲ್ಲಿರುವ ಕಾರಂಜಿ ಕೆರೆಯಿಂದ ಉದ್ಯಾನಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದ ಸಾರ್ವಜನಿಕರು ಮೊಸಳೆ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಎಸಿಎಫ್‌ ಪ್ರಕಾಶ್‌ ನೇತೃತ್ವದ ತಂಡ ಸ್ಥಳಕ್ಕೆ ಬಂದು ಮಳೆನೀರಿನಲ್ಲಿ ತಲೆ ಹುದುಗಿಸಿ ಮಲಗಿದ್ದ ಮೊಸಳೆ ಕಣ್ಣಿಗೆ ಬಿದ್ದಿದೆ.

ADVERTISEMENT

ಮೊಸಳೆ ನೀರಿನಿಂದ ಹೊರಗೆ ಬರುವಂತೆ ನೋಡಿಕೊಂಡ ಸಿಬ್ಬಂದಿ, ದೂರದಿಂದ ಬಲೆ ಬೀಸಿದ್ದಾರೆ. ಅತ್ತಿತ್ತ ಸುಳಿಯದಂತೆ ಎಚ್ಚರವಹಿಸಿ ಕೋಲುಗಳ ನೆರವಿನಿಂದ ಮುಖವನ್ನು ನೆಲಕ್ಕೆ ಒತ್ತಿ ಹಿಡಿದ್ದಿದ್ದಾರೆ. ಕಣ್ಣಿಗೆ ಬಟ್ಟೆ ಹಾಕಿ ಮುಚ್ಚಿ, ಬಾಯಿಯನ್ನು ಹಗ್ಗದಿಂದ ಬಿಗಿದಿದ್ದಾರೆ. ಸುಮಾರು 45 ನಿಮಿಷಗಳಲ್ಲಿ ಸೆರೆಹಿಡಿಯುವ ಕಾರ್ಯಾಚರಣೆ ಮುಗಿಸಿ ಅರಣ್ಯ ಭವನಕ್ಕೆ ತಂದರು.

‘ಮಂಗಳವಾರ ರಾತ್ರಿ ಸುರಿದ ಮಳೆಗೆ ಹರಿಯತ್ತಿದ್ದ ನೀರಿನೊಂದಿಗೆ ಕಾರಂಜಿ ಕೆರೆಯಿಂದ ದೊಡ್ಡಕೆರೆ ಮೈದಾನಕ್ಕೆ ಮೊಸಳೆ ಬಂದಿದೆ. ಅಲ್ಲಿಂದ ದೊಡ್ಡ ಚರಂಡಿಯ ಮೂಲಕ ಕುಪ್ಪಣ್ಣ ಉದ್ಯಾನ ಸೇರಿದೆ’ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.