ADVERTISEMENT

ಮುಖ್ಯ ಶಿಕ್ಷಕರ ನೇಮಕಾತಿಯಲ್ಲೂ ಎಲ್ಲ ಸರಿ ಇಲ್ರಿ!

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 19:59 IST
Last Updated 22 ಜುಲೈ 2013, 19:59 IST

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ 1998-99 ಮತ್ತು 2009ರಲ್ಲಿ ನಡೆಸಿದ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿಯೂ ಹಲವಾರು ಅಕ್ರಮಗಳು ನಡೆದಿವೆ ಎಂಬ ಮಾಹಿತಿಯನ್ನು ಅಭ್ಯರ್ಥಿಗಳು ಸಿಐಡಿಗೆ ತಲುಪಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಸಂದರ್ಶನದಲ್ಲಿ ಕಡಿಮೆ ಅಂಕ ನೀಡಿರುವುದು, ವೈವಾಹಿಕ ಸಂಬಂಧ ಕುದುರಿಸುವುದು, ಮೀಸಲಾತಿ ತಪ್ಪಿಸುವುದು ಮುಂತಾದ ತಪ್ಪುಗಳು ಇಲ್ಲಿಯೂ ನಡೆದಿವೆ ಎಂದು ಮುಖ್ಯೋಪಾಧ್ಯಾಯರಾಗಿ ನೇಮಕಾತಿ ಆಗದ ಕೆಲವರು ಸಿಐಡಿಗೆ ದೂರಿದ್ದಾರೆ. ಅಲ್ಲದೆ ಈ ಬಗ್ಗೆ ಕೂಡ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ.

629 ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಹುದ್ದೆಗಳಿಗೆ ಕೆಪಿಎಸ್‌ಸಿ 2009ರ ಜನವರಿ ಮತ್ತು ಫೆಬ್ರುವರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತು. ಲಿಖಿತ ಪರೀಕ್ಷೆಯಲ್ಲಿ 834 ಅಂಕ ಪಡೆದ ಅಭ್ಯರ್ಥಿಗೆ ಸಂದರ್ಶನದಲ್ಲಿ ಸಿಕ್ಕಿದ್ದು ಕೇವಲ 50 ಅಂಕ. ಆದರೆ ಲಿಖಿತ ಪರೀಕ್ಷೆಯಲ್ಲಿ ಕ್ರಮವಾಗಿ 738, 740, 745, 760 ಅಂಕ ಪಡೆದವರಿಗೆ ಸಂದರ್ಶನದಲ್ಲಿ ಕ್ರಮವಾಗಿ 150, 149, 145, 140 ಅಂಕಗಳನ್ನು ಕೊಟ್ಟು ಮುಖ್ಯೋಪಾಧ್ಯಾಯ ಹುದ್ದೆಯನ್ನು ನೀಡಲಾಗಿದೆ.

ಇದೇ ರೀತಿ 1998-99ರಲ್ಲಿ ನಡೆದ ಮುಖ್ಯೋಪಾಧ್ಯಾಯರ ಹುದ್ದೆ ನೇಮಕಾತಿಯಲ್ಲಿಯೂ ಆಗಿದೆ ಎಂದು ವೈ.ಗೋಪಾಲ್ ಸಾಕ್ಷಾಧಾರಗಳ ಸಹಿತ ಆರೋಪಿಸುತ್ತಾರೆ. ಈ ಸಂಬಂಧ ಅವರು ಕೆಪಿಎಸ್‌ಸಿ ಅಧ್ಯಕ್ಷರು, ರಾಜ್ಯಪಾಲರು, ಮುಖ್ಯಮಂತ್ರಿಗೆ ಪತ್ರ ಬರೆದಿದ್ದರೂ ಇನ್ನೂ ನ್ಯಾಯ ಸಿಕ್ಕಿಲ್ಲ. ಗೋಪಾಲ್ ಅವರು ಪ್ರವರ್ಗ ಮೀಸಲಾತಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ಪ್ರಕಾರವೇ ಅವರು ಸ್ಪರ್ಧಾತ್ಮಕ ಪರೀಕ್ಷೆಯನ್ನೂ ಬರೆದಿದ್ದರು.

1997ರ ಅಕ್ಟೋಬರ್ 10ರಂದು ಅವರು ಸಂದರ್ಶನಕ್ಕೆ ಹಾಜರಾದಾಗ ಅವರ ಮೀಸಲಾತಿ ಪ್ರಮಾಣ ಪತ್ರದಲ್ಲಿ ಲೋಪ ಇದೆ ಎಂದು ಅದನ್ನು ತಿರಸ್ಕರಿಸಲಾಯಿತು. ಅಲ್ಲದೆ ಸಾಮಾನ್ಯ ವರ್ಗದಲ್ಲಿ ಅವರನ್ನು ಪರಿಗಣಿಸಲಾಯಿತು. ಮೂಲ ದಾಖಲಾತಿಯನ್ನು ಪುನರ್ ಪರಿಶೀಲಿಸಲು ಇನ್ನೊಂದು ಅವಕಾಶ ನೀಡುವುದಾಗಿ ಸಂದರ್ಶನದ ಸಂದರ್ಭದಲ್ಲಿ ತಿಳಿಸಲಾಯಿತು.

ಮೀಸಲಾತಿ ಪ್ರಮಾಣ ಪತ್ರದಲ್ಲಿ ದೋಷ ಇರುವ ಅಭ್ಯರ್ಥಿಗಳಿಗೆ 1998ರ ಜುಲೈ 21ರಂದು ಪುನರ್ ಪರಿಶೀಲನಾ ಸಂದರ್ಶನ ನಡೆಸುವುದಾಗಿ ಕೆಪಿಎಸ್‌ಸಿ ಪ್ರಕಟಿಸಿತು.

ಈ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ಕೂಡ ಪ್ರಕಟವಾಯಿತು. ಆದರೆ ಈ ಪಟ್ಟಿಯಲ್ಲಿ ಗೋಪಾಲ್ ಅವರ ನೋಂದಣಿ ಸಂಖ್ಯೆ ಇರಲಿಲ್ಲ. ಪುನರ್ ಪರಿಶೀಲನಾ ಸಂದರ್ಶನಕ್ಕೆ ಕರೆಯೂ ಬರಲಿಲ್ಲ. ತಕ್ಷಣವೇ ಗೋಪಾಲ್ ಅವರು ಕೆಪಿಎಸ್‌ಸಿಗೆ ಮನವಿ ಸಲ್ಲಿಸಿ ತಮ್ಮ ಪ್ರಮಾಣ ಪತ್ರವನ್ನೂ ಪುನರ್ ಪರಿಶೀಲಿಸಲು ಕೋರಿದರು. ಈ ಪತ್ರಕ್ಕೆ ಆಯೋಗ ಕೊಟ್ಟ ಉತ್ತರ ನೋಡಿ ಅವರಿಗೆ ಗಾಬರಿಯಾಯಿತು.

223 ಮಂದಿಯ ಪ್ರಮಾಣ ಪತ್ರಗಳನ್ನು ಪರಿಶೀಲಿಸಲಾಗಿದ್ದು ಅದರಲ್ಲಿ ಒಬ್ಬರು ಗೈರು ಹಾಜರಾಗಿದ್ದರಿಂದ ಅವರನ್ನು ಸಾಮಾನ್ಯ ವರ್ಗ ಎಂದು ಪರಿಗಣಿಸಲಾಗಿದೆ ಎಂದು ಉತ್ತರ ನೀಡಲಾಗಿತ್ತು.

ಪುನರ್ ಪರಿಶೀಲನಾ ಸಂದರ್ಶನಕ್ಕೆ ಅರ್ಹರಾದ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ಪತ್ರಿಕಾ ಜಾಹೀರಾತಿನಲ್ಲಿ ಪ್ರಕಟಿಸಿದ್ದರೂ ಅದರಲ್ಲಿ ಗೋಪಾಲ್ ಅವರ ನೋಂದಣಿ ಸಂಖ್ಯೆ ಇರಲಿಲ್ಲ.

ಕೆಪಿಎಸ್‌ಸಿ 223 ಮಂದಿಗೆ ಪುನರ್ ಪರಿಶೀಲನಾ ಸಂದರ್ಶನಕ್ಕೆ ಕರೆ ಕಳುಹಿಸಲಾಗಿದೆ ಎಂದು ಹೇಳಿದ್ದರೂ ಜಾಹೀರಾತಿನಲ್ಲಿ 222 ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಮಾತ್ರ ಪ್ರಕಟವಾಗಿತ್ತು. ಇದನ್ನು ಗೋಪಾಲ್ ಅವರು ರಾಜ್ಯಪಾಲರ ಗಮನಕ್ಕೆ ತಂದರು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆ ರಾಜ್ಯಪಾಲರು ಕೆಪಿಎಸ್‌ಸಿಗೆ ಸೂಚಿಸಿದರು. ಆದರೂ ಆಯೋಗದಿಂದ ಯಾವುದೇ ಉತ್ತರ ಬರಲಿಲ್ಲ.

`ನಾನು ಸಲ್ಲಿಸಿದ ಪ್ರವರ್ಗ-1 ಪ್ರಮಾಣ ಪತ್ರದಲ್ಲಿ ಯಾವುದೇ ದೋಷ ಇರಲಿಲ್ಲ. ಅದರ ಮೂಲ ಪ್ರತಿ ಈಗಲೂ ನನ್ನ ಬಳಿ ಇದೆ' ಎಂದು ಹೇಳುವ ಗೋಪಾಲ್ ತಮ್ಮನ್ನು ಪ್ರವರ್ಗ-1ರಲ್ಲಿಯೇ ಗುರುತಿಸಿದ್ದರೆ ತಮಗೆ ಮುಖ್ಯೋಪಾಧ್ಯಾಯ ಹುದ್ದೆ ಸಿಗುತ್ತಿತ್ತು. ಆದರೆ ಸಾಮಾನ್ಯ ವರ್ಗದಲ್ಲಿ ಗುರುತಿಸಿದ್ದರಿಂದ ಉದ್ಯೋಗ ಸಿಗಲಿಲ್ಲ' ಎಂದು ನೋವು ತೋಡಿಕೊಳ್ಳುತ್ತಾರೆ.

ಗೋಪಾಲ್ ಅವರಿಗೆ ಒಟ್ಟಾರೆ 555.5 ಅಂಕ ಬಂದಿತ್ತು. ಮಾಹಿತಿ ಹಕ್ಕು ಪ್ರಕಾರ ಆಯ್ಕೆ ಪಟ್ಟಿಯನ್ನು ಪಡೆದಾಗ ಅವರಿಗೆ ಆದ ಆಘಾತವೆಂದರೆ ಅವರಿಗಿಂತ ಕಡಿಮೆ ಅಂಕ ಪಡೆದ 38 ಮಂದಿ ಮುಖ್ಯೋಪಾಧ್ಯಾಯರಾಗಿ ಆಯ್ಕೆಯಾಗಿದ್ದರು. 483 ಅಂಕ ಪಡೆದವರಿಗೂ ಕೆಲಸ ಸಿಕ್ಕಿತ್ತು.

`ನಾನು ಉಪ್ಪಾರ ಜನಾಂಗಕ್ಕೆ ಸೇರಿದವನು. ನಮ್ಮ ಜನಾಂಗಕ್ಕೆ ಸೇರಿದವರೊಬ್ಬರು ಕೆಪಿಎಸ್‌ಸಿ ಸದಸ್ಯರಿದ್ದರು. ವೈವಾಹಿಕ ಸಂಬಂಧಕ್ಕೆ ಒಪ್ಪಿಕೊಂಡರೆ ಮುಖ್ಯೋಪಾಧ್ಯಾಯ ಹುದ್ದೆಯನ್ನು ನೀಡುವುದಾಗಿ ಅವರು ಮಧ್ಯವರ್ತಿಯೊಬ್ಬರಿಂದ ನನಗೆ ಹೇಳಿಸಿದ್ದರು. ಆದರೆ ನಾನು ಅದನ್ನು ನಿರಾಕರಿಸಿದೆ. ಅದಕ್ಕೇ ನನ್ನ ಮೀಸಲಾತಿ ಪ್ರಮಾಣ ಪತ್ರದಲ್ಲಿ ದೋಷ ಕಂಡುಬಂತು. ಆದರೆ ಯಾವ ದೋಷ ಎನ್ನುವುದನ್ನು ಅವರು ಸ್ಪಷ್ಟವಾಗಿ ಹೇಳದೆ ಪ್ರಮಾಣ ಪತ್ರವನ್ನು ತಿರಸ್ಕರಿಸಿದರು' ಎಂದು ಅವರು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ.

ತಮ್ಮ ವಯೋಮಿತಿ ಮೀರುತ್ತಿದ್ದು ಇನ್ನೊಮ್ಮೆ ತಾವು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಅವಕಾಶವಿಲ್ಲ. ಇದರಿಂದಾಗಿ ತಮಗೆ ಆದ ಅನ್ಯಾಯವನ್ನು ಸರಿಪಡಿಸಿಕೊಡಬೇಕು ಎಂದು ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.