ADVERTISEMENT

ಮುಂದುವರಿದ ಅನಿಯಮಿತ ವಿದ್ಯುತ್ ಕಡಿತ

ಎ.ಎಂ.ಸುರೇಶ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ಬೆಂಗಳೂರು: ಅಧಿಕೃತವಾಗಿ ಲೋಡ್‌ಶೆಡ್ಡಿಂಗ್ ಜಾರಿ ಮಾಡುವುದಾಗಿ ಸರ್ಕಾರ ವೇಳಾಪಟ್ಟಿ ಪ್ರಕಟಿಸಿದ ನಂತರವೂ ಎಲ್ಲ ಕಡೆ ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ರಾಜ್ಯದ ಐದೂ ವಿದ್ಯುತ್ ಸರಬರಾಜು ಕಂಪೆನಿಗಳ ವ್ಯಾಪ್ತಿಯಲ್ಲಿ ಇದುವರೆಗೆ ಲೋಡ್‌ಶೆಡ್ಡಿಂಗ್ ವೇಳಾಪಟ್ಟಿ ಜಾರಿಗೆ ಬಂದಿಲ್ಲ.

ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ 6ರಿಂದ ಬೆಳಿಗ್ಗೆ 6 ಗಂಟೆವರೆಗೆ ನಿರಂತರವಾಗಿ 12 ಗಂಟೆ ಕಾಲ ಸಿಂಗಲ್‌ಫೇಸ್ ವಿದ್ಯುತ್ ನೀಡುವುದಾಗಿ ಇಂಧನ ಸಚಿವೆ ಶೋಭಾ  ಕರಂದ್ಲಾಜೆ ಸೋಮವಾರ ಹೇಳಿದ್ದರು.

ಆದರೆ ಇದು ಸಹ ಜಾರಿಯಾಗಿಲ್ಲ. ಬಹುತೇಕ ಹಳ್ಳಿಗಳಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆವರೆಗೆ ವಿದ್ಯುತ್ ನೀಡಲಾಗುತ್ತಿದ್ದು, ಮಧ್ಯದಲ್ಲಿ ಸುಮಾರು ಎರಡು ಗಂಟೆ ಕಾಲ ವಿದ್ಯುತ್ ಕಡಿತವಾಗುತ್ತಿದೆ. ರಾತ್ರಿ ವೇಳೆ ಸರಾಸರಿ ಆರು ಗಂಟೆ ಮಾತ್ರ ವಿದ್ಯುತ್ ಪೂರೈಕೆಯಾಗುತ್ತಿದೆ.  

ಇನ್ನು, ನಗರ-ಪಟ್ಟಣಗಳಲ್ಲಿ ಒಂದು ಗಂಟೆ ಮಾತ್ರ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತದೆ, ರಾಜಧಾನಿಯಲ್ಲಿ ವಿದ್ಯುತ್ ಕಡಿತ ಇರುವುದಿಲ್ಲ ಎಂದು ಪ್ರಕಟಿಸಲಾಗಿತ್ತು. ಆದರೆ ಇದು ಸಹ ಹುಸಿಯಾಗಿದೆ. ಬೆಂಗಳೂರು ಹೊರತುಪಡಿಸಿ ಇತರ ನಗರ-ಪಟ್ಟಣ ಪ್ರದೇಶಗಳಲ್ಲಿ ನಿತ್ಯ 3ರಿಂದ 6 ಗಂಟೆ ಕಾಲ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಅಲ್ಲದೆ ರಾಜಧಾನಿಯ ಹಲವೆಡೆ ಅನಿಯಮಿತ ವಿದ್ಯುತ್ ಕಡಿತ ಮುಂದುವರಿದಿದೆ.

ಹಲವು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳು, ಗ್ರಾಮಾಂತರ ಪ್ರದೇಶಗಳಿಂದ `ಪ್ರಜಾವಾಣಿ~ ಮಾಹಿತಿ ಸಂಗ್ರಹಿಸಿದ್ದು, ಎಲ್ಲಿಯೂ ಲೋಡ್‌ಶೆಡ್ಡಿಂಗ್ ಅನುಷ್ಠಾನಕ್ಕೆ ಬಂದಿಲ್ಲ. ಅನಿಯಮಿತವಾಗಿ ಕಡಿತ ಮಾಡುತ್ತಿದ್ದು, ಯಾವಾಗ ವಿದ್ಯುತ್ ಇರುತ್ತದೆ, ಇರುವುದಿಲ್ಲ ಎಂಬುದೇ ಗೊತ್ತಾಗುತ್ತಿಲ್ಲ.

ಬೆಳಿಗ್ಗೆ ಮತ್ತು ಸಂಜೆ ತಲಾ ಎರಡು ಗಂಟೆ ಕಡಿತ ಮಾಡಲಾಗುತ್ತಿದೆ. ಇದಲ್ಲದೆ ಮಧ್ಯದಲ್ಲೂ ಕಡಿತ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕೇಂದ್ರಗಳಲ್ಲಿ 3ರಿಂದ 4 ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ 4ರಿಂದ 6 ಗಂಟೆವರೆಗೂ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ. ತುಮಕೂರು, ಶಿವಮೊಗ್ಗ, ದಾವಣಗೆರೆ, ಕೋಲಾರ, ಚಾಮರಾಜನಗರ, ಚಿತ್ರದುರ್ಗ, ರಾಮನಗರ, ಹಾಸನ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಿಂದ ಸಂಗ್ರಹಿಸಿರುವ ಮಾಹಿತಿ ಪ್ರಕಾರ ಎಲ್ಲಿಯೂ ನಿಗದಿತ ಅವಧಿಯಲ್ಲಿ ಲೋಡ್‌ಶೆಡ್ಡಿಂಗ್ ಮಾಡುತ್ತಿಲ್ಲ. ಹೆಚ್ಚು ವಿದ್ಯುತ್ ಬೇಡಿಕೆ ಇರುವ ಬೆಳಿಗ್ಗೆ ಮತ್ತು ಸಂಜೆ ವೇಳೆ ಅಷ್ಟೇ ಅಲ್ಲದೆ ಬೇರೆ ಸಮಯದಲ್ಲೂ ಎರಡು ಗಂಟೆಗೊಮ್ಮೆ 20ರಿಂದ 30 ನಿಮಿಷ ಕಡಿತವಾಗುತ್ತಿದೆ.

ಹಳ್ಳಿಗಳಲ್ಲಿ ಯಾವಾಗ ವಿದ್ಯುತ್ ಇರುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ಮೂರು ಗಂಟೆ ಕಾಲ ಮೂರು ಫೇಸ್ ವಿದ್ಯುತ್ ನೀಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಮೂರು ಗಂಟೆಯೂ ನಿರಂತರವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಮೂರು ಫೇಸ್ ವಿದ್ಯುತ್ ಕೊಟ್ಟ ಸ್ವಲ್ಪ ಸಮಯದಲ್ಲೇ ಸಿಂಗಲ್‌ಫೇಸ್‌ಗೆ ಬದಲಾಯಿಸಲಾಗುತ್ತದೆ.
 
ಅರ್ಧ ಗಂಟೆ, ಒಂದು ಗಂಟೆಗೊಮ್ಮೆ ಈ ರೀತಿ ಬದಲಾವಣೆ ಮಾಡುವುದರಿಂದ ಪಂಪ್‌ಸೆಟ್‌ಗಳನ್ನು ಚಾಲನೆ ಮಾಡುವುದೇ ಕಷ್ಟಕರವಾಗಿದೆ ಎಂದು ಹೊಸಕೋಟೆ ತಾಲ್ಲೂಕು ಆಲಪನಹಳ್ಳಿಯ ಎ.ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಹೇಳುವ ಹಾಗೆ ಗ್ರಾಮೀಣ ಪ್ರದೇಶಗಳಲ್ಲಿ ದಿನಕ್ಕೆ 15 ಗಂಟೆ, ನಗರ-ಪಟ್ಟಣ ಪ್ರದೇಶಗಳಲ್ಲಿ 23 ಗಂಟೆ  ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ 16 ಗಂಟೆ ಕಾಲ ಕಡಿತ ಮಾಡಲಾಗುತ್ತಿದೆ. ಒಂದು ದಿನವೂ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಕುಡಿಯುವ ನೀರಿಗೂ ತೊಂದರೆಯಾಗಿದೆ ಎಂದು ಚಿಂತಾಮಣಿ ತಾಲ್ಲೂಕು ಸಂತೇಕಲ್ಲಹಳ್ಳಿಯ ಎಸ್. ಮುನಿರಾಜು ಬೇಸರ ವ್ಯಕ್ತಪಡಿಸಿದರು.

ಮಳೆ ಕೈಕೊಟ್ಟಿರುವುದರಿಂದ ಪಂಪ್‌ಸೆಟ್‌ಗಳ ಮೇಲಿನ ಅವಲಂಬನೆ ಹೆಚ್ಚಾಗಿದೆ. ಕುಡಿಯುವ ನೀರಿಗೂ ಕೊಳವೆ ಬಾವಿಗಳನ್ನು ಅವಲಂಬಿಸಲಾಗಿದೆ. ಆದರೆ ವಿದ್ಯುತ್ ಇಲ್ಲದ ಕಾರಣ ಬೆಳೆಗಳು ಒಣಗುತ್ತಿರುವುದು ಅಷ್ಟೇ ಅಲ್ಲದೆ ಕುಡಿಯುವ ನೀರಿಗೂ ತೊಂದರೆಯಾಗಿದೆ ಎಂದು ಶಹಾಪುರದ ನಾಗೇಶ್ ಹೇಳಿದರು.

`ಕೊನೆ ಪಕ್ಷ ನಿಗದಿತ ವೇಳೆಯಲ್ಲಿ ಮಾತ್ರ ಕರೆಂಟ್ ತೆಗೆದರೆ, ಅದಕ್ಕೆ ಅನುಗುಣವಾಗಿ ನಮ್ಮ ದೈನಂದಿನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆದರೆ ಮನಸ್ಸಿಗೆ ಬಂದಾಗ ಕಡಿತ ಮಾಡುತ್ತಿರುವುದರಿಂದ ತುಂಬಾ ತೊಂದರೆಯಾಗಿದೆ~ ಎಂದು ಶಿಕ್ಷಕಿ ಎನ್. ವನಜಾಕ್ಷಿ ನುಡಿದರು.

ಬಹುತೇಕ ಕಡೆ ಇದೇ ರೀತಿ ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ರೈತರ ಪಂಪ್‌ಸೆಟ್‌ಗಳು, ಕುಡಿಯುವ ನೀರಿಗೆ ಅಷ್ಟೇ ಅಲ್ಲದೆ ಹಿಟ್ಟಿನ ಗಿರಣಿಗಳು, ಮಿಲ್‌ಗಳಿಗೆ, ಕೈಗಾರಿಕೆಗಳಿಗೆ ತೊಂದರೆಯಾಗಿದ್ದು ಅನಿಯಮಿತ ಲೋಡ್‌ಶೆಡ್ಡಿಂಗ್ ಹಾವಳಿಯಿಂದ ಯಾವಾಗ ಮುಕ್ತಿ ಸಿಗುತ್ತದೊ ಎಂದು ರಾಜ್ಯದ ಜನತೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.