ADVERTISEMENT

ಮೋದಿ ವಿರುದ್ಧ ಕೇಜ್ರಿವಾಲ್‌ ಸಡ್ಡು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 10:25 IST
Last Updated 17 ಮಾರ್ಚ್ 2014, 10:25 IST

ಬೆಂಗಳೂರು: ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವಾರಾಣಸಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಘೋಷಿಸಿರುವ ಬೆನ್ನಲ್ಲೇ, ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ ಕೇಜ್ರಿವಾಲ್‌ ಅವರು ಮೋದಿ ವಿರುದ್ಧ ತೊಡೆ ತಟ್ಟಿದ್ದಾರೆ. ಮೋದಿ ವಿರುದ್ಧ ಕಣಕ್ಕೆ ಇಳಿಯುವ ಸ್ಪಷ್ಟ ಸೂಚನೆ ನೀಡಿದರು.

‘ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ವಿರುದ್ಧ ಸ್ಪರ್ಧಿಸುವಂತೆ ಪಕ್ಷ ಸೂಚನೆ ನೀಡಿದೆ. ನಾನು ಇದೇ 23ರಂದು ವಾರಾಣಸಿಯಲ್ಲಿ ರ್‍ಯಾಲಿ ನಡೆಸುತ್ತೇನೆ. ಅಲ್ಲಿನ ಜನ ಹೇಳಿದರೆ ಮೋದಿ ವಿರುದ್ಧ ಕಣಕ್ಕಿಳಿಯುತ್ತೇನೆ’ ಎಂದು ಕೇಜ್ರಿವಾಲ್‌ ಭಾನುವಾರ ಹೇಳಿದರು.

ಮೋದಿ ಅವರು ಗುಜರಾತ್‌­ನಿಂದಲೂ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಹೇಳಿದೆ. ಬೆಂಗಳೂರಿನಲ್ಲಿ ಎಎಪಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಕೇಜ್ರಿವಾಲ್‌, ‘ದೇಶದಲ್ಲಿ ಮೋದಿ ಪರ ಅಲೆ ಇಲ್ಲ, ಎಎಪಿ ಪರ ಒಲವಿದೆ’ ಎಂದು ಹೇಳಿದರು.

ಮೋದಿ ವಿರುದ್ಧ ಕಿಡಿ: ಕೇಜ್ರಿವಾಲ್‌ ಅವರು ತಮ್ಮ ಭಾಷಣದಲ್ಲಿ ಬಿಜೆಪಿ, ಕಾಂಗ್ರೆಸ್‌, ಎಸ್‌ಪಿ, ಬಿಎಸ್‌ಪಿ ವಿರುದ್ಧ ಕಿಡಿ ಕಾರಿದರು. ಅದರಲ್ಲೂ ಮುಖ್ಯವಾಗಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘ಉದ್ಯಮಿ ಮುಕೇಶ್‌ ಅಂಬಾನಿ ಅವರ ಒಂದು ಕಿಸೆಯಲ್ಲಿ ರಾಹುಲ್‌ ಮತ್ತೊಂದು ಕಿಸೆಯಲ್ಲಿ ಮೋದಿ ಇದ್ದಾರೆ.

ಇವರಿಬ್ಬರಲ್ಲಿ ಯಾರಿಗೇ ಮತ ನೀಡಿದರೂ ವ್ಯತ್ಯಾಸ ಆಗುವುದಿಲ್ಲ. ಅಂಬಾನಿ ಅವರೇ ಸರ್ಕಾರ ನಡೆಸುತ್ತಾರೆ’ ಎಂದು ಆರೋಪಿಸಿದರು. ಕೆಲವು ಟಿ.ವಿ. ವಾಹಿನಿಗಳು ಮತ್ತು ವ್ಯಕ್ತಿಗಳು ಮೋದಿ ಅವರನ್ನು ಪ್ರಧಾನಿ­ಯನ್ನಾಗಿ ಮಾಡಲು ಪಿತೂರಿ ನಡೆಸಿದ್ದಾರೆ. ಗುಜರಾತ್‌ ಸರ್ಕಾರದಲ್ಲಿ ಹಣ ಕೊಡದಿದ್ದರೆ ಯಾವ ಕೆಲಸವೂ ಆಗುವುದಿಲ್ಲ.

