ADVERTISEMENT

ಮೂರೂ ಪಕ್ಷಗಳ ಭವಿಷ್ಯಕ್ಕೆ ದಿಕ್ಸೂಚಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST

ಬೆಂಗಳೂರು/ಕೊಪ್ಪಳ: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ಸೋಮವಾರ ನಡೆಯಲಿದ್ದು ಈ ಚುನಾವಣೆಯ ಫಲಿತಾಂಶ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ನ ರಾಜಕೀಯ ಭವಿಷ್ಯಕ್ಕೆ ದಿಕ್ಸೂಚಿಯಾಗಲಿದೆ ಎಂದು ಅರ್ಥೈಸಲಾಗುತ್ತಿದೆ.

`ಆಪರೇಷನ್ ಕಮಲ~ದಿಂದಾಗಿ ಜೆಡಿಎಸ್ ಶಾಸಕ ಕರಡಿ ಸಂಗಣ್ಣ ರಾಜೀನಾಮೆ ನೀಡಿದ ಪರಿಣಾಮ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉಪ ಚುನಾವಣೆ ನಡೆಯುತ್ತಿದೆ. ಸೋಮವಾರ ಬೆಳಿಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗ ಮತದಾನಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದೇ 29ರಂದು ಮತ ಎಣಿಕೆ ನಡೆಯಲಿದೆ.

ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಬೇಕಾದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದ್ದು, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 210 ಮತಗಟ್ಟೆಗಳಿದ್ದು, 1,85,196 ಜನರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ.

ಬಿಜೆಪಿಯ ಕರಡಿ ಸಂಗಣ್ಣ, ಕಾಂಗ್ರೆಸ್ ಕೆ.ಬಸವರಾಜ ಹಿಟ್ನಾಳ್ ಹಾಗೂ ಜೆಡಿಎಸ್‌ನ ಪ್ರದೀಪ್‌ಗೌಡ ಮಾಲಿಪಾಟೀಲ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಆದರೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದ್ದು ಭಾನುವಾರವೂ ಮನೆ-ಮನೆಗೆ ತೆರಳಿ ಅಂತಿಮ ಸುತ್ತಿನ ಮತ ಯಾಚನೆಯಲ್ಲಿ ತೊಡಗಿದ್ದರು.

ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿರುವುದರಿಂದ ಬಿಜೆಪಿಯ ಆಂತರಿಕ ವಲಯದಲ್ಲೂ ಫಲಿತಾಂಶ ಏನಾಗಬಹುದು ಎಂಬ ಬಗ್ಗೆ ಕುತೂಹಲವಿದೆ. ಸದಾನಂದ ಗೌಡ ಅವರಿಗಿಂತ ಹೆಚ್ಚಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಬಣದವರಿಗೆ ಉಪ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ಸದಾನಂದ ಗೌಡರು ಕೊನೆಯ ಮೂರು ದಿನ ಮಾತ್ರ ಪ್ರಚಾರದಲ್ಲಿ ಭಾಗವಹಿಸಿದ್ದರೆ, ಯಡಿಯೂರಪ್ಪ ಅವರು ಒಂದು ವಾರ ಕ್ಷೇತ್ರದಲ್ಲಿ ಬಿಡಾರ ಹೂಡಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಪರವಾಗಿ ಪ್ರಚಾರ ನಡೆಸಿದ್ದಾರೆ. ಅವರ ಗುಂಪಿನ ಸಚಿವರು, ಮುಖಂಡರು ಸಹ ಸಾಥ್ ನೀಡಿದ್ದಾರೆ. ಅಧಿಕಾರ ಕಳೆದುಕೊಂಡ ನಂತರ ಯಡಿಯೂರಪ್ಪ ಅವರ ವರ್ಚಸ್ಸು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದು ಸಹ ಈ ಫಲಿತಾಂಶದ ಮೂಲಕ ಗೊತ್ತಾಗಲಿದೆ.

ಇದು ಉಪ ಚುನಾವಣೆಯಾದರೂ, ಇಡೀ ಸಚಿವ ಸಂಪುಟ ಒಂದು ವಾರ ಕಾಲ ಕೊಪ್ಪಳದಲ್ಲಿ ಬಿಡಾರ ಹೂಡಿ ಪ್ರಚಾರ ನಡೆಸಿದ್ದು ನೋಡಿದರೆ ಬಿಜೆಪಿ ಈ ಚುನಾವಣೆಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎಂಬುದು ಗೊತ್ತಾಗುತ್ತದೆ. ಇನ್ನು ಕಾಂಗ್ರೆಸ್, ಜೆಡಿಎಸ್ ಸಹ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಗೆಲುವಿನ ಮಾಲೆ ಯಾರ ಕೊರಳಿಗೆ ಬೀಳುತ್ತದೆ ಎಂಬ ಕುತೂಹಲ ತೀವ್ರವಾಗಿದೆ. ಈ ನಿಟ್ಟಿನಲ್ಲಿ ಮೂರೂ ಪಕ್ಷಗಳು ಸಮಬಲದ ಪೈಪೋಟಿ ನೀಡಿವೆ.

