ಮಂಗಳೂರು: ನಗರದ ಸೈಂಟ್ ಆ್ಯನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ರಂಜಾನ್ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಮುಸ್ಲಿಂ ವಿದ್ಯಾರ್ಥಿನಿಯರು ಆಗ್ರಹಿಸಿದ ಹಿನ್ನೆಲೆಯಲ್ಲಿ ಸೋಮವಾರ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಪಾಲಕರು ಮತ್ತು ಉಪನ್ಯಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.
ರಂಜಾನ್ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಉಪವಾಸ ಆಚರಿಸುತ್ತಿರುವುದರಿಂದ ದಿನಕ್ಕೆ ಐದು ಬಾರಿ ಪ್ರಾರ್ಥನೆ ಸಲ್ಲಿಸಬೇಕು ಎಂಬ ಧಾರ್ಮಿಕ ನಿಯಮವಿದೆ. ಆದ್ದರಿಂದ ಮಧ್ಯಾಹ್ನದ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಶನಿವಾರ ವಿದ್ಯಾರ್ಥಿನಿಯರು ಆಗ್ರಹಿಸಿದ್ದರು ಎಂದು ವಿದ್ಯಾರ್ಥಿನಿಯರ ಪೋಷಕರು `ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ಸೋಮವಾರ ಪಾಲಕರು ಪ್ರಾಂಶುಪಾಲರನ್ನು ಭೇಟಿಯಾಗಲು ಪ್ರಯತ್ನಿಸಿದ್ದರು. ಆದರೆ ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಯಬಹುದು ಎಂಬ ಹಿನ್ನೆಲೆಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾದ್ದರಿಂದ ಮಧ್ಯಾಹ್ನ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಬಳಿಕ ಪ್ರಕರಣವನ್ನು ಸಂಧಾನದ ಮೂಲಕ ಬಗೆಹರಿಸಲಾಗಿದೆ ಎಂದು ಪಾಂಡೇಶ್ವರ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.
ಶಿಕ್ಷಣ ಸಂಸ್ಥೆಯ ನಿಯಮಗಳ ಪ್ರಕಾರ ಇಂತಹ ಚಟುವಟಿಕೆಗಳಿಗೆ ಕಾಲೇಜು ಕ್ಯಾಂಪಸ್‌ನಲ್ಲಿ ಅವಕಾಶ ಹಿಂದೆಯೂ ಇದ್ದಿಲ್ಲ. ಮುಂದೆಯೂ ಅವಕಾಶ ಕಲ್ಪಿಸಲಾಗುವುದಿಲ್ಲ ಎಂದು ಕಾಲೇಜಿನ ಆಡಳಿತ ಮಂಡಳಿ `ಪ್ರಜಾವಾಣಿ'ಗೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.