ADVERTISEMENT

ಯುವಜನ, ಮಹಿಳೆಯರಿಗೆ ಆದ್ಯತೆ: ಪರಮೇಶ್ವರ್

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 19:30 IST
Last Updated 14 ಜುಲೈ 2012, 19:30 IST

ಬಳ್ಳಾರಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಯುವಕರಿಗೆ ಹಾಗೂ ಮಹಿಳೆಯರಿಗೆ ಆದ್ಯತೆ ನೀಡಲು ನಿರ್ಧರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ತಿಳಿಸಿದರು.

ವಿವಿಧ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಕೋರುವ ನಿಟ್ಟಿನಲ್ಲಿ ಪಕ್ಷದ ವತಿಯಿಂದ ನಗರದಲ್ಲಿ ಶನಿವಾರ ಆರಂಭಿಸಲಾದ ಬೈಕ್ ರ‌್ಯಾಲಿಗೆ ಚಾಲನೆ ನೀಡುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ 25,000 ಮತಗಳ ಅಂತರದಲ್ಲಿ ಸೋತವರಿಗೆ ಹಾಗೂ ಅನೇಕ ಚುನಾವಣೆಗಳಲ್ಲಿ ಅವಕಾಶ ಪಡೆದೂ ಗೆಲ್ಲದವರಿಗೆ ಈ ಬಾರಿ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ. 500 ಮತಗಳ ಅಂತರದ್ಲ್ಲಲಿ ಸೋಲುಂಡಿರುವ ಅನೇಕ ಮುಖಂಡರಿದ್ದು, ಅಂಥವರಿಗೆ ಟಿಕೆಟ್ ನಿರಾಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬರಗಾಲ ಬಗ್ಗೆ ಚರ್ಚೆ:  ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನದಲ್ಲಿ ಪಕ್ಷವು ರಾಜ್ಯದಲ್ಲಿ ತಲೆದೋರಿರುವ ಬರಗಾಲ ಪರಿಸ್ಥಿತಿ ಕುರಿತು ಪ್ರಧಾನವಾಗಿ ಚರ್ಚಿಸಲಿದೆ. ಸರ್ಕಾರ ನಡೆಸುತ್ತಿರುವವರು ಬರಗಾಲ ಪರಿಹಾರ ಕಾಮಗಾರಿ ಕೈಗೊಳ್ಳದೆ ಆಂತರಿಕ ಕಚ್ಚಾಟದಲ್ಲಿ ತೊಡಗಿದ್ದು, ಜನರ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಅಲ್ಪಸಂಖ್ಯಾತರ ಸಮಾವೇಶ ಏರ್ಪಡಿಸಿರುವ ಹಿನ್ನೆಲೆಯಲ್ಲಿ  ಜೆಡಿಎಸ್‌ನ ಮುಖಂಡ ಜಮೀರ್ ಅಹಮದ್, ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಲ್ಪ ಸಂಖ್ಯಾತ ಅಭ್ಯರ್ಥಿಯನ್ನು ಬೆಂಬಲಿಸದೆ ಸೋಲುವಂತೆ ಮಾಡಿದೆ ಎಂದು ಆರೋಪಿಸಿದ್ದಾರೆ. ಆದರೆ, ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಜೆಡಿಎಸ್ ಪಕ್ಷವೇ ಕಾಂಗ್ರೆಸ್‌ನ ಇಕ್ಬಾಲ್ ಅಹಮದ್ ಸರಡಗಿ ಅವರ ಸೋಲಿಗೆ ಕಾರಣ ಎಂದು ಅವರು ತಿರುಗೇಟು ನೀಡಿದರು.

ಲೋಕಾಯುಕ್ತ ನೇಮಿಸಲಿ: ಸರ್ಕಾರ ಈವರೆಗೂ ಲೋಕಾಯುಕ್ತರನ್ನು ನೇಮಕ ಮಾಡದಿರುವುದು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಬಿಜೆಪಿಯ ಅನೇಕ ಮುಖಂಡರ ವಿರುದ್ಧ ಇರುವ ಆರೋಪಗಳಿಗೆ ಸಂಬಂಧಿಸಿದಂತೆ `ಬಿ- ರಿಪೋರ್ಟ್~ ಹಾಕಿಸಿಕೊಳ್ಳುವುದರಲ್ಲೇ ಸರ್ಕಾರ ಯತ್ನಿಸುತ್ತಿದೆ ಎಂದು  ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.