ಆದರೆ ಮೋದಿ ಅವರು ಗುಜರಾತ್‌ ರಾಜ್ಯವನ್ನು ಅಭಿವೃದ್ಧಿ­ಪಡಿಸಿದ್ದಾರೆ ಎಂದು ಮಾಧ್ಯಮಗಳು ಬಿಂಬಿಸುತ್ತಿವೆ. ಗುಜರಾತ್‌ ಬಗೆಗಿನ ಸತ್ಯ ಸಂಗತಿಗಳನ್ನು ತೋರಿಸುವ ಧೈರ್ಯ­ವನ್ನು ಮಾಧ್ಯಮಗಳು ಪ್ರದರ್ಶಿಸ­ಲಿವೆಯೇ ಎಂದು ಕೇಜ್ರಿವಾಲ್‌ ಪ್ರಶ್ನಿಸಿದರು.

ADVERTISEMENT

ಮೋದಿ ವಿರುದ್ಧ ಕೇಜ್ರಿವಾಲ್‌ ಸಡ್ಡು
ಮೋದಿ ಸಂಪುಟದಲ್ಲಿರುವ ಬಾಬುಭಾಯ್‌ ಬುಖಾ­ರಿಯಾ ಅವರು ಜಾಮೀನಿನ ಮೇಲಿದ್ದಾರೆ. ಪುರುಷೋತ್ತಮ ಸೋಲಂಕಿ ವಿರುದ್ಧ ಆರೋಪಗಳಿವೆ. ರಾಬರ್ಟ್‌ ವಾದ್ರಾ (ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ) ಅವರು ರೈತರಿಂದ ಜಮೀನು ಕಿತ್ತುಕೊಂಡಂತೆಯೇ ಮೋದಿ ಕೂಡ ಜಮೀನು ಕಿತ್ತುಕೊಳ್ಳುತ್ತಾರೆ. ಇವರಿಬ್ಬರ ನಡುವೆ ವ್ಯತ್ಯಾಸ ಏನಿದೆ? ಅಧಿಕಾರಿ – ರಾಜಕಾರಣಿ – ಉದ್ಯಮಿ ನಡುವಣ ಒಳ ಒಪ್ಪಂದ ಏರ್ಪಡುವ ವ್ಯವಸ್ಥೆಯ ಪ್ರತಿನಿಧಿ ಮೋದಿ ಎಂದು ದೂರಿದರು.

‘ಗುಜರಾತ್‌ ರೈತರ ಪರಿಸ್ಥಿತಿಯನ್ನು ಇತರ ಪ್ರದೇಶಗಳ ರೈತರು ತಿಳಿದುಕೊಂಡರೆ ಅವರಲ್ಲಿ ಯಾರೂ ಮೋದಿ ಅವರಿಗೆ ಮತ ನೀಡುವುದಿಲ್ಲ. ಮೋದಿ ಅವರನ್ನು ಮಾಧ್ಯಮಗಳು ಪ್ರಶ್ನಿಸುವುದಿಲ್ಲ. ಆದರೆ ನಾನು ಎಷ್ಟು ಬೆಡ್‌ ರೂಂ ಇರುವ ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂಬುದನ್ನು ಪ್ರಸಾರ ಮಾಡುತ್ತವೆ’ ಎಂದು ವ್ಯಂಗ್ಯವಾಡಿದರು.

ರಾಹುಲ್‌ ಮತ್ತು ಮೋದಿ ಹೆಲಿಕಾಪ್ಟರ್‌ನಲ್ಲಿ ಬಂದು ವೇದಿಕೆ­ಯಿಂದ ಭಾಷಣ ಮಾಡಿ ಹೆಲಿಕಾಪ್ಟರ್‌­ನಲ್ಲೇ ತೆರಳುತ್ತಾರೆ. ಇದು ರಾಜ ಮಹಾರಾಜರ ಕಾಲವಲ್ಲ. ಅವರು ಜನಸಾಮಾನ್ಯರ ಜೊತೆ ಬೆರೆಯಬೇಕು. ಕಾಂಗ್ರೆಸ್‌ ಮತ್ತು ಬಿಜೆಪಿಗಳೆರಡೂ ಭ್ರಷ್ಟಾಚಾರದ ಸಂಕೇತಗಳಾಗಿವೆ ಎಂದರು.