ಆಡಳಿತಾರೂಢ ಬಿಜೆಪಿಗೆ ವಿಧಾನ ಸಭೆಯಲ್ಲಿ ಸ್ಪಷ್ಟಬಹುಮತ ಇರುವುದರಿಂದ ಉಪ ಚುನಾವಣೆಯ ಫಲಿತಾಂಶ ಸರ್ಕಾರದ ಅಸ್ತಿತ್ವದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಆದರೆ ಗೆದ್ದರೆ ಮತ್ತಷ್ಟು ವಿಶ್ವಾಸದಿಂದ ಮುನ್ನಡೆಯಲು ಸಹಕಾರಿಯಾಗಲಿದೆ. ಸೋತರೆ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಲು ಪ್ರತಿಪಕ್ಷಗಳಿಗೆ ಇನ್ನಷ್ಟು ಬಲ ಬರಲಿದೆ.

ಅಬ್ಬರದ ಪ್ರಚಾರ: ಉಪ ಚುನಾವಣೆಯ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ಕ್ಷೇತ್ರದಲ್ಲಿ ಪ್ರಚಾರದ ಭರಾಟೆ ಜೋರಾಗಿತ್ತು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮತದಾರರ ಮನವೊಲಿಸುವ ಯತ್ನವಾಗಿ ಬಹಿರಂಗ ಸಭೆ, ಪಾದಯಾತ್ರೆ ನಡೆಸಿದರು. ಬಿಜೆಪಿ ಮತ್ತು ಜೆಡಿಎಸ್ ಮಾತ್ರ `ರೋಡ್ ಶೋ~ ನಡೆಸಿ ತಮ್ಮ ಶಕ್ತಿ ಪ್ರದರ್ಶಿಸಿದವು.

ಆಡಳಿತಾರೂಢ ಬಿಜೆಪಿ ಸರ್ಕಾರದ ಸಚಿವರು, ಶಾಸಕರು, ಮುಖಂಡರು ಅಬ್ಬರದ ಪ್ರಚಾರದಲ್ಲಿ ಮತ ಯಾಚನೆ ಮಾಡಿದರೆ, ಇದಕ್ಕೆ ತಾವೇನೂ ಕಡಿಮೆ ಇಲ್ಲ ಎಂಬಂತೆ ಕಾಂಗ್ರೆಸ್ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರನ್ನು ಪ್ರಚಾರಕ್ಕೆ ಕರೆಸಿತ್ತು.

ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ ಪರಿಣಾಮ ಕಿವಿಗಡಚಿಕ್ಕುವ ಧ್ವನಿವರ್ಧಕಗಳು, ಕಟೌಟ್, ಬ್ಯಾನರ್, ಫ್ಲೆಕ್ಸ್‌ಗಳ ಹಾವಳಿ ಇರಲಿಲ್ಲ. ಆದರೆ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಹಣ, ಮದ್ಯ, ಕಾಣಿಕೆಗಳನ್ನು ಹಂಚಿರುವ ಆರೋಪಗಳು ವ್ಯಾಪಕವಾಗಿ ಕೇಳಿಬಂದಿವೆ.

ಪ್ರಚಾರಕ್ಕಾಗಿ ಹೊರಗಿನಿಂದ ಬಂದಿದ್ದ ವಿವಿಧ ಪಕ್ಷಗಳ ಮುಖಂಡರೆಲ್ಲ ಶನಿವಾರವೇ ಕ್ಷೇತ್ರವನ್ನು ಬಿಟ್ಟು ತೆರಳಿದ್ದಾರೆ. ಕೆಲಸದ ನಿಮಿತ್ತ ಕ್ಷೇತ್ರದಿಂದ ಹೊರಗೆ ತೆರಳಿದ್ದ ಕೂಲಿ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಅವರನ್ನು ಕರೆತರಲಾಗಿದೆ. ಚುನಾವಣಾ ಸಿಬ್ಬಂದಿ ಭಾನುವಾರ ಮಧ್ಯಾಹ್ನವೇ ಚುನಾವಣಾ ಸಾಮಗ್ರಿಗಳೊಂದಿಗೆ ಮತಗಟ್ಟೆಗಳನ್ನು ತಲುಪಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.