ADVERTISEMENT

ಮುಂದುವರಿದ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ಬೆಂಗಳೂರು: ಸೂಕ್ತ ಸ್ಥಾನಮಾನಕ್ಕಾಗಿ ಪಟ್ಟುಹಿಡಿದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರವೂ ತಮ್ಮ ಆಪ್ತ ಸಚಿವರು ಮತ್ತು ಶಾಸಕರ ಸಭೆ ನಡೆಸಿದರು.

ರೇಸ್‌ಕೋರ್ಸ್ ರಸ್ತೆಯ ನಿವಾಸದಲ್ಲಿ ನಡೆದ ಸಭೆಯಲ್ಲಿ ಯಡಿಯೂರಪ್ಪ ಅವರ ಪ್ರವಾಸ ಕಾರ್ಯಕ್ರಮವನ್ನು ಅಂತಿಮಗೊಳಿಸಲಾಯಿತು. ಹಲವು ಶಾಸಕರು ತಮ್ಮ ಕ್ಷೇತ್ರಗಳಿಗೆ ಬರುವಂತೆ ಆಹ್ವಾನ ನೀಡುತ್ತಿದ್ದು, ಇದೇ 29ರವರೆಗೂ ಕಾರ್ಯಕ್ರಮ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ.

ಈ ನಡುವೆ ಯಡಿಯೂರಪ್ಪ ಅವರು ಇದೇ 30ರಿಂದ ನಡೆಯುವ ಹತ್ತು ದಿನಗಳ ವಿಧಾನಮಂಡಲ ಅಧಿವೇಶನದಲ್ಲಿ ಭಾಗವಹಿಸುವ ಬಗ್ಗೆಯೂ ತಮ್ಮ ಆಪ್ತರ ಬಳಿ ಹೇಳಿದ್ದಾರೆ. ಹೀಗಾಗಿ ತಮ್ಮ ಬೇಡಿಕೆಗಳಿಗೆ ಸ್ಪಂದಿಸಲು ನೀಡಿರುವ ಜನವರಿ 15ರ ಗಡುವಿಗೆ ಅಂಟಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ವಿಧಾನಮಂಡಲ ಅಧಿವೇಶನದ ಬೆನ್ನಿಗೇ ಐದು ರಾಜ್ಯಗಳ ಚುನಾವಣೆ ಇದೆ. ಈ ಪ್ರಕ್ರಿಯೆ ಮಾರ್ಚ್ 5ರವರೆಗೂ ನಡೆಯಲಿದೆ. ಹೀಗಾಗಿ ಮುಂದಿನ ನಡೆ ಬಗ್ಗೆ ಚರ್ಚೆ ನಡೆದಿದೆ.

ಆಪ್ತರ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶಗೌಡ, `ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕು. ಈ ವಿಷಯದಲ್ಲಿ ವರಿಷ್ಠರು ವಿಳಂಬ ಧೋರಣೆ ಅನುಸರಿಸಬಾರದು~ ಎಂದರು.

`ರಾಜ್ಯದಲ್ಲಿ ಯಾರ ಪರವಾದ ಜನಾಭಿಪ್ರಾಯ ಇದೆ ಎಂಬುದನ್ನು ವರಿಷ್ಠರು ದೆಹಲಿಯಲ್ಲಿ ಕೂತು ನಿರ್ಧರಿಸುವುದು ಬೇಡ.

ಅದರ ಬದಲಿಗೆ ರಾಜ್ಯಕ್ಕೆ ಬಂದು ಯಡಿಯೂರಪ್ಪನವರ ಜತೆ ಪ್ರವಾಸ ಹೋದರೂ ವಾಸ್ತವ ಸ್ಥಿತಿ ಏನು ಎನ್ನುವುದು ಅರ್ಥವಾಗುತ್ತದೆ. ಮೊದಲು ಈ ಕೆಲಸ ಮಾಡಲಿ~ ಎಂದು ಆಗ್ರಹಪಡಿಸಿದರು.

ಯಡಿಯೂರಪ್ಪ ಅವರು ತುಮಕೂರಿಗೆ ಇದೇ 19ರಂದು ಭೇಟಿ ನೀಡಲಿದ್ದು, ಆ ಸಂದರ್ಭದಲ್ಲಿ ಕಾರ್ಯಕ್ರಮ ನಡೆಸಲಾಗುವುದು. ಒಂದು ರೀತಿ ಶಕ್ತಿ ಪ್ರದರ್ಶನದ ಕಾರ್ಯಕ್ರಮವೂ ಆಗಿರುತ್ತದೆ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.