ADVERTISEMENT

ಮೈಸೂರಿನಲ್ಲಿ ಗರಿಗೆದರಿದ ಪ್ರವಾಸೋದ್ಯಮ

ಎಂ.ರವಿ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ನಡೆದ ಪ್ರತಿಭಟನೆಯಿಂದ ಪ್ರವಾಸೋದ್ಯಮದ ಮೇಲೆ ಭಾರಿ ಹೊಡೆತ ಬಿದ್ದಿತ್ತು. ಇದೀಗ ಹೋರಾಟದ ಕಾವು ತಣ್ಣಗಾಗಿರುವುದರಿಂದ ಸಾಂಸ್ಕೃತಿಕ ನಗರಿ  ಮೈಸೂರಿನಲ್ಲಿ ಪ್ರವಾಸೋದ್ಯಮ ಮತ್ತೆ ಗರಿಗೆದರಿದೆ.

 ಮೈಸೂರು- ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ರೈತರು ನಿತ್ಯ ವಾಹನ ತಡೆ ಮಾಡುತ್ತಿದ್ದುದರಿಂದ ಪ್ರವಾಸಿಗರು ಮೈಸೂರಿನತ್ತ ಮುಖ ಮಾಡುತ್ತಿರಲಿಲ್ಲ. ಹೀಗಾಗಿ ಪ್ರವಾಸಿ ತಾಣಗಳಾದ ವಿಶ್ವವಿಖ್ಯಾತ ಅರಮನೆ, ಶ್ರೀಚಾಮರಾಜೇಂದ್ರ ಮೃಗಾಲಯ ಮತ್ತು ಚಾಮುಂಡಿ ಬೆಟ್ಟಗಳಲ್ಲಿ ಪ್ರವಾಸಿಗರ ಸಂಖ್ಯೆಯು ಇತ್ತೀಚೆನ ದಿನಗಳಲ್ಲಿ ಗಮನಾರ್ಹವಾಗಿ ಕ್ಷೀಣಿಸಿತ್ತು.

ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದರಿಂದ ಕಡ್ಲೆಕಾಯಿ ವ್ಯಾಪಾರಿಯಿಂದ ಹಿಡಿದು ಹೋಟೆಲ್ ಮಾಲೀಕರವರೆಗೆ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದರು.  ಕಾವೇರಿ ಹೋರಾಟ ನಿಲ್ಲದಿದ್ದರೆ ಈ ಬಾರಿ ದಸರಾದಲ್ಲಿ ನಷ್ಟ ಕಟ್ಟಿಟ್ಟ ಬುತ್ತಿ ಎಂದು ವ್ಯಾಪಾರಿಗಳು ಚಿಂತಾಕ್ರಾಂತರಾಗಿದ್ದರು.

ಈಗ ಕಾವೇರಿ ಕೊಳ್ಳದಲ್ಲಿ ಹೋರಾಟದ ಕಾವು ಕಡಿಮೆಯಾಗುತ್ತಿದ್ದಂತೆ ಪ್ರವಾಸಿಗರು ಮೈಸೂರಿನತ್ತ ಬರುತ್ತಿದ್ದಾರೆ.  ಮಂಕು ಕವಿದಿದ್ದ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಂಡಿದೆ. ಶನಿವಾರ ಮತ್ತು ಭಾನುವಾರ ರಜಾ ದಿನಗಳಂದು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ವ್ಯಾಪಾರ  ಚುರುಕುಗೊಂಡಿತ್ತು.

ಮೈಸೂರು ಅರಮನೆಗೆ ಸೆ.15 ರಂದು 9,841, ಸೆ. 16 ರಂದು 11,339 ಮಂದಿ ಭೇಟಿ ನೀಡಿದ್ದರು. ನಂತರ ಕಾವೇರಿ ಹೋರಾಟ ಆರಂಭವಾದ ಕಾರಣ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಸೆ.30 ರಂದು 11,084 ಪ್ರವಾಸಿಗರು ಅರಮನೆಗೆ ಭೇಟಿ ನೀಡಿದ್ದನ್ನು ಹೊರತುಪಡಿಸಿದರೆ ಅಕ್ಟೋಬರ್ 3 ರವರೆಗೆ ಪ್ರವಾಸಿಗರ ಸಂಖ್ಯೆ 5 ಅಂಕಿ ದಾಟಲೇ ಇಲ್ಲ. ಅಕ್ಟೋಬರ್ ಎರಡನೇ ವಾರದಲ್ಲಂತೂ  ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆ ಇತ್ತು.

ಬದಲಾದ ಚಿತ್ರಣ: ಈಗ ಚಿತ್ರಣ ಬದಲಾಗಿದೆ. ಅರಮನೆ, ಮೃಗಾಲಯಗಳಿಗೆ ಭಾನುವಾರ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ  ನೀಡಿದ್ದರು.  ತಮಿಳುನಾಡು ನೋಂದಣಿಯ ಪ್ರವಾಸಿ ವಾಹನಗಳನ್ನು ಹೊರತುಪಡಿಸಿ  ಪ್ರವಾಸಿ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು.

ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯ ಮತ್ತು ಬೃಂದಾವನ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು. ಹೋರಾಟ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 14 ರಿಂದಲೇ ಜಾರಿಗೆ ಬರುವಂತೆ ನಿರ್ಬಂಧ  ಹಿಂತೆಗೆದುಕೊಳ್ಳಲಾಗಿದೆ. ಹಾಗಾಗಿ ಮೈಸೂರಿಗೆ ಬರುವ  ಪ್ರವಾಸಿಗರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.


 ಅರಮನೆಯಲ್ಲಿ ಭಾನುವಾರ ಪ್ರವಾಸಿಗರ ಸಂಖ್ಯೆ ಸಾಕಷ್ಟಿತ್ತು ಎಂದು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT