ADVERTISEMENT

ಯಡಿಯೂರಪ್ಪಗೆ ಸೂಕ್ತ ಸ್ಥಾನಮಾನ: ಶಾಸಕರ ಸಹಿ ಸಂಗ್ರಹಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹೇರಲು ನಿರ್ಧರಿಸಿರುವ ಅವರ ಬೆಂಬಲಿಗ ಶಾಸಕರು ಸಹಿ ಸಂಗ್ರಹಕ್ಕೆ ಚಾಲನೆ ನೀಡಿದ್ದಾರೆ.

ವಿಧಾನಸಭೆ ಮೊಗಸಾಲೆಯಲ್ಲಿ ಸಹಿ ಸಂಗ್ರಹಕ್ಕೆ ಬುಧವಾರ ಚಾಲನೆ ನೀಡಿದ್ದು, ಸೋಮವಾರದವರೆಗೂ ಮುಂದುವರಿಯಲಿದೆ. ಮಂಗಳವಾರ ಕೆಲ ಪ್ರಮುಖರು ಸಭೆ ಸೇರಿ ಮುಂದಿನ ನಡೆ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಗೊತ್ತಾಗಿದೆ.

ಶಾಸಕರಾದ ಜಗದೀಶ ಮೆಟಗುಡ್, ವಾಲ್ಮೀಕಿ ನಾಯಕ, ಅಪ್ಪು ಪಟ್ಟಣಶೆಟ್ಟಿ, ದೊಡ್ಡಪ್ಪಗೌಡ ಪಾಟೀಲ, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಇತರರು ಸಹಿ ಸಂಗ್ರಹಕ್ಕೆ ಚಾಲನೆ ನೀಡಿದ್ದಾರೆ ಎನ್ನಲಾಗಿದೆ. ಶಾಸಕರ ಸಹಿ ಮಾತ್ರವಲ್ಲದೆ, ಸಂಸದರು, ಮಾಜಿ ಸಂಸದರು ಮತ್ತು ಮಾಜಿ ಶಾಸಕರ ಸಹಿಗಳನ್ನೂ ಸಂಗ್ರಹಿಸಲಿದ್ದಾರೆ.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಪಟ್ಟುಹಿಡಿಯುವ ಬದಲಿಗೆ ಸೂಕ್ತ ಸ್ಥಾನಮಾನಕ್ಕೆ ಆಗ್ರಹಿಸಲಿದ್ದಾರೆ ಎನ್ನಲಾಗಿದೆ. ಮಂಗಳವಾರದ ನಂತರ ಇವರು ಸಹಿ ಸಂಗ್ರಹಣೆಯ ವಿವರಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಕಳುಹಿಸಲಿದ್ದಾರೆ. ಗಡ್ಕರಿ ಅವರನ್ನು ರಾಜ್ಯಕ್ಕೆ ಆಹ್ವಾನಿಸಿ, ಶಾಸಕರ ಅಭಿಪ್ರಾಯ ತಿಳಿಸಲು ನಿರ್ಧರಿಸಲಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.