ADVERTISEMENT

ಮುಖ್ಯಮಂತ್ರಿ ಆಸೆ ಇಲ್ಲ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 12 ಜೂನ್ 2017, 19:30 IST
Last Updated 12 ಜೂನ್ 2017, 19:30 IST
ಮುಖ್ಯಮಂತ್ರಿ ಆಸೆ ಇಲ್ಲ: ಬಿಎಸ್‌ವೈ
ಮುಖ್ಯಮಂತ್ರಿ ಆಸೆ ಇಲ್ಲ: ಬಿಎಸ್‌ವೈ   

ಚಾಮರಾಜನಗರ: ‘ನಾನೇ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಾಕು’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೋಮವಾರ ಹೇಳಿದರು.

ತಾಲ್ಲೂಕಿನ ರಾಮಸಮುದ್ರ ಗ್ರಾಮದಲ್ಲಿ ನಡೆದ ಸಭೆಯಲ್ಲಿ ವಿವಿಧ ಸಮುದಾಯಗಳ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.

‘ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರಿಗೆ ಕೊನೆಯ ದಿನಗಳು ಸಮೀಪಿಸುತ್ತಿವೆ. 8–9 ತಿಂಗಳಲ್ಲಿ ಕಾಂಗ್ರೆಸ್‌ ಕಾಲ ಮುಗಿಯಲಿದ್ದು, ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳಲಿದೆ’ ಎಂದರು.

ADVERTISEMENT

‘ಬಿಜೆಪಿಗೆ ಮತಹಾಕಿದರು ಎಂಬ ಕಾರಣಕ್ಕೆ ಗುಂಡ್ಲುಪೇಟೆಯಲ್ಲಿ 25 ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ. ಈ ವೇಳೆ ಗಾಯಗೊಂಡ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸಿದ್ದರಾಮಯ್ಯ ಅವರಿಗೆ ಇಂತಹ ಘಟನೆಗಳು ಕಾಣಿಸುತ್ತಿಲ್ಲ. ಅವರ ಸರ್ವಾಧಿಕಾರಿ ಧೋರಣೆ ಹೆಚ್ಚುತ್ತಿದೆ. ಇದು ಹೆಚ್ಚು ದಿನ ಉಳಿಯುವುದಿಲ್ಲ’ ಎಂದು ತಿಳಿಸಿದರು.

ನಾಲ್ಕು ವರ್ಷದಿಂದ ರಾಜ್ಯದಲ್ಲಿ ಗೂಂಡಾಗಿರಿ ನಡೆಯುತ್ತಿದೆ. ಮರ್ಯಾದಸ್ಥರು ಧೈರ್ಯದಿಂದ ಓಡಾಡುವುದೇ ಕಷ್ಟವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೊಲೆ ಸುಲಿಗೆಗಳು ನಡೆಯುತ್ತಿವೆ. ಸಿದ್ದರಾಮಯ್ಯ ಅವರೇ ಸುದ್ದಿಗೋಷ್ಠಿ ಕರೆದು ಬೆಂಗಳೂರಿನಲ್ಲಿ ಗೂಂಡಾ ಸಂಸ್ಕೃತಿ ಬೆಳೆದಿದೆ ಎಂದು
ಹೇಳುವ ದುಃಸ್ಥಿತಿ ಬಂದಿದೆ ಎಂದು ಟೀಕಿಸಿದರು.

‘ರಾಷ್ಟ್ರೀಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡುತ್ತಿರುವ ಸಿದ್ದರಾಮಯ್ಯ ಅವರೇ, ತಮಗೆ ಮದ್ಯದಂಗಡಿಗಳ ಮೇಲೆ ಯಾಕಿಷ್ಟು ವ್ಯಾಮೋಹ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ವಿಚಾರದಲ್ಲಿ ಅವರ ನಡೆಯನ್ನು ಯಾರೂ ಒಪ್ಪುವುದಿಲ್ಲ’ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.
****
ದಲಿತರ ಮನೆಯಲ್ಲಿ ಬ್ರಾಹ್ಮಣರ ಅಡುಗೆ!
ಬಿ.ಎಸ್‌.ಯಡಿಯೂರಪ್ಪ ಮತ್ತು ಮುಖಂಡರಿಗಾಗಿ ಚಾಮರಾಜನಗರ ನಗರಸಭೆಯ  ಮಾಜಿ ಸದಸ್ಯ ನಂಜುಂಡಸ್ವಾಮಿ ಅವರ ಮನೆಯಲ್ಲಿ ಬೆಳಿಗ್ಗೆ ಉಪಾಹಾರಕ್ಕಾಗಿ ರಾಗಿ ಮತ್ತು ಅಕ್ಕಿ ದೋಸೆ, ಇಡ್ಲಿ, ಕೇಸರಿಬಾತ್, ಉಪ್ಪಿಟ್ಟು, ಬೋಂಡ, ಚಟ್ನಿ, ಸಾಗು ಸಿದ್ಧಪಡಿಸಲಾಗಿತ್ತು.

ಅಡುಗೆ ಗುತ್ತಿಗೆದಾರ, ಬ್ರಾಹ್ಮಣ ಸಮುದಾಯದ ಆರ್‌.ಚಂದ್ರಶೇಖರಯ್ಯ (ಕೋಮಲ) ಅವರು ದಲಿತ ಮುಖಂಡ ನಂಜುಂಡಸ್ವಾಮಿ ಅವರ ಮನೆಯಲ್ಲಿ ಉಪಾಹಾರ ಸಿದ್ಧಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.