ಪ್ರಧಾನಿ ಮನಮೋಹನ್‌ ಸಿಂಗ್‌, ಸೋನಿಯಾ ಗಾಂಧಿ ಮತ್ತು ರಾಹುಲ್‌ ಅವರು ಕಳೆದ 10 ವರ್ಷಗಳಲ್ಲಿ ಇಲ್ಲಿಂದ ಸ್ವಿಸ್‌ ಬ್ಯಾಂಕ್‌ಗೆ ಕೊಂಡೊಯ್ದ ಹಣ ಬ್ರಿಟಿಷರು ಭಾರತದಿಂದ ಲೂಟಿ ಹೊಡೆದ ಸಂಪತ್ತಿಗಿಂತಲೂ ಹೆಚ್ಚಿರ­ಬಹುದು ಎಂದು ಆರೋಪಿಸಿದರು.
ರಾಜ್ಯ ಸರ್ಕಾರಕ್ಕೆ ತರಾಟೆ: ರಾಜ್ಯದಲ್ಲಿ ಬಿಜೆಪಿ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಕೂಡ ಭ್ರಷ್ಟಾಚಾರದ ಕಳಂಕ ಹೊತ್ತಿರುವ ಡಿ.ಕೆ. ಶಿವಕುಮಾರ್‌ ಮತ್ತು ಆರ್‌. ರೋಷನ್‌ ಬೇಗ್‌ ಅವರಿಗೆ ಸಚಿವ ಸ್ಥಾನ ನೀಡಿದೆ ಎಂದು ಜರಿದರು.

ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ, ಮಂತ್ರಿಗಳಾಗಿದ್ದ ಬಿ.ಎಸ್‌. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಸಚಿವರಾಗಿದ್ದ ಕೃಷ್ಣಯ್ಯ ಶೆಟ್ಟಿ, ಹರತಾಳು ಹಾಲಪ್ಪ, ಜಿ.ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು, ಆನಂದ ಸಿಂಗ್‌, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಹೆಸರು ಓದಿದ ಕೇಜ್ರಿವಾಲ್‌, ‘ಇವರು ಭ್ರಷ್ಟರು ಹೌದೋ ಅಲ್ಲವೋ ಎಂಬುದನ್ನು ನೀವೇ ಹೇಳಿ’ ಎಂದರು. ಜನ ‘ಹೌದು’ ಎಂದರು.

‘ಕನಕಪುರದ ಪಾಳೇಗಾರ’
ಸಮಾವೇಶದಲ್ಲಿ ಪಾಲ್ಗೊಂಡ ಸಮಾಜ ಪರಿವರ್ತನ ಸಮುದಾಯದ ಮುಖಂಡ ಎಸ್‌.ಆರ್‌. ಹಿರೇಮಠ, ‘ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಳ್ಳಾರಿಯ ಪಾಳೇಗಾರ­­ರೊಬ್ಬರು ಸಚಿವರಾಗಿದ್ದರು. ಈಗಿನ ಸರ್ಕಾರದಲ್ಲಿ ಕನಕಪುರದ  ಪಾಳೇಗಾರ ಡಿ.ಕೆ. ಶಿವಕುಮಾರ್‌ ಪಕ್ಷದ ವರಿಷ್ಠರಿಂದ ಒತ್ತಡ ತಂದು ಸಚಿವ ಸ್ಥಾನ ಗಿಟ್ಟಿಸಿದ್ದಾರೆ’ ಎಂದು ಟೀಕಿಸಿದರು. ಸ್ವಾತಂತ್ರ್ಯ ಹೋರಾಟ­ಗಾರ ಎಚ್‌.­ಎಸ್‌. ದೊರೆಸ್ವಾಮಿ, ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾಗಿದ್ದ ವಿ. ಬಾಲಸುಬ್ರ­ಮಣಿಯನ್‌, ಜನ ಸಂಗ್ರಾಮ ಪರಿಷತ್ತಿನ ರಾಘವೇಂದ್ರ ಕುಷ್ಟಗಿ ಮತ್ತಿತರರು ವೇದಿಕೆಯಲ್ಲಿದ್ದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಜಟಾಪಟಿ
ದೊರೆಸ್ವಾಮಿ ಅವರು ಭಾಷಣ ಮಾಡುತ್ತಿದ್ದ ವೇಳೆ, ಇಂಗ್ಲಿಷ್‌ ಪತ್ರಿಕೆಯ ಛಾಯಾಗ್ರಾಹಕರೊಬ್ಬರನ್ನು ಎಎಪಿ ಕಾರ್ಯಕರ್ತರು ಎನ್ನಲಾದ ಕೆಲವರು ನಿಂದಿಸಿದರು. ಇದು ಮಾಧ್ಯಮ ಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಯಿತು. ಎಎಪಿ ಕಾರ್ಯಕರ್ತರು ಮತ್ತು ಮಾಧ್ಯಮ ಪ್ರತಿನಿಧಿಗಳ ನಡುವೆ ಒಂದೆರಡು ನಿಮಿಷಗಳ ಕಾಲ ಮಾತಿನ ಚಕಮ­ಕಿಯೂ ನಡೆಯಿತು. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.