ADVERTISEMENT

ಮಾಹಿತಿ ವಿಳಂಬ:ಡಿಐಜಿಗೆ ದಂಡ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಬೆಂಗಳೂರು: ಅರ್ಜಿದಾರರೊಬ್ಬರು ಕೇಳಿದ ಮಾಹಿತಿಯನ್ನು ನೀಡಲು ವಿಳಂಬ ಮಾಡಿದ ಸಿಐಡಿಯ (ನೇಮಕಾತಿ ಮತ್ತು ತರಬೇತಿ) ಅಂದಿನ ಡಿಐಜಿ ಸೈಯದ್ ಉಲ್ಫತ್ ಹುಸೇನ್ ಅವರಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿ ಕರ್ನಾಟಕ ಮಾಹಿತಿ ಆಯೋಗ ಆದೇಶಿಸಿದೆ. ದಂಡದ ಹಣವನ್ನು ಸ್ವಂತದ ಖರ್ಚಿನಲ್ಲಿ ನೀಡಬೇಕು ಎಂದು ಆಯುಕ್ತ ಡಿ.ತಂಗರಾಜ್ ಆದೇಶಿಸಿದ್ದಾರೆ.

ಹುಸೇನ್ ಅವರು ಈಗ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ವಿರುದ್ಧ ಚಿಕ್ಕಮಗಳೂರಿನ ಎ.ಎಂ.ರವಿಶಂಕರ ಎನ್ನುವವರು ದೂರು ದಾಖಲು ಮಾಡಿದ್ದರು.

2009-10ನೇ ಸಾಲಿನ ಪಿಎಸ್‌ಐ (ಸಿವಿಲ್) ನೇಮಕಾತಿಗಾಗಿ 2009ರ ನ.15ರಂದು ಗುಲ್ಬರ್ಗದ ಅಪ್ಪ ದೊಡ್ಡಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಲಿಖಿತ ಪರೀಕ್ಷೆಯ ಎಲ್ಲ ಕೊಠಡಿಗಳ ವಿಡಿಯೊ ಮುದ್ರಣದ ಸಿ.ಡಿ.ಯನ್ನು ನೀಡಲು ರವಿಶಂಕರ್ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿ ಕಳೆದ 2010ರ ಜ.1ರಂದು ಕೋರಿದ್ದರು.

ಆದರೆ ನಿಗದಿತ ಅವಧಿಯಲ್ಲಿ ಅವರಿಗೆ ದಾಖಲೆ ನೀಡಲಾಗಿಲ್ಲ. ಆದುದರಿಂದ ಮಾಹಿತಿ ಹಕ್ಕು ಆಯೋಗದಲ್ಲಿ ಅವರು ದೂರು ದಾಖಲು ಮಾಡಿದ್ದರು. ಆಗ ಹುಸೇನ್ ಅವರಿಗೆ ಆಯೋಗ ನೋಟಿಸ್ ಜಾರಿಗೊಳಿಸಿತ್ತು.
ಎಂಜಿನಿಯರಿಂಗ್ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವ ಕಾರಣ, ಈಗಲೇ ಮಾಹಿತಿ ನೀಡಲು ಆಗದು ಎಂದು ಹುಸೇನ್ ತಿಳಿಸಿದ್ದರು.

ಒಮ್ಮೆ ನೇಮಕಾತಿಪ್ರಕ್ರಿಯೆ ಮುಗಿದರೆ ತಕ್ಷಣ ಮಾಹಿತಿ ನೀಡಲಾಗುವುದು ಎಂದು ಅವರು ವಾಗ್ದಾನ ಮಾಡಿದ್ದರು.
ಆದರೆ ನೇಮಕಾತಿ ಪ್ರಕ್ರಿಯೆ 2010ರ ಅ.23ರಂದು ಮುಗಿಯಿತು. ಹುಸೇನ್ ಅವರು ಆಯೋಗಕ್ಕೆ ನೀಡಿದ್ದ ವಾಗ್ದಾನ ಉಳಿಸಿಕೊಳ್ಳಲಿಲ್ಲ. ಆದ್ದರಿಂದ ಎ.ಎಂ. ರವಿಶಂಕರ್ ಅವರು ಪುನಃ ಆಯೋಗದ ಮೊರೆ ಹೋದರು.

ಈ ಮಧ್ಯೆ 2011ರ ಸೆ.23ರಂದು ಅವರಿಗೆ ಮಾಹಿತಿ ನೀಡಲಾಯಿತು. ನೇಮಕ ಪ್ರಕ್ರಿಯೆ ಮುಗಿದ  ವರ್ಷದ ಬಳಿಕ ಮಾಹಿತಿ ನೀಡಿರುವುದು ಆಯೋಗದ ಅಸಮಾಧಾನಕ್ಕೆ               ಕಾರಣವಾಯಿತು.
ಈ ಹಿನ್ನೆಲೆಯಲ್ಲಿ ದಂಡ ವಿಧಿಸಿ ಆದೇಶಿಸಲಾಗಿದೆ. ವಿಚಾರಣೆಯನ್ನು ಮೇ 29ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.