ADVERTISEMENT

ಮಾಜಿ ಉಪಮುಖ್ಯಮಂತ್ರಿ ಪ್ರಕಾಶ್ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ಹೂವಿನಹಡಗಲಿ: ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ ಅಂತ್ಯಕ್ರಿಯೆ ಇಲ್ಲಿಯ ರಂಗಭಾರತಿ ಮಂದಿರದ ಸಮೀಪ ಇರುವ ಅವರ ತೋಟದಲ್ಲಿ ಗುರುವಾರ ಸಂಜೆ ಶೋಕಸಾಗರದ ಮಧ್ಯೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು. ಪ್ರಕಾಶ್ ಪಾರ್ಥಿವ ಶರೀರ ಬೆಂಗಳೂರಿನಿಂದ ಹೊರಟು, ಬೆಳಗಿನ ಜಾವ 3.30ಕ್ಕೆ ಇಲ್ಲಿನ ಅವರ ತೋಟದ ನಿವಾಸಕ್ಕೆ ಬಂದಾಗ ಅವರ ದರ್ಶನಕ್ಕಾಗಿ ಕಾದು ಕುಳಿತಿದ್ದ ಅಭಿಮಾನಿಗಳ ಮಡುಗಟ್ಟಿದ ದುಃಖದ ಕೋಡಿ ಒಡೆಯಿತು.

ಪಾರ್ಥಿವ ಶರೀರಕ್ಕೆ ಶ್ರೀಶೈಲ ಜಗದ್ಗುರು ಚನ್ನಸಿದ್ಧರಾಮ ಭಗವತ್ಪಾದರು, ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅಂತಿಮ ಪೂಜೆ ಸಲ್ಲಿಸಿದರು. ಗವಿಮಠದ ಪಂಪಯ್ಯ ದೇವರು, ಕುರುಬಗೊಂಡ ಪಂಚಾಕ್ಷರಿ ಶಾಸ್ತ್ರಿ, ಗುರುಶಾಂತದೇವರು ಇದ್ದರು. ನಂತರ ಬೆಳಿಗ್ಗೆ 9.30ಕ್ಕೆ ಪಟ್ಟಣದ ಜಿ.ಪಿ.ಜಿ. ಪದವಿಪೂರ್ವ ಕಾಲೇಜಿನ ಕ್ರೀಡಾಮೈದಾನಕ್ಕೆ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ತರಲಾಯಿತು. ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದುಬಂದಿತ್ತು.

ಪಟ್ಟಣದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಗುರುವಾರ ಕೂಡ ವ್ಯಾಪಾರಸ್ಥರು ಸ್ವಪ್ರೇರಣೆಯಿಂದ ಹೊಟೇಲ್, ಅಂಗಡಿಗಳನ್ನು ಬಂದ್ ಮಾಡಿ ಗೌರವ ಸಲ್ಲಿಸಿದರು. ಅಂತಿಮ ಯಾತ್ರೆ: ಪಾರ್ಥಿವ ಶರೀರವನ್ನು ಪಟ್ಟಣ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಪಟ್ಟಣದ ಜಿ.ಪಿ.ಜಿ. ಮೈದಾನದಿಂದ ಹೊರಟ ಮೆರವಣಿಗೆ ಪ್ರಮುಖ ರಸ್ತೆಗಳ ಮೂಲಕ ಹಾಯ್ದು,ರಂಗಭಾರತಿ ಮಂದಿರ ಬಳಿಯ ತೋಟಕ್ಕೆ ತಲುಪಿತು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯದ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆ.ಪಿ.ಪಿ.ಸಿ.ಸಿ. ಅಧ್ಯಕ್ಷ ಜಿ.ಪರಮೇಶ್ವರ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜನಾರ್ದನ ರೆಡ್ಡಿ, ಸಚಿವರಾದ ಶ್ರೀರಾಮುಲು, ಕರುಣಾಕರರೆಡ್ಡಿ, ಬಸವರಾಜ ಬೊಮ್ಮಾಯಿ, ಸಿ.ಎಂ.ಉದಾಸಿ,  ವಿಜಯಶಂಕರ, ಸಂಸದರು ಮತ್ತು ಶಾಸಕರು, ಹಂಪಿ ವಿ.ವಿ. ಕುಲಪತಿ ಎ.ಮುರಿಗೆಪ್ಪ, ವಿಶ್ರಾಂತ ಕುಲಪತಿ ಡಾ.ಎಂ.ಎಂ.ಕಲ್ಬುರ್ಗಿ, ಸಾಹಿತಿಗಳಾದ ಚಂದ್ರಶೇಖರ ಪಾಟೀಲ, ಕಾಳೇಗೌಡ ನಾಗವಾರ, ಸಿದ್ಧಲಿಂಗ ಪಟ್ಟಣಶೆಟ್ಟಿ, ಕುಂ.ವೀರಭದ್ರಪ್ಪ, ರಹಮತ್ ತರೀಕೆರೆ ಮತ್ತಿತತರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.